ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಆನೆದಂತ ಸಾಗಾಟ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ. 

ಇದನ್ನೂ ಓದಿ :  ಶೃಂಗೇರಿ: ಸ್ಕೂಲ್ ಟ್ರಿಪ್ ವಾಹನಕ್ಕೆ ಗುದ್ದಿದ ಇನೋವಾ ಕಾರು; ಅದೃಷ್ಟವಶಾತ್ ಮಕ್ಕಳು ಪಾರು

ಚಿಕ್ಕಮಗಳೂರಿನಿಂದ ಕೊಳ್ಳೇಗಾಲಕ್ಕೆ ಕಾರೊಂದರಲ್ಲಿ ನಾಲ್ವರು ಅಕ್ರಮವಾಗಿ ಆನೆ ದಂತದ ಸಾಗಾಟ ನಡೆಸುತ್ತಿದ್ದರು ಈ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಐಡಿ ವಿಶೇಷ ಸಂಚಾರಿ ದಳದ ಪೊಲೀಸರು ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಆನೆ ದಂತದ ಸಮೇತ ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕೊಳಗಾವೆ ಪ್ರೀತಮ್, ಜಾಗರ ಜಗದೀಶ, ಹಾಗೂ ಪುನೀತ್ ಎಂದು ಗುರುತಿಸಲಾಗಿದೆ ಮತ್ತು ಈ ಸಂದರ್ಭದಲ್ಲಿ ಎಸ್ಕೇಪ್ ಆದ ಹೇಮಂತ ಎಂಬಾತನಿಗಾಗಿ ಪೊಲೀಸರು ಬಲೆ ಬೀಸಿದ್ದು ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿಗಳಿಂದ ಆನೆ ದಂತದ ಸಾಗಾಟಕ್ಕೆ ಬಳಸಿದ್ದ ಕಾರ್, ಮೂರು ಮೊಬೈಲ್ ಫೋನ್ ಹಾಗೂ 15 ಕೆಜಿ 900 ಗ್ರಾಂ ತೂಕದ ಎರಡು ಆನೆ ದಂತವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಚಿಕ್ಕಮಗಳೂರಿನ ಜಾಗರ ಅರಣ್ಯ ಪ್ರದೇಶದಲ್ಲಿ ಸತ್ತ ಆನೆಯಿಂದ ಎರಡು ದಂತಗಳನ್ನು ಬೇರ್ಪಡಿಸಿ ಹಣಕ್ಕಾಗಿ ಅದರ ದಂತವನ್ನು ಮಾರಾಟ ಮಾಡಲು ಬೇರೆಡೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಮತ್ತು ಆನೆಯನ್ನು ಅಲ್ಲೇ ಸಮೀಪದ ಜಮೀನಿನಲ್ಲಿ ಹೂತು ಹಾಕಿರುವುದಾಗಿ ಆರೋಪಿಗಳು ಪೊಲೀಸರಿಗೆ ಬಾಯ್ಬಿಟ್ಟಿದ್ದಾರೆ. 

ಈ ಕಾರ್ಯಾಚರಣೆಯು ಸಿಐಡಿ ಅರಣ್ಯ ಸಂಚಾರಿದಳದ ಪಿಎಸ್ಸೈ  ಆನಂದ್ ಕುಮಾರ್, ಮುಖ್ಯ ಪೇದೆ ರಾಮಚಂದ್ರ ಸ್ವಾಮಿ, ಶಂಕರ್, ಬಸವರಾಜು, ತಖೀವುಲ್ಲ, ಹಾಗೂ ವಾಹನದ ಚಾಲಕರಾದ ಪ್ರಭಾಕರ ಭಾಗಿಯಾಗಿದ್ದರು. 

ಕಳೆದ ಕೆಲ ದಿನಗಳ ಹಿಂದಷ್ಟೇ ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಚಿಕ್ಕಮಗಳೂರಿನಲ್ಲಿ ಸೆರೆ ಹಿಡಿಯಲಾಗಿತ್ತು ಹಾಗೂ ಚಿರತೆ ಚರ್ಮವನ್ನು ಮಾರಾಟಕ್ಕೆ ಮುಂದಾದ ಮೂವರನ್ನು ಕೂಡ ಕಾರ್ಯಾಚರಣೆಯ ಮೂಲಕ ಅಧಿಕಾರಿಗಳು ಸೆರೆ ಹಿಡಿದಿದ್ದರು. ಪದೇ ಪದೇ ಮಲೆನಾಡಿನಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಮೂಡಿದೆ.