ಚಿಕ್ಕಮಗಳೂರು : 

ಫಸಲು ನೀಡುವ ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡಿದ ಆರೋಪ ; ಸ್ಥಳೀಯರಿಂದ ಪ್ರತಿಭಟನೆ

ಬಾಳೆಹೊನ್ನೂರು : ಶಂಕರ್ ಎಂಬ ಬಾಳೆಹೊನ್ನೂರಿನ ಖಾಂಡ್ಯದ ರೈತ ಹಿಂದಿನಿಂದಲೂ ಕೃಷಿಯನ್ನು ತಮ್ಮ ಜೀವನಕ್ಕಾಗಿ ಆಧರಿಸಿ, ತಮ್ಮ ಖಾತೆ ಹಾಗೂ 20 ಗುಂಟೆ ಒತ್ತುವರಿ ಜಾಗದಲ್ಲಿ ಹೊಂದಿದ್ದ 80 ಸಣ್ಣ ಗಿಡ ಹಾಗೂ 200ಕ್ಕಿಂತ ಅಧಿಕ ದೊಡ್ಡ ಗಿಡಗಳು ಐದು ವರ್ಷದ ಫಸಲು ನೀಡುವಂತಹುದ್ದು, ಈ ಗಿಡಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಡಿದು ಹಾಕಿದ್ದಾರೆ ಎಂದು ಆರೋಪಿಸಿ ಆಕ್ರೋಶದಿಂದ ಸುರಿವ ಮಳೆಯನ್ನೂ ಲೆಕ್ಕಿಸದೇ ಅರಣ್ಯ ಇಲಾಖೆ ಕಛೇರಿ ಮುಂದೆ ಧರಣಿ ನಡೆಸಿದರು. ಅರಣ್ಯ ಇಲಾಖೆಯ ಕಛೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಛೀಮಾರಿ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಂತೆಯೇ ಈ ರೀತಿಯ ದೌರ್ಜನ್ಯ ಯಾವುದೇ ಕಾರಣಕ್ಕೂ ಇತರರ ಮೇಲಾಗಬಾರದು ಈ ನಿಟ್ಟಿನಲ್ಲಿ ನಾಳೆ ಬೆಳಗ್ಗೆ ಅದೇ ಜಾಗದಲ್ಲಿ ಗಿಡಗಳನ್ನು ನೆಟ್ಟು ನಂತರದಲ್ಲಿ ಮುಂದಿನ ನಡೆಯ ಕುರಿತು ವ್ಯವಹರಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಶಂಕರಾಚಾರ್ಯರ ಪ್ರತಿಮೆಗೆ ಹಸಿರು ಧ್ವಜ ಹಾಕಿದ ಪ್ರಕರಣದ ಕುರಿತು ಹರೀಶ್ ಶೆಟ್ಟಿ ಸ್ಪಷ್ಟನೆ :

ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2020 ರ ಆಗಸ್ಟ್ 13 ರಂದು ಶೃಂಗೇರಿಯ ಶಂಕರಾಚಾರ್ಯ ವೃತ್ತದಲ್ಲಿರುವ ಆದಿಶಂಕರಾಚಾರ್ಯರ ಮೂರ್ತಿಯ ಮೇಲೆ ಹಸಿರು ಬಣ್ಣದ ಧ್ವಜವನ್ನು ಹಾಕಲಾಗಿತ್ತು, ಇದರಿಂದಾಗಿ ಶ್ರೀ ಮಠದ ಭಕ್ತರ ಭಾವನೆಗಳಿಗೆ ಘಾಸಿಯಾಗಿತ್ತು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು ಈ ಪ್ರತಿಭಟನೆಯಲ್ಲಿ ತಾನೂ ಸೇರಿದಂತೆ ಮಾಜಿ ಸಚಿವರಾದ D.N ಜೀವರಾಜ್, ವೇಣುಗೋಪಾಲ್, ಹಾಗೂ ಶ್ರೀ ರಾಮ ಸೇನೆಯ ಮುಖಂಡ ಅರ್ಜುನ ಪಾಲ್ಗೊಂಡಿದ್ದು, ಎರಡು ವರ್ಷಗಳ ಬಳಿಕದಲ್ಲಿ ಮತ್ತೆ ಕೋಮು ಭಾವನೆಗಳನ್ನು ಕೆರಳಿಸುವ ಸಲುವಾಗಿ ಹಾಗೂ ದುರುದ್ದೇಶಪೂರಿತವಾಗಿ ನಮ್ಮಗಳ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಹರೀಶ್ ವಿ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಇಂತಹುದರಿಂದ ನಮ್ಮನ್ನು ಬೆದರಿಸಲು ಎಂದಿಗೂ ಸಾಧ್ಯವಿಲ್ಲ, ಧರ್ಮದ ವಿಚಾರವಾಗಿ ಇಂತಹ ನೂರು ಕೇಸುಗಳನ್ನು ಹಾಕಿಸಿಕೊಳ್ಳಲು ನಾವು ಸಿದ್ಧರಿದ್ದೇವೆ, ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದ್ದು ನೊಟೀಸ್ ಬಂದ ನಂತರದಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದರು. ನಾಲ್ಕು ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ದಕ್ಷಿಣಾಮ್ನಾಯ ಶೃಂಗೇರಿಯ ಶ್ರೀ ಶಾರದಾ ಪೀಠವು ಹೆಚ್ಚಿನ ಧಾರ್ಮಿಕತೆಯನ್ನು ಹೊಂದಿದ್ದು ಶಂಕರಾಚಾರ್ಯರ ಮೂರ್ತಿಯ ಮೇಲೆ ಧ್ವಜ ಹಾಕಿದ್ದು ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದೆ ಈ ನಿಟ್ಟಿನಲ್ಲಿ ನಾವು ರಸ್ತೆಗಿಳಿದು ಹೋರಾಟ ಮಾಡಿದ್ದೇವೆ ಮುಂದೆಯೂ ಇಂತಹ ಘಟನೆಗಳ ವಿರುದ್ಧವಾಗಿ ನಾವು ಸದಾ ಧ್ವನಿಯೆತ್ತುತ್ತೇವೆ ಎಂದರು. 

ಬೇಕರಿಯಲ್ಲಿ ಸಂಗ್ರಹಣೆ ಮಾಡಿಡಲಾಗಿದ್ದ ಲೀಟರ್ ಗಟ್ಟಲೆ ವೈನ್ ವಶ :

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಮರಿಯ ಬೇಕರಿ ಮೇಲೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು ಹೋಂ ಮೇಡ್ ವೈನ್ ನ್ನು ವಶಕ್ಕೆ ಪಡೆದಿದ್ದಾರೆ. ಬೇಕರಿಯ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾರೆ. ಬೇಕರಿ ಮೇಲೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು 16.50 ಲೀಟರ್ ಹೋಂ ಮೇಡ್ ವೈನ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು ಆರೋಪಿ ಲಿಯೊನಾರ್ಡೋ ಡಿಸೋಜಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಬಕಾರಿ ಇನ್ಸ್ಪೆಕ್ಟರ್ ವಿಠಲ ಪಿ, ಜೀರಂಕಲಗಿ. ಸಬ್ ಇನ್ಸ್ಪೆಕ್ಟರ್ ಎಸ್.ಹೆಚ್ ರೇಖಾ, ಎಂ.ವಿ ಲೋಕೇಶ್, ಕಿಜಾರ್ ಅಹ್ಮದ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾಂಗ್ರೆಸ್ ಕಾರ್ಯಕರ್ತರ ಬಂಧನ :

