ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಶಿಕ್ಷಕರೋರ್ವರ ಮಾತಿಗೆ ವಿದ್ಯಾರ್ಥಿ ಎದುರುತ್ತರ ನೀಡಿದ ಪರಿಣಾಮ, ಶಿಕ್ಷಕ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ಕೊಪ್ಪದಲ್ಲಿ ನಡೆದಿದೆ. 

ಇದನ್ನೂ ಓದಿ : NR PURA : ಭೀಕರ ರಸ್ತೆ ಅಪಘಾತ ; ಇಬ್ಬರು ಯುವಕರ ದುರ್ಮರಣ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಭಂಡಿಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಎಂಬ ಆರನೇ ತರಗತಿ ಬಾಲಕನಿಗೆ ಕನ್ನಡ ಪಾಠ ಮಾಡುತ್ತಿದ್ದ ಶಿಕ್ಷಕ ನಾಗರಾಜ್ ಸರಿಯಾಗಿ ಬರೆಯುವಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಎದುರುತ್ತರ ನೀಡಿದ ಪರಿಣಾಮ ಸಿಟ್ಟಿಗೆದ್ದ ಶಿಕ್ಷಕ ಹೊಡೆದಿದ್ದಾರೆ. ವಿದ್ಯಾರ್ಥಿಯ ಕಾಲಿಗೆ ಬೆನ್ನಿಗೆ ಶಿಕ್ಷಕ ನಾಗರಾಜ್ ಮನ ಬಂದಂತೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. 

ಕನ್ನಡ ಪಾಠ ಮಾಡುವ ಶಿಕ್ಷಕರ ಪ್ರಶ್ನೆಗೆ ವಿದ್ಯಾರ್ಥಿ ಎದುರುತ್ತರ ನೀಡಿದ್ದಾನೆ ಈ ಸಂದರ್ಭದಲ್ಲಿ ಶಿಕ್ಷಕ ಕೋಪಗೊಂಡು ಹೊಡೆದಿದ್ದಾರೆ, ಘಟನಾ ಸಂಬಂಧ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದ್ದು ನಿಯಮಾನುಸಾರ ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಲಾಗುವುದು - ಆಂಥೋನಿ ರಾಜ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪ

ಘಟನೆಯ ಕುರಿತು ಬಾಲಕನ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನ ಮೆಲೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಗಂಡನನ್ನು ಬಿಟ್ಟು ತನ್ನೊಂದಿಗೆ ಬರುವಂತೆ ಯುವಕನಿಂದ ಬ್ಲ್ಯಾಕ್ ಮೇಲ್ ; ಠಾಣೆ ಮೆಟ್ಟಿಲೇರಿದ ವಿವಾಹಿತೆ

ಹಾಸನ :  ಮದುವೆಯಾದ ಯುವತಿಯನ್ನು ಪರಿಚಯಸ್ಥ ಯುವಕನೋರ್ವ ಗಂಡನನ್ನು ಬಿಟ್ಟು ಬರುವಂತೆ ಕಿರುಕುಳ ನೀಡುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಆತನ ಕಾಟವನ್ನು ತಾಳಲಾರದೆ ಇದೀಗ ಯುವತಿ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲು ಮಾಡಿದ್ದಾಳೆ. 

ಶಿವಮೊಗ್ಗ ಮೂಲದ ವ್ಯಕ್ತಿಯನ್ನು ಏಳು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆಗೆ ಆಕೆಯೊಂದಿಗೆ ಮದುವೆಗೂ ಮೊದಲು ಸಲುಗೆಯಿಂದಿದ್ದ ಪರಿಚಯಸ್ಥ ಯುವಕ, ಗಂಡನನ್ನು ಬಿಟ್ಟು ತನ್ನೊಂದಿಗಿರಲು ಹಾಸನಕ್ಕೆ ಬರುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಯುವತಿಯು ಆರೋಪಿಸಿದ್ದಾಳೆ. 

ತನ್ನ ತಾಯಿಯಿಂದ ಪರಿಚಯವಾದ ಹಾಸನದ ಕೆಳವತ್ತಿ ಗಿರೀಶ್ ಆತ್ಮೀಯತೆಯಿಂದಿದ್ದ, ನಮ್ಮಿಬ್ಬರ ನಡುವೆಯಿದ್ದ ಸ್ನೇಹ ಸಲುಗೆಗೆ ತಿರುಗಿತ್ತು, ನಮ್ಮಿಬ್ಬರ ಫೋಟೋಗಳು ವಿನಿಮಯಗೊಂಡಿದ್ದವು. ಈ ಫೋಟೋಗಳನ್ನು ಹೊಂದಿರುವ ಗಿರೀಶ್ ಗಂಡನನ್ನು ತೊರೆದು ಹಾಸನಕ್ಕೆ ಬಾರದೇ ಹೋದಲ್ಲಿ ಗಂಡನಿಗೆ ಹಾಗೂ ಅವರ ಸಂಬಂಧಿಕರಿಗೆ ತನ್ನ ಬಳಿಯಿರುವ ಫೋಟೋಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂಬುದಾಗಿ ವಿವಾಹಿತೆ ದೂರಿದ್ದಾಳೆ. 

ನಾನು ಬೇರೆಯವರನ್ನು ಮದುವೆಯಾದ ಕಾರಣ ಜೀವ ಬೆದರಿಕೆ ಹಾಕುತ್ತಿದ್ದಾನೆ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾನೆ  ಈ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಯುವತಿಯು ಹಾಸನದ ದೊಡ್ಡಪೇಟೆ ಠಾಣೆಗೆ ತೆರಳಿ ದೂರು ನೀಡಿದ್ದಾಳೆ