ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಮುವರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ - ನರಸಿಂಹರಾಜಪುರ ಮುಖ್ಯ ರಸ್ತೆಯಲ್ಲಿ ಇಂದು ಬೆಳಗ್ಗೆ ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ನರಸಿಂಹರಾಜಪುರದ ಕಡೆಯಿಂದ ಕೊಪ್ಪದ ಕಡೆಗೆ ಎರಡು ಸ್ಕೂಟಿ ಒಂದರ ಹಿಂದೊಂದು ಬರುತ್ತಿದ್ದು ಈ ಸಂದರ್ಭದಲ್ಲಿ ಪೊಲೀಸರು ತಪಾಸಣೆಗೆಂದು ವಾಹನವನ್ನು ಅಡ್ಡಗಟ್ಟಿದಾಗ ಸ್ಕೂಟಿಯ ಮುಂಭಾಗದಲ್ಲಿನ ಫೂಟ್ ರೆಸ್ಟ್ ನಲ್ಲಿ ಪ್ಲಾಸ್ಟಿಕ್ ಚೀಲ ಕಂಡು ಬಂದಿರುತ್ತದೆ. ಪೊಲೀಸರು ಚೀಲವನ್ನು ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಗೋಮಾಂಸವಿರುವುದು ಪತ್ತೆಯಾಗಿದೆ.
ಈ ಸಂಬಂಧ ಆರೋಪಿಗಳಲ್ಲಿ ದನದ ಮಾಂಸವನ್ನು ಸಾಗಾಟ ಮಾಡಲು ಪರವಾನಗಿ ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಹೊಂದದೇ ಇರುವುದಾಗಿ ಅರೋಪಿಗಳೇ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಂತರದಲ್ಲಿ ಪೊಲೀಸರು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಗೋಮಾಂಸ ಹಾಗೂ ಸಾಗಾಟಕ್ಕೆ ಬಳಸಿಕೊಳ್ಳುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗೋಮಾಂಸ ಸಾಗಾಟ ನಡೆಸುತ್ತಿದ್ದ ಮೊಹಮದ್ ತೌಶೀಪ್, ಅಬ್ದುಲ್ ಅಜೀಜ್ ಹಾಗೂ ಸುಲೇಮಾನ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರ ಬಳಿಯಿದ್ದ 19 ಕೆ.ಜಿ 840 ಗ್ರಾಂ ತೂಕದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕೊಪ್ಪ ಠಾಣೆಯ ಪಿಎಸ್ಸೈ ಶ್ರೀ ನಾಥ್ ರೆಡ್ಡಿ, ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.




0 Comments