ಚಿಕ್ಕಮಗಳೂರು : ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮನದ ಹಿನ್ನೆಲೆ ಬೆಂಗಳೂರು ಏರ್ ಪೋರ್ಟ್ ಮುತ್ತಿಗೆಗೆ ತೆರಳುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಮುತ್ತಿಗೆ ಹಾಕಲೆಂದು ತೆರಳುತ್ತಿದ್ದವರನ್ನು ಪೊಲೀಸರು ಅಡ್ಡಗಟ್ಟಿ ವಶಕ್ಕೆ ಪಡೆದರು. ಕೆಪಿಸಿಸಿ ಕಿಸಾನ್ ಸೆಲ್ ಅಧ್ಯಕ್ಷ ಸೇರಿದಂತೆ 30ಕ್ಕೂ ಹೆಚ್ಚು ಜನರ ಬಂಧನವಾಗಿದೆ ಇದರಲ್ಲಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಸೇರಿದಂತೆ 30 ಕ್ಕೂ ಹೆಚ್ಚು ಕಾರ್ಯಕರ್ತರಿದ್ದರು.

ಮತ್ತೆ ಘರ್ಜಿಸಿದ ಬುಲ್ಡೋಜರ್ :

ಚಿಕ್ಕಮಗಳೂರಿನ ಬುಲ್ಡೋಜರ್ ಬಾಬಾ ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರ ನೇತೃತ್ವದಲ್ಲಿ ಜೆಸಿಬಿ ಮೂಲಕ ಇನ್ನೊಂದು ಕಾರ್ಯಾಚರಣೆ ನಡೆದಿದೆ. ಕಳೆದ ಕೆಲದಿನಗಳ ಹಿಂದಷ್ಟೇ ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದ ನಗರಸಭೆ, ಇದೀಗ ಅಧ್ಯಕ್ಷರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಇನ್ನೊಂದು ಕಾರ್ಯಾಚರಣೆ ನಡೆಸಿದೆ. ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆ ಬಳಿ ನಗರಸಭೆಯ ಜಾಗವನ್ನು ಒತ್ತುವರಿ ಮಾಡಿ 30 ವರ್ಷಗಳಿಂದ ಅಕ್ರಮವಾಗಿ ಕಟ್ಟಡ ಕಟ್ಟಿ ಅದನ್ನು ಒಳಬಾಡಿಗೆ ವ್ಯಾಪಾರಕ್ಕೆ ನೀಡಿ, ಆ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದ್ದ ಕಟ್ಟಡವನ್ನು ನಗರಸಭೆ ಜೆಸಿಬಿ ಮೂಲಕ ಧರೆಗುರುಳಿಸಿದೆ.ಈ ಕುರಿತಾಗಿ ಮಾತನಾಡಿರುವ ಅವರು ನಗರಸಭೆ ವ್ಯಾಪ್ತಿಯಲ್ಲಿ ಇಂತಹ ಅನೇಕ ಅಕ್ರಮ ಕಟ್ಟಡಗಳಿದ್ದು ಅವುಗಳನ್ನು ಪಟ್ಟಿ ಮಾಡಿ ಶೀಘ್ರವೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು. 

ಹಾಸನ :

