ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿದ ಅಧಿಕಾರಿಗಳು :

ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರೆಯಲಿದೆ. ಈ ಹಿನ್ನೆಲೆ ಹವಾಮಾನ ಇಲಾಖೆ ಹಳದಿ ಅಲರ್ಟ್​ ಘೋಷಣೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.ಮಲೆನಾಡು ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು ಮೋಡ ಮುಸುಕಿದ ವಾತಾವರಣವಿದೆ. ಜೂನ್ 21 ರಿಂದ ಜೂನ್ 24ರವರೆಗೆ ರಾಜ್ಯಾದ್ಯಂತ ನಿರಂತರ ಮಳೆಯಾಗಲಿದೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು, ಚಾಮರಾಜನಗರ, ಬಾಗಲಕೋಟೆ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂದಿನಿಂದ ಜೂನ್ 24ರವರೆಗೆ ಹಳದಿ ಅಲರ್ಟ್​ ಘೋಷಿಸಲಾಗಿದೆ. ಜೂನ್ 23ರಿಂದ ಉತ್ತರ ಭಾರತಕ್ಕೆ ನೈಋತ್ಯ ಮುಂಗಾರು ಪ್ರವೇಶವಾಗಲಿದೆ. ಆ ಬಳಿಕದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಕೃಷಿ ಕಾರ್ಯಗಳಲ್ಲಿ ತೊಡಗುವ ಕೃಷಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅತೀ ಹೆಚ್ಚಿನ ಮಳೆಯಾಗುವ ಸಂದರ್ಭದಲ್ಲಿ ಕೆಲಸದಲ್ಲಿ ಮಗ್ನರಾಗದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂರಿಗಾಗಿ ನಿವೇಶನ ರಹಿತರ ಪ್ರತಿಭಟನೆ :

ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿಯ ಬಿದರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚಂದ್ರವಳ್ಳಿ ಎಂಬಲ್ಲಿ ಅಶ್ರಯ ನಿವೇಶನ ರಹಿತರು ಸಾರ್ವಜನಿಕ ಅಶ್ರಯ ಸಮಿತಿಗೆ ಮೀಸಲಿಟ್ಟ ಜಾಗದಲ್ಲಿ 100 ಕ್ಕೂ ಹೆಚ್ಚು ಜನ 80 ಫಲಾನುಭವಿಗಳು 60 ಟೆಂಟ್ ಹಾಕಿ ಪ್ರತಿಭಟಿಸಿದರು. ಸುಮಾರು 80 ವರ್ಷದಿಂದ ಕೂಲಿ ಕಾರ್ಮಿಕರಾಗಿ ಕರಡಿಖಾನ್ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಚುನಾವಣಾ ಗುರುತಿನ ಚೀಟಿ ಆಧಾರ್ ಕಾರ್ಡ್ ಪಡಿತರ ಚೀಟಿ ಹೊಂದಿದ್ದು ಇವರಿಗೆ ಆಶ್ರಯ ನಿವೇಶನಕ್ಕೇ ಮೀಸಲಿಟ್ಟ 4 ಎಕರೆ ಪ್ರದೇಶವನ್ನು ಡಿಮೂಡ್ ಎಂದು ಅರಣ್ಯ ಇಲಾಖೆಯವರು ಒಪ್ಪಿಗೆ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರಿಗೆ ಮೀಸಲಿಟ್ಟ ಜಾಗದಲ್ಲಿ ಟೆಂಟ್ ಹಾಕಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ಡಿ ರಾಜೇಗೌಡ ಮುತ್ತೋಡಿ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಕುಮಾರ್, ಸಲೀಂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಡಿಫ್ಓ ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ದೊರಕಿಸುವ ಭರವಸೆ ನೀಡಿದರು.


