ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಹೊಂದಿದ್ದ ದ್ವಿತೀಯ ದರ್ಜೆ ಸಹಾಯಕ ತಿಮ್ಮಯ್ಯ ಅವರಿಗೆ ಸಂಬಂಧಿಸಿದ ಮನೆಗಳ ಮೇಲೆ ಹಾಗೂ ಕಛೇರಿಯ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ : ಕೊಪ್ಪ: ಪತ್ನಿಯನ್ನು ಹತ್ಯೆಗೈದು ಪತಿ ಪರಾರಿ, ಆರೋಪಿಗಾಗಿ ಪೊಲೀಸರ ಶೋಧ
ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪವು ತಿಮ್ಮಯ್ಯ ಅವರ ಮೇಲೆ ಕೇಳಿ ಬಂದಿತ್ತು, ಈ ನಿಟ್ಟಿನಲ್ಲಿ ಇಂದು ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತುಗಳ ಪತ್ರ ಹಾಗೂ ಚಿನ್ನ, ಬೆಳ್ಳಿ ನಗದನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು ಪುರಸಭೆಗೆ ಡಿ.ದರ್ಜೆ ನೌಕರನಾಗಿ ಕೆಲಸಕ್ಕೆ ಸೇರಿದ ತಿಮ್ಮಯ್ಯ 2021ರ ವರೆಗೂ ಅದೇ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ದ್ವಿತೀಯ ದರ್ಜೆ ಸಹಾಯಕರಾಗಿ ಬಡ್ತಿ ಹೊಂದಿದ ಅವರು ಚಿಕ್ಕಮಗಳೂರು ನಗರಸಭೆಗೆ ಕಡೂರಿನಿಂದ ವರ್ಗವಾಗಿದ್ದರು. ಪ್ರಸ್ತುತ ಅಜ್ಜಂಪುರ ಪಟ್ಟಣ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಿಮ್ಮಯ್ಯ ಅವರು ಆದಾಯಕ್ಕೂ ಮೀರಿ ಹಣಗಳಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಎಲ್ಲೆಡೆ ಕೇಳಿ ಬಂದಿತ್ತು.
ತಿಮ್ಮಯ್ಯನ ಸ್ವತ್ತುಗಳು :
ಮೂಲತಃ ಕಡೂರಿನವರಾದ ತಿಮ್ಮಯ್ಯ ಪುರಸಭೆ ಎದುರು ಸಿಪಿಸಿ ಕಾಲೋನಿಯಲ್ಲಿ ಮನೆ ಹೊಂದಿದ್ದಾರೆ, ಬಾಸೂರಿನಲ್ಲೊಂದು ಮನೆಯಿದೆ, ಅಲ್ಲೇ ಇರುವ ಅವರ ಜಮೀನಿನಲ್ಲಿ 200 ಕುರಿಗಳನ್ನು ಸಾಕಿರುವ ಶೆಡ್ ಇದೆ, ದಾಳಿಯ ಸಂದರ್ಭದಲ್ಲಿ ಅಂದಾಜು 100 ಗ್ರಾಂ ನಷ್ಟು ತೂಕದ ಬಂಗಾರ, ಬೆಳ್ಳಿ ವಸ್ತುಗಳು 200 ಗ್ರಾಂ, ಐದುಸಾವಿರ ರೂಪಾಯಿ ನಗದು ಪತ್ತೆಯಾಗಿದೆ. ಕಡೂರಿನ ಬಾಸೂರಿನಲ್ಲಿ 20 ಎಕರೆ ಜಮೀನು, ಕಡೂರಿನಲ್ಲಿ ಮೂರು ಅಂತಸ್ತುಗಳ ಮನೆ, 50 ಲಕ್ಷ ರೂಪಾಯಿ ಮೌಲ್ಯದ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಸೇರಿದಂತೆ ಅನೇಕ ಸ್ವತ್ತುಗಳ ದಾಖಲೆ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆಸಿದ್ದಾರೆ.
ಈ ದಾಳಿಯಲ್ಲಿ DYSP ಅನಿಲ್ ರಾಥೋಡ್, ಎಸಿಬಿ DSP ಸುನೀಲ್ ಕುಮಾರ್, ಸಿಪಿಐ ವಿನಾಯಕ ಬಿಲ್ಲವ, ಶ್ಯಾಮ ಸುಂದರ, ಸಿಬ್ಬಂದಿಗಳಾದ ಅನಿಲ್ ನಾಯ್ಕ, ಪ್ರಸಾದ್, ವೇದಾವತಿ, ಸತೀಶ್, ಮುಜೀಬ್, ದೇವರಾಜ್, ಭಾಗಿಯಾಗಿದ್ದರು




0 Comments