ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಆರೋಗ್ಯ ಸೊಸೈಟಿ ಸಭೆಯಲ್ಲಿ ವಿವಿಧ ಅಧಿಕಾರಿಗಳನ್ನುದ್ದೇಶಿಸಿ ಹಾಗೂ ಸೌಲಭ್ಯಗಳ ಕುರಿತಾಗಿ ಮಾತನಾಡಿದ ಸಿಇಒ ಜಿ.ಪ್ರಭು ಆರೋಗ್ಯ ಇಲಾಖೆಯಲ್ಲಿ ನಡೆಯುವ ಯಾವುದೇ ಅಶಿಸ್ತನ್ನು ಸಹಿಸಲಾಗುವುದಿಲ್ಲ, ವೈದ್ಯಾಧಿಕಾರಿಗಳಿಗೆ ಅಸಹಕಾರ, ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವುದು, ಒಬ್ಬರ ಬದಲಿಗೆ ಇನ್ನೊಬ್ಬರನ್ನು ನಿಲ್ಲಿಸಿ ಬೇರೆಡೆಗೆ ತೆರಳುವುದು ಇಂತಹುದರಲ್ಲಿ ಯಾವುದಾದರೂ ಸಿಬ್ಬಂದಿಗಳು ಭಾಗಿಯಾಗಿ ಕರ್ತವ್ಯ ಲೋಪ ಎಸಗಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಎನ್.ಆರ್ ಪುರ: ಕೆರೆ ಹೂಳು ತೆಗೆಯದೆ ಬಿಲ್ ಮಾಡಿ ಹಗರಣ: ಅಧಿಕಾರಿ ಸಸ್ಪೆಂಡ್
ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಯೋಜನೆಯನ್ನು ರೂಪುಗೊಳಿಸಲಾಗಿದ್ದು ಸಮರ್ಪಕ ಸೌಲಭ್ಯಗಳನ್ನು ಹೊಂದಿದ್ದರೂ ಮಾಡುವ ಕೆಲಸಗಳಲ್ಲಿ ಬೇಜವಾಬ್ದಾರಿ ತೋರುವವರ ಮೇಲೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಶಿಶುಮರಣ ಪ್ರಮಾಣ ಹೆಚ್ಚಳ :
ಜಿಲ್ಲೆಯಲ್ಲಿ ಶಿಶುಗಳ ಮರಣ ಪ್ರಮಾಣವು ಹೆಚ್ಚಾಗುತ್ತಿದೆ ಎಂಬುದರ ಕುರಿತಾಗಿ ಮಾತನಾಡಿದ ಅವರು ಶಿಶುಗಳ ಹಾಗೂ ಗರ್ಭಿಣಿಯರ ಆರೋಗ್ಯಕ್ಕೆ ಯಾವುದೇ ತೊಡಕುಗಳು ಎದುರಾಗದಂತೆ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದರೂ ಕೂಡ ಶಿಶು ಮರಣ ಪ್ರಮಾಣದ ಸಂಖ್ಯೆ ಅಧಿಕವಾಗಿದೆ. ಈ ಸಂಬಂಧ ಹೆಚ್ಚಿನ ನಿಗಾವಹಿಸಿ ಲೋಪಗಳಿದ್ದರೆ ಸರಿದೂಗಿಸಿಕೊಂಡು ಹೋಗುವಂತೆ ಸೂಚಿಸಿದರು.
ಮೆಡಿಕಲ್ ಗಳಲ್ಲಿ ಮಾತ್ರೆ ಖರೀದಿಸುವಂತೆ ವೈದ್ಯರು ಚೀಟಿ ಬರೆಯುವಂತಿಲ್ಲ :
ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದ ಔಷಧ ದಾಸ್ತಾನಿದ್ದು, ಹೊಸದಾಗಿ ಬಂದಿರುವ ಔಷಧಿಗಳನ್ನಿಡಲು ಜಾಗದ ಸಮಸ್ಯೆಗಳಿರುವಂತಾಗಿದೆ. ಈ ರೀತಿಯ ಉತ್ಕೃಷ್ಟ ಗುಣಮಟ್ಟದ ಔಷಧಿಗಳು ಲಭ್ಯವಿರುವಾಗ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಬೇರೆ ಮೆಡಿಕಲ್ ಗಳಲ್ಲಿ ಔಷಧ ಖರೀದಿ ಮಾಡುವಂತೆ ವೈದ್ಯರು ಸೂಚಿಸುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಿದರು.
