ಚಿಕ್ಕಮಗಳೂರು :
ರಾಷ್ಟ್ರಪತಿಗಳ ಚುನಾವಣೆಗೆ ಸಿಟಿ ರವಿ ಉಸ್ತುವಾರಿ :
ನಿಗದಿಯಾಗಿರುವ ಭಾರತದ ರಾಷ್ಟ್ರಪತಿಗಳ ಚುನಾವಣೆಯನ್ನು ಎದುರಿಸಲು ಬಿಜೆಪಿಯು ಉಸ್ತುವಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಈ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿ.ಟಿ ರವಿ ಅವರ ಹೆಸರೂ ಇದೆ. ಗೋವಾ ಚುನಾವಣೆಗೂ ಕೂಡ ಸಿಟಿ ರವಿ ಅವರು ಉಸ್ತುವಾರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಮಾಜಿ ಶಾಸಕ ಡಿ. ಎನ್ ಜೀವರಾಜ್ ವಿರುದ್ಧ ಜಾಮೀನು ರಹಿತ ವಾರೆಂಟ್
ನರಸಿಂಹರಾಜಪುರ : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಜಿ ಶಾಸಕರಾದ ಡಿ.ಎನ್ ಜೀವರಾಜ್ ವಿರುದ್ಧ ಹಳೆಯ ಪ್ರಕರಣವೊಂದಕ್ಕೆ ಸಾಕ್ಷಿಹೇಳಲು ಪದೇ ಪದೇ ಗೈರಾಗುತ್ತಿರುವ ಕಾರಣಕ್ಕೆ ಸಂಬಂಧಿಸಿದಂತೆ ನರಸಿಂಹರಾಜಪುರದ ಸಿವಿಲ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ನ್ನು ಹೊರಡಿಸಿದೆ. ಯಾರೋ ತಮಗೆ ಹಣದ ಬೇಡಿಕೆಯಿಟ್ಟು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಡಿ.ಎನ್ ಜೀವರಾಜ್ ದೂರು ದಾಖಲಿಸಿದ್ದರು. ಈ ಪ್ರಕರಣದ ಕುರಿತಾಗಿ ಸಾಕ್ಷಿ ಹೇಳಲು ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಿತ್ತು ಆದರೆ ಅವರು 2020 ರಿಂದಲೂ ನ್ಯಾಯಾಲಯಕ್ಕೆ ಹಾಜರಾಗದೆ ಗೈರಾಗಿದ್ದಾರೆ ಎನ್ನಲಾಗಿದೆ.ಗುರುವಾರವಿದ್ದ ವಿಚಾರಣೆಗೆ ಕೂಡ ಅವರು ನ್ಯಾಯಾಲಯಕ್ಕೆ ಗೈರಾಗಿದ್ದರು. ಈ ಸಂಬಂಧ ಪೊಲೀಸರನ್ನು ನ್ಯಾಯಾಧೀಶರು ವಿಚಾರ ಮಾಡಿದಾಗ ಅವರು ಬೆಂಗಳೂರಿಗೆ ತೆರಳಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ನ್ನು ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದ್ವಿತೀಯ ಪಿಯುಸಿ ಫಲಿತಾಂಶ :
ಚಿಕ್ಕಮಗಳೂರು : ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಪ್ರಕಟಿಸಿದರು. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ61.88 ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಗೆ ಈ ಬಾರಿ ಎಂಟನೇ ಸ್ಥಾನ ದೊರೆತಿದ್ದು, 1076 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. 683,563 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 422,966 ಜನರು ಉತ್ತೀರ್ಣರಾಗಿದ್ದಾರೆ.ಜಿಲ್ಲಾವಾರು ನೋಡಿದಾಗ ದಕ್ಷಿಣಕನ್ನಡ ಜಿಲ್ಲೆಯು 88.02% ಪಡೆದು ಪ್ರಥಮ ಸ್ಥಾನ ಪಡೆದಿದೆ, ಉಡುಪಿ ಜಿಲ್ಲೆಯು 86.38 % ನೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ ಹಾಗೂ 49.31 ಶೇಕಡಾ ಫಲಿತಾಂಶ ಪಡೆದಿರುವ ಚಿತ್ರದುರ್ಗ ಕೊನೆಯ ಸ್ಥಾನವನ್ನು ಪಡೆದಿದೆ.
ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಯ ಬಳಿ ಸಿಕ್ಕ ಮೊಬೈಲ್ : ವಿದ್ಯಾರ್ಥಿಯೋರ್ವ ಸಿಇಟಿ ಪರೀಕ್ಷೆಗೆ ಮೊಬೈಲ್ ತೆಗೆದುಕೊಂಡು ಹೋಗಿರುವ ಘಟನೆ ವರದಿಯಾಗಿದೆ. ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯೋರ್ವ ಮೊಬೈಲ್ ಫೋನನ್ನು ತನ್ನೊಡನೆ ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಬಂದಿದ್ದಾನೆ. ಇದನ್ನು ಗಮನಿಸಿದ ಕೊಠಡಿಯ ಮೇಲ್ವೀಚಾರಕರು ಕೂಡಲೇ ಮೇಲಧಿಕಾರಿಗಳಿಗೆ ಈ ಸಂಬಂದ ಮಾಹಿತಿ ನೀಡಿ ಆತನು ಪರೀಕ್ಷೆ ಬರೆಯದಂತೆ ನಿರ್ಬಂಧ ಹೇರಿ ಪೊಲೀಸರಿಗೊಪ್ಪಿಸಿದ್ದಾರೆ.
ಹೆಚ್ಚಿನ ತಪಾಸಣೆಯನ್ನು ನಡೆಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅನುವುಮಾಡಿ ಕೊಟ್ಟರೂ ಕೂಡ, ಈ ರೀತಿಯಾಗಿ ಘಟನೆ ನಡೆದಿರುವುದು ಎಲ್ಲರಲ್ಲೂ ಪ್ರಶ್ನೆಯಾಗಿ ಮೂಡಿದೆ. ಘಟನಾ ಸಂಬಂದ ಪ್ರಕರಣದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯನ್ನು ಮೈಸೂರು ಮೂಲದವನು ಎನ್ನಲಾಗಿದೆ.
ಖಾಸಗಿ ದೂರಿನ ಆಧಾರದ ಮೇಲೆ ಸಿ.ಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಸೇರಿ ನಾಲ್ವರ ಮೇಲೆ ಪ್ರಕರಣ ದಾಖಲು :
ಶೃಂಗೇರಿ ಶಂಕರಾಚಾರ್ಯ ಮೂರ್ತಿ ಅಪವಿತ್ರ ಪ್ರಕರಣದಲ್ಲಿ ತನ್ನ ಮೇಲೆ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಿದ್ದು, ಸಮಾಜದಲ್ಲಿ ತಪ್ಪು ಕಲ್ಪನೆ ಬರುವಂತೆ ಮಾಡಿ, ಕೋಮು ಸಾಮರಸ್ಯ ಕೇರಳಿಸಲಾಗಿತ್ತು ಎಂದು ಸುಹೈಲ್ ಎಂಬುವವರು ನೀಡಿದ ಖಾಸಗಿ ದೂರಿನ ಆಧಾರದ ಮೇಲೆ ಮಾಜಿ ಸಚಿವರು ಹಾಗೂ ಸಿ.ಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಸೇರಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲು. 2020ರ ಆಗಸ್ಟ್ 13 ರಂದು ಶಂಕರಾಚಾರ್ಯ ಮೂರ್ತಿ ಮೇಲೆ ಹಸಿರು ಶಾಲು ಹೊದಿಸಿ ಅಪವಿತ್ರ ಮಾಡಲಾಗಿದೆ ಎಂಬ ವಿವಾದ ಭುಗಿಲೆದ್ದು ಕುರಿತು ಬೃಹತ್ ಪ್ರತಿಭಟನೆ ನಡೆದಿತ್ತು, ಈ ಸಂಧರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕರಾದ ಡಿ.ಎನ್ ಜೀವರಾಜ್, ಬಿಜೆಪಿ ಮುಖಂಡರಾದ ಹರೀಶ್ ಶೆಟ್ಟಿ, ವೇಣುಗೋಪಾಲ ಹಾಗೂ ಶ್ರೀರಾಮಸೇನೆ ಮುಖಂಡ ಅರ್ಜುನ್ ಎಂಬುವವರು ನಮ್ಮನ್ನು ಆರೋಪಿತರು ಎಂದು ಆಧಾರ ರಹಿತ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಿದ್ದರು ಎಂದು ಸುಹೈಲ್ ಎಂಬುವವರು ಖಾಸಗೀ ದೂರು ದಾಖಲಿಸಿದ್ದರು. ಈ ಕುರಿತು ಸೆಕ್ಷನ್ 153,153ಎ 182, 211, 295ಎ ಮತ್ತು ಸೆಕ್ಷನ್ 34 ಐಪಿಸಿ ರಂತೆ ಸಿಸಿ ಸಂಖ್ಯೆ 284/22ರಂತೆ ಶೃಂಗೇರಿ ನ್ಯಾಯಾಲಯದಲ್ಲಿ ದಿನಾಂಕ 16 ಜೂನ್ 2022ರಂದು ಪ್ರಕರಣ ದಾಖಲಿಸಿಕೊಂಡಿದ್ದು ತಾಲೂಕು ನ್ಯಾಯಾಲಯ ಆರೋಪಿತರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಶೃಂಗೇರಿ : ದ್ವಿತೀಯ ಪಿಯು ರಿಸಲ್ಟ್; ಜೆಸಿಬಿಎಂ ಕಾಲೇಜಿನ ನಕ್ಷಾ ತಾಲೂಕಿಗೆ ಪ್ರಥಮ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ಶೃಂಗೇರಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಓದಿನಲ್ಲಿ ಸಾಧನೆಗೈದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶೃಂಗೇರಿ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿನಿ ನಕ್ಷಾ ಕೆ.ಆರ್ 98.67% (592 ಅಂಕ) ಪಡೆದು ಶೃಂಗೇರಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಶೃಂಗೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಶ್ರೀ ರಕ್ಷಿತ್ ಜಿ.ಎಂ 585 ಅಂಕಗಳನ್ನು ಪಡೆಯುವುದರ ಮೂಲಕ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಅಂತೆಯೇ ಶೃಂಗೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶಶಾಂಕ B.S 566 ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ, ಕಲಾ ವಿಭಾಗದಲ್ಲಿ ಲಕ್ಷ್ಮೀಶ 522 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳೆಲ್ಲರಿಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ವಿಕಾಸತೀರ್ಥ ಬೈಕ್ ರ್ಯಾಲಿ :
ಪ್ರಧಾನಮಂತ್ರಿ ನರೇಂದ್ರಮೋದಿಯವರ ಸರ್ಕಾರಕ್ಕೆ 8 ವರ್ಷ ತುಂಬಿರುವ ಹಿನ್ನೆಲೆ ಇಂದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಮಂಡಲದ ವತಿಯಿಂದ ವಿಕಾಸ ತೀರ್ಥ ಬೈಕ್ ಜಾಥಾ ನೆರವೇರಿತು.ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಡಿ ಎನ್ ಜೀವರಾಜ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಸಂದೀಪ್ ಹರವಿನಗಂಡಿ, ಜಿಲ್ಲಾ ಕಾರ್ಯದರ್ಶಿ ಪುಣ್ಯಪಾಲ್, ಪ್ರಕೋಷ್ಠ ರಾಜ್ಯ ಸಹ ಸಂಚಾಲಕರಾದ ರಾಮಸ್ವಾಮಿ,ಮಂಡಲ ಅಧ್ಯಕ್ಷರು ಆದ ಅರುಣ್ ಕುಮಾರ್,ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಭರತ್,ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಶಶಿ,ಮುಖಂಡರಾದ ಅಂತೋಣಿ, ಮಂಜುನಾಥ್, ಸಚಿನ್ ಮುಂತಾದವರು ಉಪಸ್ಥಿತರಿದ್ದರು.
ಶಿವಮೊಗ್ಗ : ಕಾರು ಹಾಗೂ ಲಾರಿ ನಡುವೆ ಮುಖಾಮುಖಿ
ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ.ಹೋಂಡಾಸಿಟಿ ಕಾರು ಹಾಗೂ ಲಾರಿಯ ನಡುವೆ ನಡೆದ ಈ ಅಪಘಾತದಲ್ಲಿ ಅದೃಷ್ಟವಶಾತ್ ಎಂಬಂತೆ ಯಾರಿಗೂ ಪ್ರಾಣಹಾನಿಯಾಗದೆ ಎರಡೂ ವಾಹನಗಳಲ್ಲಿದ್ದವರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಕಾರು ಶಿವಮೊಗ್ಗದ ಕಡೆಯಿಂದ ಕುಂದಾಪುರದ ಕಡೆಗೆ ಬರುತ್ತಿದ್ದು ಎದುರು ಭಾಗದಿಂದ ಲಾರಿಯು ಬರುತ್ತಿದ್ದ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗುವಂತೆ ಮಾಡಿದೆ. ಓರ್ವ ಪ್ರಯಾಣಿಕರಿಗೆ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್ ಟೇಬಲ್ :
