ಚಿಕ್ಕಮಗಳೂರು 

ಮೂಡಿಗೆರೆ : ಕಾಲುಜಾರಿ ಬಿದ್ದು ವ್ಯಕ್ತಿಯ ದುರ್ಮರಣ ಮೂಡಿಗೆರೆಯ ಅಲೇಕಾನ್ ಗ್ರಾಮದ ಗುಳಿಗ ದೈವದ ಗುಡಿಯ ಸಮೀಪ ಈ ಘಟನೆ ಸಂಭವಿಸಿದ್ದು, ಆಕಸ್ಮಿಕವಾಗಿ ಕಾಲುಜಾರಿದ ಪರಿಣಾಮ ವ್ಯಕ್ತಿಯು ಕೆಳಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮೃತನನ್ನು ಬಾಳೂರಿನ ದರ್ಬಾರ್ ಪೇಟೆಯ ಗಾರೆ ಕೆಲಸ ಮಾಡುತ್ತಿದ್ದ 45 ವರ್ಷ ಪ್ರಾಯದ ರಾಜು ಎಂದು ಗುರುತಿಸಲಾಗಿದೆ. 

ಜೆಡಿಎಸ್ ಹಿರಿಯರ ಸಮಾವೇಶ :

ಬಾಳೆಹೊನ್ನೂರು : ಜೆಡಿಎಸ್ ಪಕ್ಷದ ವತಿಯಿಂದ ಬಾಳೆಹೊನ್ನೂರಿನಲ್ಲಿ ಶೃಂಗೇರಿ ಕ್ಷೇತ್ರದ ಹಿರಿಯ ಕಾರ್ಯಕರ್ತರ ಸಭೆ ನಡೆಯಿತು. ಕ್ಷೇತ್ರದಲ್ಲಿ ಜೆಡಿಎಸ್ ನ ಬಲವರ್ಧನೆ ಹಾಗೂ ಸಂಘಟನೆಯ ಕುರಿತು ಚರ್ಚೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಎಸ್ ಶೆಟ್ಟಿ ಕ್ಷೇತ್ರದ ಪ್ರತೀ ಬೂತ್ ನಲ್ಲಿಯೂ ನಮ್ಮ ಪಕ್ಷದ ಕಾರ್ಯಕರ್ತರಿದ್ದಾರೆ, ಅವರನ್ನು ಒಗ್ಗೂಡಿಸಿ ಪಕ್ಷದ ಬಲವರ್ಧನೆಯ ಕೆಲಸವನ್ನು ಮಾಡಬೇಕು. ಕೇವಲ ವೈಯಕ್ತಿಕ ಕಾರ್ಯಗಳಿಗೆ ಪಕ್ಷವನ್ನು ಬಳಸಿಕೊಳ್ಳದೆ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಪಕ್ಷದೊಳಗಿದ್ದು ಪಕ್ಷವನ್ನು ಕೊಲ್ಲುವವರ ಅವಶ್ಯಕತೆ ಜಾತ್ಯಾತೀತ ಜನತಾದಳ ಪಕ್ಷಕ್ಕಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರ ಆಡಳಿತಾವಧಿಯ ಜನಪರ ಕಾರ್ಯಗಳನ್ನು, ರೈತ ಪರವಾದ ವಿವಿಧ ಯೋಜನೆಗಳನ್ನು ಹಾಗೂ ಅಭಿವೃದ್ಧಿಕಾರ್ಯಗಳ ಕುರಿತು ಜನರಿಗೆ ತಿಳಿಸುವಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ಆ ಮೂಲಕ ಪಕ್ಷ ಸುಲಭವಾಗಿ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದರು. 

ನಾಳೆ ಸ್ವಗ್ರಾಮಕ್ಕೆ ಯೋಧನ ಪಾರ್ಥೀವ ಶರೀರ : 

ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿಕ್ಕಮಗಳೂರು ಮೂಲದ ಗಣೇಶ್ ಎಂಬ ಯೋಧನ ಮೃತದೇಹ ಮೂರು ದಿನಗಳ ಹಿಂದೆ ಗುವಾಹಟಿಯಲ್ಲಿ ಪತ್ತೆಯಾಗಿತ್ತು. ಮೂಲತಃ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮಸೀಗದ್ದೆ ಮೂಲದ ಭಾರತೀಯ ಸೇನೆಯ ಯೋಧ ಗಣೇಶ್ ಅವರು ಏಪ್ರಿಲ್ 24 ರಂದು ಊರಿಗೆ ಬಂದಿದ್ದು ಜೂನ್ 09ರಂದು ಮನೆಯಿಂದ ವಾಪಸ್ ಕರ್ತವ್ಯದ ಸಲುವಾಗಿ ತೆರಳಿದ್ದರು. ಎಲ್ಲಾ ಪ್ರಕ್ರಿಯೆಗಳ ನಂತರ ಏರ್ ಲಿಫ್ಟ್ ನ ಮೂಲಕ ಯೋಧನ ಪಾರ್ಥೀವ ಶರೀರವನ್ನು ಇಂದು ಬೆಂಗಳೂರಿಗೆ ತರಲಾಗಿತ್ತು, ಆ ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ರಸ್ತೆ ಮಾರ್ಗದ ಮೂಲಕ ತರಲಾಯಿತು. ಈ ಸಂದರ್ಭದಲ್ಲಿ ಶಾಸಕ ಸಿ.ಟಿ ರವಿ ಆಸ್ಪತ್ರೆಗೆ ತೆರಳಿ ಮೃತ ಯೋಧನ ಅಂತಿಮ ದರ್ಶನ ಪಡೆದರು. ಆಸ್ಪತ್ರೆಗೆ ಆಗಮಿಸಿದ್ದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು, ಅಪಾರ ಸಂಖ್ಯೆಯಲ್ಲಿ ಜನರು ಆಸ್ಪತ್ರೆಯ ಆವರಣದಲ್ಲಿ ಸೇರಿದ್ದರು. ನಾಳೆ ಬೆಳಗ್ಗೆ ಚಿಕ್ಕಮಗಳೂರಿನಿಂದ ಸಂಗಮೇಶ್ವರ ಪೇಟೆ ಸಮುದಾಯ ಭವನಕ್ಕೆ ಯೋಧನ ಶರೀರ ಬರಲಿದ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ, ಈ ಬಳಿಕದಲ್ಲಿ ಬಾಳೆಹೊನ್ನೂರಿನ ಖಾಂಡ್ಯಕ್ಕೆ ಮೃತ ಯೋಧನ ಪಾರ್ಥೀವ ಶರೀರ ಬರಲಿದ್ದು ಮನೆಯ ಹಿಂಭಾಗದ ತೋಟದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಅಕ್ರಮ ಮರಳು ಸಾಗಣೆ ಕುರಿತಾಗಿ ಆರೋಪ ಹಾಗೂ ಸ್ಪಷ್ಟನೆ :

ಶೃಂಗೇರಿ : ಶೃಂಗೇರಿಯ ಮರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮರಳು ಲಾಟ್ ನಿಂದ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ನೂತನ್ ಕುಮಾರ್ ಎಂಬುವವರು ಅನುಮತಿ ಇಲ್ಲದೆ ಮರಳು ಗಣಿಗಾರಿಕೆ ಮಾಡಿದ್ದಾರೆ ಎಂದು ಮರ್ಕಲ್ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಅವರು ಆರೋಪಿಸಿದ್ದಾರೆ. ನಿಯಮದ ಪ್ರಕಾರ ಜೆ.ಸಿ.ಬಿ ಬಳಸುವಂತಿಲ್ಲ, ಹಾಗೆಯೇ ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ, ಗಮನಕ್ಕೆ ತಾರದೆ ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ನೂತನ್ ಕುಮಾರ್ ಅವರು ಮರಳು ಗಣಿಗಾರಿಕೆ ಮಾಡಿದ್ದಾರೆ, ಇದಕ್ಕೆ ಪಂಚಾಯಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು. ಈ ಕುರಿತು ದೂರು ನೀಡಲು ಸಿದ್ದತೆ ನಡೆಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ನೂತನ್ ಕುಮಾರ್ ರಿಂದ ಆರೋಪಕ್ಕೆ ಸ್ಪಷ್ಟನೆ :

ಈ ಆರೋಪದ ಸಂಬಂಧ ನೂತನ್ ಕುಮಾರ್ ಸ್ಪಷ್ಟನೆ ನೀಡಿದ್ದು ಪಂಚಾಯತಿ ಸದಸ್ಯ ಪ್ರಶಾಂತ್ ರ ಆರೋಪಕ್ಕೆ ಹುರುಳಿಲ್ಲ, ನನ್ನ ವೈಯಕ್ತಿಕ ಕೆಲಸಕ್ಕೆ ಮರಳು ತೆಗೆದುಕೊಂಡು ಹೋಗಿಲ್ಲ, ಗ್ರಾಮಸ್ಥರ ಬೇಡಿಕೆಯ ಮೇಲೆ ಅವರ ಸಮ್ಮುಖದಲ್ಲಿ ಹಳ್ಳಿ ರಸ್ತೆಗಳಿಗೆ ಹಾಕಲು ಗೊಣೆ ತೆಗೆಯ‌ಲಾಗಿದೆ ಯಾರು ಬೇಕಾದರೂ ಬಂದು ನೋಡಬಹುದು ಎಂದಿದ್ದಾರೆ. ಮಳೆಗಾಲ ಆರಂಭಕ್ಕೆ ಇನ್ನೇನು ಬೆರಳಣಿಕೆಯ ದಿನಗಳಿವೆ, ಶೃಂಗೇರಿಯ ಮರ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಸ್ಮುಡಿ, ಹುಲ್ಸೆ ಭಾಗದ ರಸ್ತೆಗಳಲ್ಲಿ ಮಳೆಗಾಲ ಆರಂಭವಾದರೆ ಒಂದು ಕಿಲೋಮೀಟರ್ ಗಿಂತಲೂ ಅಧಿಕ ದೂರದಷ್ಟು ಪ್ರದೇಶಕ್ಕೆ ವಾಹನ ಸಂಚಾರ ನಡೆಸುವುದು ಕಷ್ಟವಾಗುತ್ತದೆ, ಈ ನಿಟ್ಟಿನಲ್ಲಿ ಗ್ರಾಮಸ್ಥರ ಹಾಗೂ ಸ್ಥಳೀಯರ ಕೋರಿಕೆಯ ಮೇರೆಗೆ ಗೊಣೆಕಲ್ಲು ಹಾಕಲಾಗಿದೆ ಇದನ್ನು ಮರಳು ಎಂದು ಬಿಂಬಿಸಿ ನಮ್ಮ ಮೇಲೆ ಆರೋಪ ಮಾಡಲಾಗಿದೆ, ಉಳಿದ ರಸ್ತೆಗಳಿಗೆ ಪಂಚಾಯತ್ ನವರೇ ಗೊಣೆಹಾಕಿ ಸರಿಪಡಿಸಲಿ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನೂತನ್ ಕುಮಾರ್ ಹೇಳಿದ್ದಾರೆ.

