ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ)  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಜಿ ಶಾಸಕರಾದ ಡಿ.ಎನ್ ಜೀವರಾಜ್ ವಿರುದ್ಧ ಹಳೆಯ ಪ್ರಕರಣವೊಂದಕ್ಕೆ ಸಾಕ್ಷಿಹೇಳಲು ಪದೇ ಪದೇ ಗೈರಾಗುತ್ತಿರುವ ಕಾರಣಕ್ಕೆ ಸಂಬಂಧಿಸಿದಂತೆ ನರಸಿಂಹರಾಜಪುರದ ಸಿವಿಲ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ನ್ನು ಹೊರಡಿಸಿದೆ.

ಯಾರೋ ತಮಗೆ ಹಣದ ಬೇಡಿಕೆಯಿಟ್ಟು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಡಿ.ಎನ್ ಜೀವರಾಜ್ ದೂರು ದಾಖಲಿಸಿದ್ದರು. ಈ ಪ್ರಕರಣದ ಕುರಿತಾಗಿ ಸಾಕ್ಷಿ ಹೇಳಲು ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಿತ್ತು ಆದರೆ ಅವರು 2020 ರಿಂದಲೂ ನ್ಯಾಯಾಲಯಕ್ಕೆ ಹಾಜರಾಗದೆ ಗೈರಾಗಿದ್ದಾರೆ ಎನ್ನಲಾಗಿದೆ.

ಗುರುವಾರವಿದ್ದ ವಿಚಾರಣೆಗೆ ಕೂಡ ಅವರು ನ್ಯಾಯಾಲಯಕ್ಕೆ ಗೈರಾಗಿದ್ದರು.  ಈ ಸಂಬಂಧ ಪೊಲೀಸರನ್ನು ನ್ಯಾಯಾಧೀಶರು ವಿಚಾರ ಮಾಡಿದಾಗ ಅವರು ಬೆಂಗಳೂರಿಗೆ ತೆರಳಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ನ್ನು ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.