ಚಿಕ್ಕಮಗಳೂರು :
ರಸ್ತೆ ನಿಯಮ ಉಲ್ಲಂಘಿಸಿ ವೀಲಿಂಗ್ ಮಾಡುತ್ತಿದ್ದವರ ಬಂಧನ :
ಚಿಕ್ಕಮಗಳೂರು : ಯಾರ ಭಯವೂ ಇಲ್ಲದೆ ಹೆದ್ದಾರಿಯಲ್ಲಿ ವೀಲಿಂಗ್ ನಡೆಸುತ್ತಿದ್ದ ಯುವಕರ ತಂಡವನ್ನು ಪೊಲೀಸರು ಕಾರ್ಯಾಚರಣೆ ಮೂಲಕ ಸೆರೆ ಹಿಡಿದು ಪ್ರಕರಣ ದಾಖಲಿಸಿದ್ದಾರೆ. ಚಿಕ್ಕಮಗಳೂರು ಕಡೂರು ಹೆದ್ದಾರಿಯಲ್ಲಿ ಯುವಕರ ಗುಂಪೊಂದು ಆರು ದ್ವಿಚಕ್ರ ವಾಹನಗಳಲ್ಲಿ ಯಾವುದೇ ಭಯವಿಲ್ಲದೇ, ರಸ್ತೆ ನಿಯಮವನ್ನು ಪಾಲಿಸದೇ ರಾಜಾರೋಷವಾಗಿ ವೀಲಿಂಗ್ ಮಾಡುತ್ತಿದ್ದರು. ಈ ಕುರಿತಾಗಿ ಕಾರ್ಯಾಚರಣೆ ನಡೆಸಿದ ಕಡೂರಿನ ಸಖರಾಯಪಟ್ಟಣ ಪೊಲೀಸರು ಆರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಚಾಲಕರುಗಳ ವಿರುದ್ಧ ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಶೃಂಗೇರಿ ಕಡೆಗೆ ಬರುತ್ತಿದ್ದ ಬಸ್ :
ಚಾಲಕನ ನಿಯಂತ್ರಣ ತಪ್ಪಿ ಶೃಂಗೇರಿ ಕಡೆಗೆ ಬರುತ್ತಿದ ಬಸ್ ಒಂದು ಮರಕ್ಕೆ ಗುದ್ದಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಶೃಂಗೇರಿಗೆ ಪ್ರಯಾಣಿಕರನ್ನು ಕರೆತರುತ್ತಿದ್ದ ರಾಜಾಹಂಸ ಬಸ್ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ. ಅದೃಷ್ಟವಶಾತ್ ಎಂಬಂತೆ ಬಸ್ಸಿನಲ್ಲಿ ಪ್ರಯಾಣ ನಡೆಸುತ್ತಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಗ್ಗೆ 4.00 ಗಂಟೆಯ ಸಮಯದಲ್ಲಿ ಈ ಅವಘಡ ನಡೆದಿದ್ದು ಪ್ರಯಾಣಿಕರು ಕ್ಷೇಮವಾಗಿದ್ದಾರೆ.
ಮನೆ ಬೀಗ ಒಡೆದು ಹಣ, ಚಿನ್ನಾಭರಣ ದೋಚಿದ ಖದೀಮರು :
ಚಿಕ್ಕಮಗಳೂರು : ಮನೆಗೆ ನುಗ್ಗಿ ಕಳ್ಳರು ಮನೆ ದರೋಡೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ನಂಜುಂಡಯ್ಯ ಮಾಸ್ಟರ್ ಅವರ ಮನೆಗೆ ನುಗ್ಗಿರುವ ಕಳ್ಳರು ಮನೆ ಬಾಗಿಲಿನ ಬೀಗ ಒಡೆದು ಮನೆ ದರೋಡೆ ಮಾಡಿದ್ದಾರೆ. ಮನೆಯವರು ಬೆಂಗಳೂರಿಗೆ ಹೋದ ಸಂದರ್ಭವನ್ನು ನೋಡಿಕೊಂಡು ನುಗ್ಗಿರುವ ಕಳ್ಳರು ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಘಟನಾ ಸಂಬಂಧ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಧಾವಿಸಿ ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಡಿವೈಎಸ್ಪಿ ಪ್ರಭು ಸ್ಥಳಕ್ಕೆ ಭೇಟಿ ನೀಡಿ ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಚಿಕ್ಕಮಗಳೂರು ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲಿ ಅಪಾರ ಪ್ರಮಾಣದ ಗಾಂಜಾ ನಾಶ :
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ಅಪಾರ ಪ್ರಮಾಣದ ಗಾಂಜಾವನ್ನು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನವಾದ ನಿನ್ನೆ ಪೊಲೀಸ್ ಅಧಿಕಾರಿಗಳು ನಾಶಪಡಿಸಿದ್ದಾರೆ. ನಶೆಭರಿತ ವಸ್ತುಗಳನ್ನು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಕಾರ್ಯಾಚರಣೆಯನ್ನು ಆರಂಭಿಸಿದ್ದ ಚಿಕ್ಕಮಗಳೂರಿನ ಪೊಲೀಸರು, ನಶೆಯಲ್ಲಿದ್ದವರಂತೆ ಕಂಡುಬರುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆತಂದು ವೈದ್ಯಕೀಯ ತಪಾಸಣೆಗೊಳಪಡಿಸಿ ಮಾದಕ ವಸ್ತುಗಳನ್ನು ಸೇವಿಸಿರುವುದು ಧೃಢಪಟ್ಟಲ್ಲಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಿದ್ದರು. ಅಂತೆಯೇ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ 190.7 ಕೆ.ಜಿ ಗಾಂಜಾವನ್ನು ಹಾಸನದ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾ ಮಾದಕ ವಸ್ತು ವಿಲೇವಾರಿ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಗಿದೆ.
ಸಚಿವರಿಂದ ರಾಜ್ಯದ ಮೊದಲ ಸರ್ಕಾರಿ ಗೋಶಾಲೆ ಉದ್ಘಾಟನೆ
ಕರ್ನಾಟಕ ರಾಜ್ಯದ ಮೊದಲ ಸರ್ಕಾರಿ ಗೋಶಾಲೆಯನ್ನು ಇಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿಯಲ್ಲಿ ಉದ್ಘಾಟಿಸಿದರು. ಬಜೆಟ್ ನಲ್ಲಿ ಸರ್ಕಾರವು ಘೋಷಿಸಿದ್ದ ಪ್ರತೀ ಜಿಲ್ಲೆಗೊಂದು ಸರ್ಕಾರಿ ಗೋಶಾಲೆಯ ನಿರ್ಮಾಣದಂತೆ ರಾಜ್ಯದ ಮೊದಲ ಗೋಶಾಲೆಯನ್ನು ಗೋವುಗಳಿಗೆ ಪೂಜೆ ಮಾಡಿ, ಮೇವು ನೀಡುವುದರ ಮೂಲಕ ಉದ್ಘಾಟಿಸಿದ ಸಚಿವರು 10 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಗೋಶಾಲೆಯನ್ನು ವೀಕ್ಷಿಸಿದರು. ಈ ಗೋಶಾಲೆಯಲ್ಲಿ 200 ಗೋವುಗಳಿಗೆ ಆಶ್ರಯ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಗೋವುಗಳನ್ನು ದತ್ತು ಪಡೆಯಲು ಸಹ ಅವಕಾಶವನ್ನು ಕಲ್ಪಿಸಲಾಗಿದೆ.
ನಿವೇಶನ ರಹಿತರಿಗೆ ನಿವೇಶನ ಹಾಗೂ ಹಕ್ಕುಪತ್ರಗಳನ್ನು ನೀಡುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಅಮರಣಾಂತ ಸತ್ಯಾಗ್ರಹ
ಕಳಸ : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆಯಲ್ಲಿ ಟೆಂಟ್ ನಲ್ಲಿ ವಾಸಿಸುತ್ತಿರುವ ವಸತಿರಹಿತರು ಹಕ್ಕು ಪತ್ರಗಳು ದೊರೆಯುವವರೆಗೂ ಹೋರಾಟ ನಡೆಸುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಇಂದು ಕಳಸದ ತಾಲೂಕು ಕಛೇರಿ ಎದುರು ಪ್ರತಿಭಟಿಸಿದ ನಿವೇಶನರಹಿತರು ಮಾವಿನಕೆರೆ ಗ್ರಾಮದ 153 ರಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ನಿವೇಶನ ಒದಗಿಸುವ ಸಲುವಾಗಿ ಜಾಗವನ್ನು ಮಂಜೂರು ಮಾಡಲಾಗಿತ್ತು. ಈ ಸರ್ವೇ ನಂಬರ್ ನ ಉಳಿಕೆ ಭೂಮಿಯಲ್ಲಿ ಸುತ್ತಮುತ್ತಲಿನ ನಿವೇಶನರಹಿತರು ಟೆಂಟ್ ನಿರ್ಮಾಣ ಮಾಡಿಕೊಂಡು ವರ್ಷಗಳೇ ಉರುಳಿದ್ದರೂ ಶಾಸಕರಿಂದ ಸ್ಥಳೀಯ ಜನಪ್ರತಿನಿಧಿಗಳವರೆಗೂ ಭರವಸೆಗಳು ಲಭಿಸಿದೆ ಆದರೆ ಈಡೇರಿಲ್ಲ ಎಂದರು. ಕಳೆದ 3 ವರ್ಷದಿಂದ ಕುಂಬಳಡಿಕೆಯ ಸರ್ವೇ ನಂಬರ್ 153 ರಲ್ಲಿ ವಸತಿರಹಿತರು ಟೆಂಟ್ ಗಳನ್ನು ನಿರ್ಮಾಣ ಮಾಡಿಕೊಂಡು ವಾಸಮಾಡುತ್ತಿದ್ದು ಹಕ್ಕುಪತ್ರ ನೀಡುವ ಹಾಗೂ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಆಶ್ವಾಸನೆಗಳು ಹಾಗೆಯೇ ಉಳಿದಿದೆ ಹೊರತು ಯಾವುದೇ ಪ್ರಕ್ರಿಯೆಗಳು ಮುಂದುವರೆದಿಲ್ಲ ಎಂದು ನಿವೇಶನರಹಿತರು ತಮ್ಮ ಅಳಲನ್ನು ವ್ಯಕ್ತಪಡಿಸಿದರು ಹಕ್ಕುಪತ್ರ ಹಾಗೂ ನಿವೇಶನರಹಿತರಿಗೆ ನಿವೇಶನ ದೊರೆಯುವವರೆಗೂ ನಿರಂತರ ಹೋರಾಟ ನಡೆಸುವ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡಿದರು.
ಅಗ್ನಿಪಥ್ ವಿರೋಧಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ :
ಕೊಪ್ಪ : ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಕೊಪ್ಪದಲ್ಲಿ ಪ್ರತಿಭಟನೆ ನಡೆಸಿದರು. ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಭಾರತೀಯ ಸೇನೆಗೆ ಸೇರುವ ಯುವಕ, ಯುವತಿಯರಿಗೆ ಅನ್ಯಾಯವಾಗುತ್ತಿದೆ, ಈ ಕೂಡಲೇ ಯೋಜನೆಯನ್ನು ಪುನರ್ ಪರಿಶೀಲಿಸಬೇಕು ಈ ಯೋಜನೆಯಿಂದಾಗಿ ಯುವ ಜನತೆಗೆ ಅನಾನುಕೂಲಗಳೇ ಹೆಚ್ಚಾಗುತ್ತಿದೆ. ಅಗ್ನಿಪಥ್ ದೇಶದ್ರೋಹಿ ಯೋಜನೆಯಾಗಿದೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಮಾತನಾಡಿದರು. ದೇಶದಲ್ಲಿ ರಾಜ್ಯದಲ್ಲಿ ಸೌಹಾರ್ದತೆಯನ್ನು ಕೆದಡುವ ಸಲುವಾಗಿ ಈ ಯೋಜನೆಯನ್ನು ತರಲಾಗುತ್ತಿದೆ, ಯುವಕ ಯುವತಿಯರಿಗೆ ಉದ್ಯೋಗ ನೀಡುವುದಾಗಿ ಹುಸಿ ಭರವಸೆ ನೀಡಿ ಯುವಕರ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ ಎಂದು ಹರಿಹಾಯ್ದರು. ಈ ಪ್ರತಿಭಟನೆಯಲ್ಲಿ ಶಾಸಕ ಟಿ.ಡಿ ರಾಜೇಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ
ಗಾಂಜಾ ನಾಶ :
ಶಿವಮೊಗ್ಗದಲ್ಲೂ ಈ ಸಂಬಂಧ ಕಾರ್ಯಾಚರಣೆ ನಡೆಸಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ನಿನ್ನೆ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಿದ್ದಾರೆ. ವಶಪಡಿಸಿಕೊಳ್ಳಲಾಗಿದ್ದ 193 ಕೆ.ಜಿ 498 ಗ್ರಾಂ ತೂಕದ ಗಾಂಜಾದ ಮೌಲ್ಯ 38,07,450 ಎಂದು ಅಂದಾಜಿಸಲಾಗಿದ್ದು ಮಾಚೇನಹಳ್ಳಿಯ ಸಮೀಪವಿರುವ ಶುಶೃತ ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಆವರಣದಲ್ಲಿ ನಾಶಮಾಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಅಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು.