ಕನ್ಹಯ್ಯ ಹತ್ಯೆ ವಿರೋಧಿಸಿ ಚಿಕ್ಕಮಗಳೂರು ಹಾಗೂ ಶೃಂಗೇರಿಯಲ್ಲಿ ಪ್ರತಿಭಟನೆ :
ಚಿಕ್ಕಮಗಳೂರು : ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ದರ್ಜಿ ಕನ್ಹಯ್ಯನ ಹತ್ಯೆ ಮಾಡಿರುವ ಇಬ್ಬರು ಮುಸಲ್ಮಾನರ ಕೃತ್ಯವನ್ನು ಖಂಡಿಸಿ ಇಂದು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಚಿಕ್ಕಮಗಳೂರಿನ ಅಜಾದ್ ವೃತ್ತದಲ್ಲಿ ಇಂದು ಬೆಳಗ್ಗೆ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಈ ಕೃತ್ಯವನ್ನು ಖಂಡಿಸಿ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಜಾರಿಯಾಗುವಂತೆ ಆಗ್ರಹಿಸಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿ ದೇಶದ ಅಶಾಂತಿ ಮೂಡಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು, ದೇಶದಲ್ಲಿ ಹಿಂದೂಗಳು ಆತಂಕದಿಂದ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ, ಇಂತಹ ಪೈಶಾಚಿಕ ಕೃತ್ಯಗಳನ್ನು ಎಸಾಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್ ಗಾಗಿ ಇಂತಹ ಕೃತ್ಯಗಳನ್ನು ನಡೆಸುವವರಿಗೆ ಸಹಕಾರ ನೀಡುತ್ತಿದೆ ಎಂದು ಹರಿಹಾಯ್ದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಚಿತ್ರದುರ್ಗದ ಜಿಲ್ಲಾ ಬಿಜೆಪಿ ಪ್ರಭಾರಿಗಳಾದ ಶ್ರೀ ಪ್ರೇಮ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಬೆಳ್ಳವಾಡಿ, ಶ್ರೀ ದೇವರಾಜ್ ಶೆಟ್ಟಿ, ನಗರಸಭಾಧ್ಯಕ್ಷರಾದ ಮಧುಕುಮಾರ್ ಅರಸ್, ಗ್ರಾಮಾಂತರ ಅಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್, ಶ್ರೀ ಕೋಟೆ ರಂಗನಾಥ್, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಕೆ.ಪಿ ವೆಂಕಟೇಶ್,ವಕ್ತಾರರಾದ ದೀಪಕ್ ದೊಡ್ಡಯ್ಯ, ಯುವಮೋರ್ಚಾ ಅಧ್ಯಕ್ಷರಾದ ಸಂದೀಪ್, ಹಾಗೂ ಬಿಜೆಪಿಯ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು,ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಶೃಂಗೇರಿಯಲ್ಲಿ ನಡೆದ ಪ್ರತಿಭಟನೆ :
ರಾಜಸ್ಥಾನದಲ್ಲಿ ನಡೆದ ಘೋರ ಹತ್ಯೆಗೆ ಸಂಬಂಧಿಸಿದಂತೆ ಇಂದು ಶೃಂಗೇರಿಯ ಕಟ್ಟೆಬಾಗಿಲಿನಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ದಿವೀರ್ ಮಲ್ನಾಡ್ ಹಿಂದುತ್ವವನ್ನು ಒಪ್ಪದ ರೀತಿಯ ಮಾನಸಿಕತೆಯನ್ನು ಒಂದು ಸಮುದಾಯದ ಜನರಲ್ಲಿ ತುಂಬಿ ಬಹುತ್ವದ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲ ಸಮಾಜಘಾತುಕ ಶಕ್ತಿಗಳು ಮಾಡುತ್ತಿದೆ ಇದನ್ನು ನಾವು ಖಂಡಿಸುತ್ತೇವೆ, ಕೇವಲ ನೂಪುರ್ ಶರ್ಮಾಳ ಒಂದು ಪೋಸ್ಟ್ ನ್ನು ಶೇರ್ ಮಾಡಿದ್ದಕ್ಕಾಗಿ ನಡೆಸಿದ ಈ ಘೋರ ಕೃತ್ಯವನ್ನು ಎಂದಿಗೂ ಹಿಂದೂ ಸಮಾಜ ಸಹಿಸುವುದಿಲ್ಲ, ಈ ಪೈಶಾಚಿಕ ಕೃತ್ಯದ ಹಿಂದಿರುವ ಜಿಹಾದಿಗಳಿಗೆ ಶೀಘ್ರವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ, ಶೃಂಗೇರಿ ಶಿವಣ್ಣ, ವೇಣುಗೋಪಾಲ್, ಬಜರಂಗದಳದ ತಾಲೂಕು ಸಂಚಾಲಕ ರವಿಸಂಜಯ್ ಸೇರಿದಂತೆ ಪ್ರಮುಖರು ಹಾಜರಿದ್ದರು.






0 Comments