ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಗುದ್ದಿದ ಪರಿಣಾಮ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಗುದ್ದಿದೆ. ಒಂದೇ ಕುಟುಂಬದ ನಾಲ್ವರು ಕಾರಿನಲ್ಲಿ ಧರ್ಮಸ್ಥಳದ ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣ ನಡೆಸುತ್ತಿದ್ದರು ತಿಳಿದುಬಂದಿದೆ.

ಈ ಅಪಘಾತದಲ್ಲಿ ಓರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬರು ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರು ಮಹಿಳೆಯರು ಗಂಭೀರ ಗಾಯಕ್ಕೀಡಾಗಿದ್ದಾರೆ. ಈ ಅಪಘಾತದಲ್ಲಿ ಮೃತಪಟ್ಟವರನ್ನು ಕಿರಣ್ ಕುಮಾರ್ (23) ನರಸಿಂಹರಾಜ (58) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದವರು ಬೆಂಗಳೂರಿನ ರಾಜಾಜಿನಗರ ಮೂಲದವರು ಎಂದು ಗುರುತಿಸಲಾಗಿದೆ.

ಘಟನೆಯು ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. 

ತನು ಕೊಟ್ಟಿಗೆಹಾರ, ವರದಿಗಾರರು.