ಅಕ್ರಮವಾಗಿ ಜೆಸಿಬಿಯಿಂದ ಬೇಲಿ ಕಿತ್ತ ಆರೋಪ ; ದೂರು ದಾಖಲು : 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಾವಡಿ ಗ್ರಾಮದ ಸೀಗೆಮನೆ ರಿಚ್ಚಪ್ರಭು ಎಂಬುವವರ ಸೇರಿದ ಸರ್ವೇ ನಂಬರ್ 112,114 ರ ಜಾಗಕ್ಕೆ ಈಜಾಕ್ ಪ್ರಭು, ರಾಜೇಶ,ಗಿರೀಶ, ಹಂಚಲಿ ರಾಘವೇಂದ್ರ ಎಂಬುವವರು ಜೆಸಿಬಿ ತಂದು ಬೇಲಿಯನ್ನು ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ, ಹಾಗೂ ಜಮೀನಿನ ತಂಟೆ ತಕರಾರಿಗೆ ಬಾರದಂತೆ ಸೂಕ್ತ ಬಂದೋಬಸ್ತ್ ನೀಡಬೇಕೆಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 


ಶಿವಮೊಗ್ಗ : 

ತೀರ್ಥಹಳ್ಳಿ : ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಕಿಮ್ಮನೆ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಮನೆಯ ಮುಂಭಾಗದಿಂದ ಆರಂಭವಾದ ಪಾದಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಅವರು ಈ ನೂತನವಾಗಿ ಪರಿಷ್ಕರಣೆಗೊಂಡ ಪಠ್ಯಪುಸ್ತಕದಲ್ಲಿ ಮನುವಾದಿಗಳನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಅವಮಾನಿಸಲಾಗಿದೆ. ಈ ಪಠ್ಯಪರಿಷ್ಕರಣೆಯಿಂದ ಉಂಟಾದ 500 ಕೋಟಿ ನಷ್ಟವನ್ನು ಶಿಕ್ಷಣ ಸಚಿವರು ಹಾಗೂ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ರೋಹಿತ್ ಚಕ್ರತೀರ್ಥ ಭರಿಸಲಿ ಎಂದರು. ಇಂದು ಬೆಳಗ್ಗೆ ಕುಪ್ಪಳ್ಳಿಯಿಂದ ಆರಂಭಗೊಂಡ ಪಾದಯಾತ್ರೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಡಿನ ಕವಿ ಕುವೆಂಪು ಅಂದರೆ ಕನ್ನಡ, ಸಾಮಾಜಿಕ ಸುಧಾರಕ ಬಸವಣ್ಣ ಎಂದರೆ ನಮ್ಮ ನಾಡು ಕರ್ನಾಟಕ. ಇಂತಹ ಶ್ರೇಷ್ಟ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳಿಗೆ ಅವಮಾನವಾಗಿದೆ. ಇದನ್ನು ನಾವು ಎಂದಿಗೂ ಸಹಿಸಲು ಸಾಧ್ಯವಿಲ್ಲ. ನಮ್ಮ ನಾಡು ಹಾಗೂ ನಾಡಗೀತೆಗೆ ಅವಮಾನಮಾಡಲಾಗಿದೆ ಇದನ್ನು ಕನ್ನಡಿಗರು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದರು. 

ಕೊಡಗು : 

ಮಾದಕ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿದ್ದವರು ಸೆರೆ

ಕೊಡಗು ಜಿಲ್ಲೆಯ ವಿರಾಜಪೇಟೆ ಸುಂಕದ ಕಟ್ಟೆಬಳಿಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ಮಾರಾಟಕ್ಕೆಂದು ಯತ್ನಿಸಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಬೀವುಲ್ಲಾಖಾನ್, ಫರೀದ್, ಕೆ.ಬೋಪಣ್ಣ, ಕೆ.ವಿ ಸುನೀಲ್, ಎಂ.ಕೆ. ಹೈದರ್ ಆಲಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 15.5ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್, 760 ಗ್ರಾಂ ಗಾಂಜಾ, 3700 ರೂಪಾಯಿ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು ಸಂಪೂರ್ಣ ತನಿಖೆಯ ನಂತರ ಈ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.