ಚುಚ್ಚುಮದ್ದು ನೀಡಿದ ಬಳಿಕ ಅಸ್ವಸ್ಥರಾದ 14 ಮಕ್ಕಳು :
ಸಾಗರ : ಅನಾರೋಗ್ಯದ ನಿಮಿತ್ತ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಸುಮಾರು 14 ಮಕ್ಕಳು ಭಾನುವಾರ ಸಂಜೆ ದಿಢೀರನೆ ಅಸ್ವಸ್ಥತರಾಗಿದ್ದು, ಇಂಜೆಕ್ಷನ್ ನ ಅಡ್ಡ ಪರಿಣಾಮವು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸಾಗರದ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ರೋಗ ನಿರೋಧಕ ಇಂಜೆಕ್ಷನ್ ನೀಡಿದ ಕೆಲ ಸಮಯದಲ್ಲಿ ಅತಿಯಾದ ಚಳಿ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಪೋಷಕರ ಆತಂಕಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿ ಯಾವ ಕಾರಣಕ್ಕಾಗಿ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದ್ದು. ಅಸ್ವಸ್ಥರಾಗಿರುವ ಮಕ್ಕಳ ಪೈಕಿ ಹೆಚ್ಚಿನ ಚಿಕಿತ್ಸೆಗಾಗಿ ನಾಲ್ವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕಳಿಸಲಾಗಿದ್ದು. ಸಧ್ಯ ಯಾವುದೇ ಮಕ್ಕಳಿಗೂ ಪ್ರಾಣಾಪಾಯವಿಲ್ಲ ಖಚಿತಪಡಿಸಿದ್ದಾರೆ.
ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆಯಲ್ಲಿ ಶಿವಮೊಗ್ಗ ಪ್ರಥಮ :
ರಾಜ್ಯದಲ್ಲಿಯೇ ಪ್ರತಿ ದಿನ ಕುಡಿಯುವ ನೀರನ್ನು ಒದಗಿಸುತ್ತಿರುವ ಜಿಲ್ಲೆ ನಮ್ಮದಾಗಿದೆ ಎಂದು ಬಹಳ ಹೆಮ್ಮೆಯಿಂದ ಕೆ.ಎಸ್ ಈಶ್ವರಪ್ಪ ಅವರು ಹೇಳಿದರು. ಮುಂದಿನ ದಿನಗಳಲ್ಲಿ ಗಾಜನೂರು ಡ್ಯಾಂನಿಂದ ಶುದ್ಧ ಕುಡಿವ ನೀರಿನ ಪೂರೈಕೆಗಾಗಿ 105 ಕೋಟಿ ರೂ.ನ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು. ಎಲ್ಲಾ ರೀತಿಯ ಯೋಜನೆಗಳಿಂದ ಈ ಭಾಗದ ಜನರ ಬದುಕಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುವುದಾಗಿ ತಿಳಿಸಿದರು.



0 Comments