ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ನದಿಗೆ ಈಜಲೆಂದು ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. 

ಶಿವಮೊಗ್ಗದ ಸೂಳೆಬೈಲ್ ನಿವಾಸಿ ರಿಹಾನ್ ಇತ್ತೀಚೆಗಷ್ಟೇ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದ. ಆತನಿಗೆ ಇಂದು ಪರೀಕ್ಷೆ ಇತ್ತು ಆದರೆ ವಿಧಿಯಾಟವೇ ಬೇರೆ ರೀತಿಯಲ್ಲಿ ನಡೆದಿದೆ.  

ಇದನ್ನೂ ಓದಿ :  ಭೂಕುಸಿತ ಸಂಭವಿಸುವ ಭೀತಿ ಹಿನ್ನೆಲೆ ; ಮಳೆಗಾಲದಲ್ಲಿ ಮರಗಳ ಸಾಗಾಣಿಕೆಗೆ ತಡೆಯೊಡ್ಡುವಂತೆ ಸಾರ್ವಜನಿಕರ ಆಗ್ರಹ

ತನ್ನ ಸ್ನೇಹಿತರೊಂದಿಗೆ ಈಜಲು ಶಿವಮೊಗ್ಗ ನಗರದ ಹೊರವಲಯವಾದ ಪುಟ್ಟಪ್ಪನ ಕ್ಯಾಂಪ್ ಬಳಿ ತುಂಗಾನದಿಗೆ ಈಜಲು ತೆರಳಿದ್ದ ಅಬ್ದುಲ್ ರಿಹಾನ್ ಈಜುವ ಸಮಯದಲ್ಲಿ ನದಿಯ ಆಳವನ್ನು ಅರಿಯದೆ ಮುಳುಗಿದ್ದಾನೆ. ಈ ಸಮಯದಲ್ಲಿ ಆತನು ಮೇಲೆ ಬರಲಾಗುತ್ತಿಲ್ಲವೆಂದು ಸನ್ನೆ ಮಾಡುತ್ತಿದ್ದರೂ ಕೂಡ ಉಳಿದ ಗೆಳೆಯರು ಆತ ತಮಾಷೆ ಮಾಡುತ್ತಿದ್ದಾನೆಂದೆನಿಸಿ ಸುಮ್ಮನಾಗಿದ್ದಾರೆ. 

ಕೆಲ ಸಮಯ ಕಳೆದರೂ ಕೂಡ ಆತ ಮೇಲೆ ಬಾರದೇ ಇರುವುದನ್ನು ಕಂಡ ಗೆಳೆಯರು ಆತಂಕದಿಂದ ಬಂದು ರಿಹಾನ್ ನ ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಕುಟುಂಬವರ್ಗದವರು ಪೊಲೀಸರಿಗೆ ಮಾಹಿತಿ ನೀಡಿ ಅಗ್ನಿಶಾಮಕದಳಕ್ಕೆ ತಿಳಿಸಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ನದಿಯಲ್ಲಿ ಎಷ್ಟೇ ಹುಡುಕಿದರೂ ಕೂಡ ಆತನ ಮೃತದೇಹ ಪತ್ತೆಯಾಗಿಲ್ಲ. 

ಘಟನಾ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ. ಯುವಕನನ್ನು ಕಳೆದುಕೊಂಡ ಪೋಷಕರು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ವಿಸ್ಮಯ ಎಂಬಂತೆ ಈಚಲು ಮರದಲ್ಲಿ ಮೂಡಿದ ಗಣಪ ; ಸ್ಥಳೀಯರಿಂದ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ, ಪ್ರಾರ್ಥನೆ :

ಚಿಕ್ಕಮಗಳೂರು : ತರಕಾರಿಗಳು, ಹಣ್ಣುಗಳು ವಿವಿಧ ಆಕಾರ ವಿವಿಧ ರೀತಿಗಳಲ್ಲಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ ಹೊಲವೊಂದರಲ್ಲಿರುವ ಮರದಲ್ಲಿ ಗಣಪತಿಯ ಆಕೃತಿ ನಿರ್ಮಾಣವಾಗಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಚಿಕ್ಕಮಗಳೂರಿನ ಹೊಲವೊಂದರಲ್ಲಿರುವ ಈಚಲು ಮರದಲ್ಲಿ ಗಣಪನ ಆಕಾರ ಮೂಡಿದೆ. ಈ ಗಣಪನನ್ನು ಕಂಡು ಜನ ಭಕ್ತಿ ಭಾವಗಳಿಗೊಳಗಾಗಿದ್ದಾರೆ. ಗಣಪತಿಯನ್ನೇ ಹೋಲುವ ಸೊಂಡಿಲು, ಕಣ್ಣು, ಕೈ, ದೇಹದ ಆಕಾರ ಮರದ ಬುಡದಲ್ಲಿ ಮೂಡಿದೆ. ಸ್ಥಳೀಯರು ಬಂದು ಭಕ್ತಿ ಭಾವಗಳಿಂದ ಪೂಜೆ, ಪ್ರಾರ್ಥನೆಯನ್ನು ಪ್ರತಿನಿತ್ಯವೂ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿದ್ದು, ಎಲ್ಲ ಗಣಪತಿಗಳು ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ ಈ ಈಚಲು ಮರದಲ್ಲಿ ಉದ್ಭವಿಸಿರುವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿರುವುದು ಜನರಲ್ಲಿ ಇನ್ನಷ್ಟು ಅಚ್ಚರಿ ಮೂಡಿಸಿದೆ. 

ಕೌತುಕದಿಂದ ಮರದಲ್ಲಿ ಮೂಡಿರುವ ಗಣಪನನ್ನು ನೋಡಲು ಬರುವ ಜನರು ನಂತರದಲ್ಲಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿ ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.