ಕಳಸ : ಕಳಪೆ ಕಾಮಗಾರಿಯಿಂದ ಸೇತುವೆ ಕುಸಿತ ; ಸಾರ್ವಜನಿಕರ ಆಕ್ರೋಶ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮದ, ನೆಲ್ಲಿಬೀಡು ದ್ಯಾವರ್ನಪಾಲ್ ಸೇತುವೆಯ ಸಂಪೂರ್ಣ ಕಾಮಗಾರಿ ಮುಗಿದಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು, ಆದರೆ ಒಂದು ವಾರದ ಬಳಿಕ ಅಂದರೆ ನಿನ್ನೆ ಈ ಸೇತುವೆಯ ಮೇಲೆ ಪಿಕಪ್ ವಾಹನವೊಂದು ತೆರಳುವ ಸಂದರ್ಭದಲ್ಲಿ ಸೇತುವೆಯ ಕಾಂಕ್ರೀಟ್ ಗೋಡೆಯು ಕುಸಿದ ಪರಿಣಾಮ ಪಿಕಪ್ ವಾಹನವು ಸೇತುವೆಯ ಮೇಲೆಯೇ ಸಿಲುಕಿಕೊಂಡಿದೆ. ಅದೃಷ್ಟವಶಾತ್ ಎಂಬಂತೆ ಪಿಕಪ್ ನ ಚಾಲಕ ಹಾಗೂ ವಾಹನದೊಳಗಿದ್ದ ಮಾಲೀಕ ಯಾವುದೇ ತೊಂದರೆಗೊಳಗಾಗದೆ ಪ್ರಾಣಾಪಾಯಗಳಿಂದ ಪಾರಾಗಿದ್ದಾರೆ. 30 ಲಕ್ಷ ರೂಪಾಯಿ ಹಣದಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯು ಈ ರೀತಿಯಾಗಿ ಕಳಪೆ ಕಾಮಗಾರಿಯಿಂದ ಕುಸಿದು ಸಂಚಾರಕ್ಕೆ ಸಮಸ್ಯೆಯುಂಟುಮಾಡಿರುವುದಕ್ಕೆ ಗ್ರಾಮಸ್ಥರು ಗುತ್ತಿಗೆದಾರನ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಈ ಭಾಗದ ಈಚಲಹೊಳೆ, ಕಟ್ಟೆಮನೆ ಸೇರಿದಂತೆ ಐದಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ಕುಸಿದಿದ್ದು ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯುಂಟುಮಾಡಿದೆ. ಸಿಲುಕಿರುವ ಪಿಕಪ್ ವಾಹನವನ್ನು ಮೇಲಕ್ಕೆತ್ತುವ ಸಲುವಾಗಿ ಜೆಸಿಬಿಯ ಸಹಾಯವನ್ನು ಹಾಗೂ ಈ ಕುರಿತು ಅನುಮತಿ ನೀಡುವಂತೆ ಕೋರಿದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆಯೊಡ್ಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಇದೇ ಪಿಕಪ್ ವಾಹನವನ್ನು ಅಧಿಕಾರಿಗಳು ಲೀಸ್ ಗೆ ಪಡೆಯುತ್ತಿದ್ದಾರೆ ಅದರೆ ಆತನ ಕಷ್ಟದ ಸಂದರ್ಭದಲ್ಲಿ ನೆರವಾಗುವ ಬದಲು ದರ್ಪದಿಂದ ಬೈದು ಜೆಸಿಬಿ ಬಂದಲ್ಲಿ ಸೀಜ್ ಮಾಡಿ ಕೇಸ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ :

ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಅವರು ಸುಳ್ಳು ಹಾಗೂ ಸಿದ್ದರಾಮಯ್ಯ ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸತ್ಯಕ್ಕೆ ದೂರವಾದುದನ್ನು ಸದಾ ಸಿದ್ದರಾಮಯ್ಯ ಮಾತನಾಡುತ್ತಾರೆ. ಸುಳ್ಳಿನಲ್ಲಿ ಅವರಂತಹ ನಿಷ್ಣಾತರು ಬೇರಾರೂ ಇಲ್ಲ, ಸುಳ್ಳೇ ಕೆಲವರ ಮನೆ ದೇವರು ಎಂದು ಕುಟುಕಿದರು. ದಿನನಿತ್ಯವೂ ಸುಳ್ಳುಗಳನ್ನು ಹೇಳಿಕೊಂಡಿರುವ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಎಲ್ಲಾದರೂ ಆಕ್ಸಿಜನ್ ಪ್ಲಾಂಟ್ ಗಳ ನಿರ್ಮಾಣ ಮಾಡಿದ್ದರಾ ಎಂದು ಪ್ರಶ್ನಿಸಿದರು. ಭಾರತದ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರು ರಾಜ್ಯಕ್ಕೆ ಆಗಮಿಸಿರುವ ಕುರಿತು ಬೇರೆ ರೀತಿಯಲ್ಲೇ ಮಾತನಾಡುವ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ದೇಶಕ್ಕೆ ಮೋದಿ ಜೀ ಕೊಡುಗೆಯ ಕುರಿತು ಒಮ್ಮೆ ಅವಲೋಕಿಸಿ ಮಾತನಾಡಲಿ. ಅವರು ಪ್ರತಿನಿಧಿಸುವ ಕ್ಷೇತ್ರಗಳಿಂದ ಹಿಡಿದು ಅನೇಕ ಸ್ಥಳಗಳಿಗೆ ಪಿಎಂ ಕೇರ್ಸ್ ಹಣದಿಂದ ಆಕ್ಸಿಜನ್ ಪ್ಲಾಂಟ್ ಗಾಗಿ ಹಣ ಬಂದಿದೆ ಹಾಗೂ ಪ್ಲಾಂಟ್ ಗಳ ನಿರ್ಮಾಣವಾಗಿದೆ. ಅವರೂ ದೇಹಕ್ಕೆ ಹಾಕಿಸಿಕೊಂಡಿರುವ ಕೊರೋನ ಎರಡು ಡೋಸ್ ಲಸಿಕೆಗಳು ಇಲ್ಲದಿದ್ದರೆ ಏನಗುತ್ತಿತ್ತು ಎಂದು ಅವರೊಮ್ಮೆ ಊಹಿಸಿಕೊಳ್ಳಿ ಎಂದರು. 


ಶಿವಮೊಗ್ಗ : 

ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ಪೊಲೀಸರು ಆರೋಪಿಯನ್ನು ಬಂಧಿಸಲೆಂದು ತೆರಳಿದಾಗ ಪೊಲೀಸರಿಗೇ ಆರೋಪಿ ಚೂರಿ ಇರಿದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹಳೇ ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ರೌಡಿಶೀಟರ್ ಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಚಾಕು ಇರಿತ ನಡೆದಿದೆ. ಶಿವಮೊಗ್ಗದ ದೊಡ್ಡಪೇಟೆ ಠಾಣೆಯ ಸಿಬ್ಬಂದಿಗಳಾದ ಗುರುನಾಯ್ಕ್ ಹಾಗೂ ರಮೇಶ್ ಹಲ್ಲೆಗೊಳಗಾದವರು. ಪೊಲೀಸರು ಬಂಧಿಸಲೆಂದು ತೆರಳಿದ ಸಂದರ್ಭದಲ್ಲಿ ಶಾಹೀದ್ ಖುರೇಷಿ ಎಂಬ ರೌಡಿ ಶೀಟರ್ ಪೊಲೀಸ್ ಪೇದೆಯ ಎದೆಗೆ ಚಾಕು ಇರಿದಿದ್ದಾನೆ. ಪೊಲೀಸರು ಪುನಃ ಹಿಡಿಯಲು ತೆರಳಿದಾಗ ಮತ್ತೆ ಲಾಂಗು ಬೀಸಿದ ಪರಿಣಾಮ ಜೀವ ರಕ್ಷಣೆಯ ಸಲುವಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿರುವ ಎಸ್ಪಿ ಲಕ್ಷ್ಮೀಪ್ರಸಾದ್ ಪೊಲೀಸ್ ಸಿಬ್ಬಂದಿಗಳಾದ ಗುರುನಾಯ್ಕ್ ಹಾಗೂ ರಮೇಶ್ ಅವರ ಆರೋಗ್ಯ ವಿಚಾರಣೆ ನಡೆಸಿದರು.


ವೃದ್ಧಾಪ್ಯ ವೇತನಕ್ಕಾಗಿ ಅಲೆದು ಸುಸ್ತಾಗಿ ಬಿದ್ದ ವೃದ್ದೆ :

ವೃದ್ದೆಯೋರ್ವರು ವೃದ್ದಾಪ್ಯ ವೇತನಕ್ಕಾಗಿ ಕಛೇರಿಗೆ ಬಂದು ಸುಸ್ತಾಗಿ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹೆಬ್ಬಿಗೆ ಗ್ರಾಮದ ಸಾಧಮ್ಮ ಅಸ್ವಸ್ಥಗೊಂಡಿದ್ದ ವೃದ್ಧೆ. ಕೂಡಲೇ ಅವರನ್ನು ಉಪಚರಿಸಿ, ಆಸ್ಪತ್ರೆಗೆ ದಾಖಲಿಸಿ ಸ್ಥಳೀಯರು ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ. ತಮ್ಮ ಗ್ರಾಮದಿಂದ ನಿಟ್ಟೂರಿನ ಗ್ರಾಮಲೆಕ್ಕಾಧಿಕಾರಿ ಕಚೇರಿಗೆ 07 ಕಿ.ಮೀ.ವರೆಗೆ ನಡೆದು ಬಂದಿದ್ದರಿಂದ ಸುಸ್ತಾಗಿದ್ದರು ಎಂದು ತಿಳಿದುಬಂದಿದೆ. ಇರುವ ಒಬ್ಬ ಪುತ್ರ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದು, ಈ ವೃದ್ಧೆ ಜೊತೆ ಮನೆಯಲ್ಲಿ ಯಾರೂ ಇಲ್ಲ ಎನ್ನಲಾಗಿದೆ. ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಬೆಳಿಗ್ಗೆ 9.30ಕ್ಕೆ ಅವರು ಬಂದಿದ್ದಾರೆ. ಆಗ ಗ್ರಾಮ ಲೆಕ್ಕಾಧಿಕಾರಿ ಇರಲಿಲ್ಲ. ಕಾದು ಕುಳಿತಿದ್ದ ಸಾಧಮ್ಮ ತಲೆ ತಿರುಗಿಬಿದ್ದಿದ್ದಾರೆ. ಪಂಚಾಯಿತಿ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಬಿಟ್ಟು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.