ಗ್ರಾಮಸ್ಥರಿಗೆ ಚಿರತೆಯ ಶವ ಪತ್ತೆ 

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬೈರಾಪುರ ಗ್ರಾಮದ ವ್ಯಾಪ್ತಿಯಲ್ಲಿ ದನ ಮೇಯಿಸುತ್ತಿದ್ದ ಗ್ರಾಮಸ್ಥರಿಗೆ ಚಿರತೆಯ ಶವ ದೊರೆತಿದೆ. ಅಂದಾಜು ಎರಡು ವರ್ಷಪ್ರಾಯದ ಗಂಡು ಚಿರತೆಯ ಶವ ಪತ್ತೆಯಾಗಿದ್ದು ಮುಳ್ಳುಹಂದಿಯನ್ನು ಭೇಟೆಯಾಡಲು ಹೋಗಿ ಚಿರತೆಯು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಚಿರತೆಯ ಮರಣೋತ್ತರ ಪರೀಕ್ಷೆಯ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಇಷ್ಟುದಿನಗಳ ಕಾಲ ಹಾಸನ ಭಾಗದಲ್ಲಿ ನಿರಂತರವಾಗಿ ಆನೆಗಳು ದಾಳಿ ನಡೆಸುತ್ತಿದ್ದು ಇದೀಗ ಚಿರತೆಯ ಶವ ಕಂಡ ಗ್ರಾಮಸ್ಥರು ಆತಂಕದಲ್ಲಿರುವಂತಾಗಿದೆ.


ಕೊಡಗು : 

ಭೀಕರ ರಸ್ತೆ ಅಪಘಾತದಲ್ಲಿ ಶಿಕ್ಷಕಿ‌ಯ ದುರ್ಮರಣ

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹುಲುಸೆ ಎಂಬಲ್ಲಿ ಪಿಕಪ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ನೇರುಗಳಲೆ ಸರ್ಕಾರಿ ಶಾಲೆ ಶಿಕ್ಷಕಿ ಅಶ್ವಿನಿ(45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆಚ್ಚಿನ ಶಿಕ್ಷಕಿಯ ಅಕಾಲಿಕ ಮರಣದ ಕುರಿತು ಸಹ ಶಿಕ್ಷಕರು ಹಾಗೂ ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ : 

ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ 

ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾಚಾರದ ವಿರುದ್ಧ ಮಾತನಾಡಿದ ಕೆ.ಎಸ್ ಈಶ್ವರಪ್ಪ ಯುವಕರು ಭಯೋತ್ಪಾದಕರ ರೀತಿ ಆಗುತ್ತಾರೆಂದು ಕಾಂಗ್ರೆಸ್ ನವರು ಹೇಳುತ್ತಾರೆ, ನಮ್ಮ ದೇಶದ ಯುವಕರು ಭಯೋತ್ಪಾದಕರಾಗಲ್ಲ ಕಾಂಗ್ರೆಸ್ ನವರು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ, ಸರ್ಕಾರದ ಎಲ್ಲಾ ಯೋಜನೆಗಳ ಕುರಿತು ಮೊದಲು ತಿಳಿದುಕೊಂಡು ನಂತರದಲ್ಲಿ ತಮಗಿರುವ ಅಸಮಾಧಾನಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಬೇಕೆಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನಕ್ಕೆ ದ್ರೋಹ ಮಾಡ್ತಿದ್ದಾರೆ, ಅಂಬೇಡ್ಕರ್ ಗೆ ಅವಮಾನ ಮಾಡ್ತಿದ್ದಾರೆ ಎಂದ ರಾಹುಲ್ ಗಾಂಧಿ ವಿಚಾರಣೆಗೆ ಕರೆದರೆ ತಪ್ಪಾ, ರಾಹುಲ್ ಗಾಂಧಿ ಈ ದೇಶದ ಒಬ್ಬ ಪ್ರಜೆ. ಅವರನ್ನು ಇನ್ನು ಬಂಧಿಸಿಲ್ಲ, ಜೈಲಿಗೆ ಕಳುಹಿಸಿಲ್ಲ, ವಿಚಾರಣೆಗೆ ಕರೆಯಲೇ ಬೇಡಿ ಎಂದು ನಿಮ್ಮ ಎಐಸಿಸಿಯಲ್ಲಿ ಒಂದು ರೆಸ್ಯೂಲುಷನ್ ಮಾಡಿ ಎಂದು ಕುಟುಕಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆಯಲೇಬೇಡಿ ಅಂತಾ ರೆಸ್ಯೂಲುಷನ್ ಮಾಡಿ ಎಂದು ಟೀಕೆಮಾಡಿದರು.