RSS ಚಡ್ಡಿಯನ್ನು ಸುಟ್ಟು ಪ್ರತಿಭಟಿಸಿದ ಕಾಂಗ್ರೆಸ್ :
ಚಿಕ್ಕಮಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಶದ ಭಾಗವಾದ ಚಡ್ಡಿಯನ್ನು ಸುಟ್ಟು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು. Rss ಚಡ್ಡಿಗೆ ಧಿಕ್ಕಾರ, ಬಿಜೆಪಿಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಾ, NSUI ರಾಜ್ಯಾಧ್ಯಕ್ಷರ ಬಂಧನವನ್ನು ಖಂಡಿಸುತ್ತೇವೆ ಇದನ್ನು ನಾವು ಒಪ್ಪಲಾರೆವು ಎಂದರು. ಈ ಪ್ರತಿಭಟನಾ ಸಂದರ್ಭದಲ್ಲಿ ಕಾಂಗ್ರೆಸ್ ನ ಪ್ರಮುಖರಾದ ಡಾ. ಕೆಪಿ ಅಂಶುಮಂಥ್, ಹಾಗೂ ಇತರೆ ಪದಾಧಿಕಾರಿಗಳು ಹಾಜರಿದ್ದರು.
ಕಾಂಗ್ರೆಸ್ ಗೆ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ :
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಧನೆ ಕುರಿತಾಗಿ ವಿ.ಎಸ್ ಉಗ್ರಪ್ಪ ಚರ್ಚೆಯಾಗಲಿ ಎಂದಿದ್ದಾರೆ. ಅವರು ವೇದಿಕೆ ರೂಪಿಸಲು ಸಂಘ ಬರುವುದಿಲ್ಲ ನಾವೇ ಬರುತ್ತೇವೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿಟಿ ಕುಟುಕಿದ್ದಾರೆ. ಈ ಕುರಿತು ಮಾತನಾಡಿದ ಅವರು ರಾಜ್ಯದ ಬಹುತೇಕ ಕಡೆಗಳಲ್ಲಿ ಸಂಘದ ಚಡ್ಡಿಯನ್ನು ಸುಡುವ ಕೆಲಸವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ, ಅವರು ಇಂತಹ ಕೆಲಸವನ್ನೇ ಮಾಡಿಕೊಂಡಿರಲಿ, ನಾನು ನಮ್ಮ ಕಾರ್ಯಕರ್ತರಿಗೆ ಹಳೆಯ ಚಡ್ಡಿಗಳನ್ನು ನೀಡುವಂತೆ ಕರೆ ನೀಡುತ್ತೇನೆ, ಚಡ್ಡಿಯ ಕೊರತೆಯಾಗದಂತೆ ಅವರು ನೋಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನ ವಿರುದ್ಧ ವ್ಯಂಗ್ಯವಾಡಿದರು.
ಬಾಳೆಹೊನ್ನೂರು ಬಂದ್ :
ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಆಗ್ರಹಿಸಿ ಇಂದು ಬಾಳೆಹೊನ್ನೂರು ಬಂದ್ ನಡೆಯಿತು. ವರ್ತಕರು ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಬೆಂಬಲ ಸೂಚಿಸಿದರು. ನಗರದ ಜೆಸಿಐ ವೃತ್ತದ ಬಳಿಯಲ್ಲಿ ಅನೇಕ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಸಾರ್ವಜನಿಕರು, ಕೆಲಕಾಲ ರಸ್ತೆ ತಡೆ ನಡೆಸಿ, ಅಧಿಕಾರಿಗಳಿಗೆ ಧಿಕ್ಕಾರ ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರದಲ್ಲಿ ಅವರ ಅಹವಾಲುಗಳನ್ನು ಸ್ವೀಕರಿಸಲು ಮುಂದಾದ DHO ಅವರು ಪ್ರಮುಖರನ್ನು ಕರೆಸಿ ಸಭೆ ನಡೆಸಿ ಅವರ ಮನವೊಲಿಸಲು ಪ್ರಯತ್ನಿಸಿದರು. ಒಂದು ವಾರದೊಳಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಭರವಸೆಯನ್ನು ಅಧಿಕಾರಿಗಳು ಈ ಸಂದರ್ಭದಲ್ಲಿ ನೀಡಿದರು.
ಕುವೆಂಪು ಅವರಿಗೆ ಅಪಮಾನ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ :
ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಯುವ ಒಕ್ಕಲಿಗರ ವೇದಿಕೆಯ ಪದಾಧಿಕಾರಿಗಳು ಇಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.
16 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ ಚಿಕ್ಕಮಗಳೂರಿನ ಯುವತಿ :
ಕಾಫಿನಾಡಿನ ಯುವತಿಯೊಬ್ಬಳು ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಬಿ. ಎಸ್ಸಿ ತೋಟಗಾರಿಕಾ ವಿಷಯದಲ್ಲಿ 16 ಚಿನ್ನದ ಪದಕಗಳನ್ನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಆಲ್ದೂರಿನ ಅಸ್ಮತ್ ಅಲಿ ಹಾಗೂ ರಹೀಮ ಭಾನು ದಂಪತಿಯ ಪುತ್ರಿ ಉಮ್ಮೆಸಾರಾ ಈ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಅನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಡಾ. ಎಂ.ವಿ ಉರಾಳ್ ಅವರಿಗೆ ಸಾಮಾಜಿಕ ಸೇವಾ ಪ್ರಶಸ್ತಿ
ಶೃಂಗೇರಿ : ವೆರಿಕೋಸ್ ವೇಯ್ನ್ ತಜ್ಞವೈದ್ಯರಾದ ಡಾ.ಎಂ.ವಿ ಉರಾಳ್ ಅವರ ವೈದ್ಯಕೀಯ ಕ್ಷೇತ್ರದ ಸಾಧನೆ ಹಾಗೂ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಸಾಮಾಜಿಕ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಶಸ್ತ್ರಚಿಕಿತ್ಸೆ ಇಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ವೆರಿಕೋಸ್ ವೇನ್ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರು. ಇವರ ಬಳಿಯಲ್ಲಿ ಚಿಕಿತ್ಸೆ ಕಂಡುಕೊಂಡ ಅನೇಕರು ಇಂದು ರೋಗಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಅವರ ಸೇವಾ ಮನೋಭಾವನೆಯನ್ನು ಕಂಡು ಸಂಜೆ ಪ್ರಭ ಪತ್ರಿಕೆಯ ದಶಮ ಸಂಭ್ರಮ ಮಹೋತ್ಸವದಲ್ಲಿ ಡಾಕ್ಟರ್ ಎಂ.ವಿ ಉರಾಳ್ ಅವರಿಗೆ ಸಂಜೆಪ್ರಭ ಸಾಮಾಜಿಕ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಶಿವಮೊಗ್ಗ :
ಕೇಂದ್ರ ಹಾಗೂ ರಾಜ್ಯದ ಪೊಲೀಸರಿಂದ ಸ್ಯಾಟಲೈಟ್ ಫೋನ್ ಕುರಿತಾಗಿ ಕಾರ್ಯಾಚರಣೆ :
ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್ ಫೋನ್ ಗಳ ಕುರಿತಾಗಿ ಕೇಂದ್ರ ಹಾಗೂ ರಾಜ್ಯದ ಪೊಲೀಸರು ಜಂಟಿ ಕಾರ್ಯಾಚರಣೆಯ ಮೂಲಕ ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿಯನ್ನು ಗೃಹ ಸಚಿವ ಆರಗಜ್ಞಾನೇಂದ್ರ ನೀಡಿದರು. ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆಯನ್ನು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸಲಾಗುವುದು ಎಂದರು.
ಸಾಗರ : ಅಡಿಕೆ ಕಳ್ಳರು ಪೊಲೀಸರ ಬಲೆಗೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿ ಗ್ರಾಮಾಂತರ ಪ್ರದೇಶದ ವಿವಿಧ ಕಡೆಗಳಲ್ಲಿ ಅಡಿಕೆ ಕಳ್ಳತನ ನಡೆಸಿದ್ದ ಆರೋಪಿಗಳನ್ನು ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಭಾನುವಾರ ಸೆರೆ ಹಿಡಿದಿದ್ದಾರೆ. ಕದ್ದ ಮಾಲನ್ನು ಮತ್ತು ಕಳ್ಳತನಕ್ಕೆ ಬಳಸಲಾಗಿದ್ದ ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳಿಂದ 8.35 ಲಕ್ಷ ರೂ. ಮೌಲ್ಯದ ಸಿಪ್ಪೆಗೋಟು, ಚಾಲಿ ಹಾಗೂ ಕೆಂಪು ಅಡಕೆ ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಓಮ್ನಿ, 2 ದ್ವಿಚಕ್ರವಾಹನ ವನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಹಾಸನ :
ಹಾಸನದ ನಗರಸಭೆ ಸದಸ್ಯನ ಹತ್ಯೆ ಪ್ರಕರಣ ಇಬ್ಬರ ಬಂಧನ
ಕಳೆದ ಕೆಲ ದಿನಗಳ ಹಿಂದಷ್ಟೇ ದ್ವಿಚಕ್ರವಾಹನದಲ್ಲಿ ತೆರಳುವಾಗ ಹಾಸನ ನಗರಸಭೆ ಸದಸ್ಯ ಪ್ರಶಾಂತ್ ಬರ್ಬರವಾಗಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿಗಳ ಬಂಧನದ ನಂತರ ಘಟನೆಗೆ ನಿಖರ ಕಾರಣಗಳೇನು ಎಂದು ತಿಳಿಯಲಿದೆ ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ. ಬಂಧಿತರ ವಿಚಾರಣೆ ನಡೆಯುತ್ತಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.



0 Comments