ಶಿವಮೊಗ್ಗ : ಯುವತಿಯ ಜಾತಕ ಸರಿಯಿಲ್ಲವೆಂದು ಯುವಕನ ಮನೆಯವರು ಮದುವೆಗೆ ಒಪ್ಪದ ಕಾರಣ ಮಹಿಳಾ ಕಾನ್ಸ್ಟೇಬಲ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಕಲ್ಲಾಪುರದ ಸುಧಾ ಎಂಬುವವರು ಮೃತ ದುರ್ದೈವಿ. ಮನೆಯವರ ಒಪ್ಪಿಗೆ ದೊರೆಯದ ಕಾರಣ ಇದರಿಂದಾಗಿ ಮನನೊಂದ ಸುಧಾ ಮೇ 31ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಕಾನ್ಸ್ಟೇಬಲ್ ಸುಧಾ ಸಾವನ್ನಪ್ಪಿದ್ದಾರೆ. ಘಟನಾ ಸಂಬಂಧ ಭದ್ರಾವತಿ ಹಳೆನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಸನ : ಸರ ಕದಿಯಲು ಯತ್ನಿಸಿ ಸರ ದೊರೆಯದೆ ಇದ್ದಾಗ ಮಹಿಳೆಯನ್ನು ಹತ್ಯೆಗೈದ ಕಳ್ಳ
ಹಾಸನ : ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕೀಳಲು ಯತ್ನಿಸಿದ ಕಳ್ಳನಿಗೆ ಮಹಿಳೆ ಪ್ರತಿರೋಧವಹಿಸಿದ ಕಾರಣಕ್ಕೆ ಮಹಿಳೆಯನ್ನು ಡಕಾಯಿತ ಕೆರೆಯಲ್ಲಿ ಮುಳುಗಿಸಿ ಜೀವ ತೆಗೆದಿರುವ ಘಟನೆ ಹಾಸನ ನಗರದ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ನೀಲಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಗನಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಪ್ರತಿಷ್ಠಿತ ವಿದ್ಯಾಲಯಕ್ಕೆ ಸೇರಿಸಿದ್ದರು. ಮೂರು ದಿನ ಗಾರ್ಮೆಂಟ್ಸ್ ಗೆ ರಜೆ ಹಾಕಿ ಮಗನನ್ನು ನೋಡುವ ಸಲುವಾಗಿ ತಾಯಿ ನೀಲಾ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕಾಗಿ ಮಗನಿಗೆ ಬೇಕಿದ್ದ ಕೆಲ ವಸ್ತುಗಳು, ತಿಂಡಿ ತಿನಿಸುಗಳನ್ನು ಖರೀದಿಸಲು ತನ್ನ ಗಂಡನ ಜೊತೆಗೆ ಬೈಕ್ನಲ್ಲಿ ಗುರುವಾರ ಬೆಳಗ್ಗೆ ಹಾಸನ ನಗರಕ್ಕೆ ಬಂದಿದ್ದ ನೀಲಾ ಬೆಡ್ ಶೀಟ್ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಮನೆಗೆ ವಾಪಸ್ ಹೊರಟಿದ್ದರು. ಈ ವೇಳೆ ಪತಿ ಬೈಕ್ ನಲ್ಲಿ ಮನೆಗೆ ಬಿಡುತ್ತೇನೆ ಎಂದಿದ್ದು, ಬಸ್ ನಲ್ಲಿಯೇ ತೆರಳುತ್ತೇನೆ ಎಂದು ಬಸ್ ಏರಿ ಗವೇನಹಳ್ಳಿ ಬಳಿ ಬಂದು ಇಳಿದಿದ್ದಾರೆ. ಮೃತ ಮಹಿಳೆ ನೀಲಾ ಮನೆಗೆ ಹೋಗಲು ಕೆರೆಯ ಪಕ್ಕದಲ್ಲಿದ್ದ ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ದಿಢೀರ್ ಎದುರಾದ ಕಂದಲಿಯ ಭರತ್ ಎಂಬ ಖದೀಮ, ನೀಲಾ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ ಕದಿಯಲು ವಿಫಲಯತ್ನ ನಡೆಸಿದ್ದಾನೆ. ಅರ್ಧ ಸರ ಕಳ್ಳನ ಕೈ ಸೇರಿದ್ದರೆ ಉಳಿದ ಅರ್ಧ ಸರವು ಮಹಿಳೆ ಬಳಿಯಲ್ಲಿಯೇ ಉಳಿದಿದೆ. ಇಡೀ ಚಿನ್ನದ ಸರ ಕೀಳಲು ಅವಕಾಶ ನೀಡದೇ ಇದ್ದಾಗ ಕೋಪಗೊಂಡ ಕಳ್ಳ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡ ಪರಿಣಾಮ ಮಿಶ್ರಿತ ಕೆರೆಯ ನೀರಲ್ಲಿ ಮುಳುಗಿಸಿ ಆಕೆಯನ್ನು ಕಳ್ಳ ಕೊಲೆ ಮಾಡಿದ್ದಾನೆ.



0 Comments