ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಶೃಂಗೇರಿ ಮೂಲದ ರಜಿತ್ ಗೌಡ ಬೇಸೂರು
ಚಿಕ್ಕಮಗಳೂರು : ಬಿ ಟಿ ಲಲಿತಾ ನಾಯಕ್ ಅವರ ನೇತೃತ್ವದ ಜನತಾ ಪಾರ್ಟಿಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶೃಂಗೇರಿ ಮೂಲದ ರಜಿತ್ ಗೌಡ ಬೇಸೂರು ನ್ನು ರಾಜ್ಯಾಧ್ಯಕ್ಷರಾದ ಬಿ.ಟಿ ಲಲಿತಾನಾಯಕ್ ನೇಮಕ ಮಾಡಿದ್ದಾರೆ. ಸದಸ್ಯತ್ವ ಅಭಿಯಾನದ ಸಂಪೂರ್ಣ ಜವಾಬ್ದಾರಿ ಹಾಗೂ ಪಕ್ಷದ ಸಂಘಟನಾತ್ಮಕ ಕಾರ್ಯಗಳನ್ನು ಪಕ್ಷ ನಿಷ್ಠೆಯಿಂದ ನಿರ್ವಹಿಸುವಂತೆ ಹಾಗೂ ಪಕ್ಷವನ್ನು ಸಶಕ್ತಗೊಳಿಸುವಂತೆ ಸೂಚಿಸಿದ್ದಾರೆ.
ಅಕ್ರಮವಾಗಿ ಆನೆ ದಂತ ಮಾರಾಟ ನಡೆಸಲು ಯತ್ನಿಸುತ್ತಿದ್ದವರು ಅಂದರ್ :
ಚಿಕ್ಕಮಗಳೂರು : ಆನೆಯ ದಂತವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಚಿಕ್ಕಮಗಳೂರು ಸಮೀಪದ ಅಲ್ಲಂಪುರ ವ್ಯಾಪ್ತಿಯಲ್ಲಿ ಒಮಿನಿ ಕಾರಿನ ಮೂಲಕ ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐದು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಆರ್.ಶಿವಕುಮಾರ್, ಸುಂದರೇಶ್, ಪಿ.ಮಹಾಂತೇಶ್, ನೂರ್ ಅಹಮದ್, ಆಂಜನಪ್ಪ ಬಂಧಿತರು. ಈ ಕಾರ್ಯಾಚರಣೆಯನ್ನು ಅರಣ್ಯ ಸಂಚಾರಿದಳದ ಸಿಐಡಿ ಪೊಲೀಸರು ನಡೆಸಿದ್ದು ಭದ್ರಾ ವನ್ಯಜೀವಿ ವಲಯದಿಂದ ಆನೆದಂತವನ್ನು ತಂದಿರುವುದನ್ನು ಖಚಿತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಚಡ್ಡಿ ಪೋಸ್ಟ್ ಮಾಡಿದ ಬಿಜೆಪಿ :
ಚಿಕ್ಕಮಗಳೂರಿನ ಬಿಜೆಪಿ ಯುವಮೋರ್ಚಾ ವತಿಯಿಂದ ಪದಾಧಿಕಾರಿಗಳು ಚಡ್ಡಿಯನ್ನು ಕಾಂಗ್ರೆಸ್ ಕಛೇರಿಗೆ ಪೋಸ್ಟ್ ಮಾಡಿ ಠಕ್ಕರ್ ನೀಡಿದ್ದಾರೆ.ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾದ ವತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 15 ಕ್ಕೂ ಹೆಚ್ಚು ಚಡ್ಡಿಗಳನ್ನು ಪೋಸ್ಟ್ ನ ಮೂಲಕ ಬಿಜೆಪಿಯ ಪದಾಧಿಕಾರಿಗಳು ಕಳುಹಿಸಿದರು. ಆರ್.ಎಸ್.ಎಸ್ ನ ಕುರಿತು ಕಾಂಗ್ರೆಸ್ಸಿಗರು ಎಚ್ಚರಿಕೆಯಿಂದ ಮಾತನಾಡಬೇಕು. ಸಿದ್ದರಾಮಯ್ಯ ಹಾಗೂ ನಲಪಾಡ್ ಗೆ ಸಂಘದ ಕುರಿತು ಮಾತನಾಡುವ ಯಾವುದೇ ನೈತಿಕತೆಯಿಲ್ಲ, ಅವರು ನಿಗಾವಹಿಸಿ ಮಾತನಾಡಬೇಕು ಎಂದರು.
ಸಿಡಿಲು ಬಡಿದು ಕಾಡೆಮ್ಮೆ ಸಾವು :
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ಸೀತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊನೋಡಿ ಗ್ರಾಮದ ಹೆರಂದೂರು ಶಾರದಮ್ಮ ಎಂಬುವವರ ಅಡಿಕೆ ತೋಟದಲ್ಲಿ ಸಿಡಿಲು ಬಡಿದು ಕಾಡೆಮ್ಮೆಯೊಂದು ಮೃತಪಟ್ಟಿದೆ. ಈ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ, ತೋಟಕ್ಕೆ ತೆರಳಿ ಗಮನಿಸಿದಾಗ ಕಾಡೆಮ್ಮೆ ಮೃತಪಟ್ಟಿರುವುದು ಕಂಡು ಬಂದಿದ್ದು ಈ ಕುರಿತಾಗಿ ಶಾರದಮ್ಮ ಅವರ ಪುತ್ರಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಚಿರತೆಯ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಸೆರೆ
ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಫ್ಯಾಕ್ಟರಿ ಬಡಾವಣೆಯ ಸಮುದಾಯ ಭವನದ ಸಮೀಪದಲ್ಲಿ ಮೂವರು ಅಕ್ರಮವಾಗಿ ಚಿರತೆಯ ಚರ್ಮವನ್ನು ಮಾರಾಟ ಮಾಡಲು ಯತ್ನಿಸಿದ್ದವರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಾವರದ ಪರ್ವತ, ಚಿಕ್ಕಮಗಳೂರಿನ ಕಾಂತರಾಜ್, ಹಾಗೂ ಶ್ರೀನಿವಾಸ್ ಬಂಧಿತ ಆರೋಪಿಗಳು. ಚಿಕ್ಕಮಗಳೂರಿನ ಸಿಐಡಿ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸೈ ಶರತ್, ಸಿಬ್ಬಂದಿಗಳಾದ ದಿವಾಕರ, ದಿಲೀಪ್, ದಿನೇಶ್, ದೇವರಾಜ್, ಹಾಲೇಶ್, ಹೇಮಾವತಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಹಾಸನ :
400 ರೂಪಾಯಿ ಹಣಕ್ಕಾಗಿ ಚೂರಿ ಇರಿತ
ಹಾಸನ ಶ್ರೀನಗರದ ಬಸವೇಶ್ವರ ದೇವಾಲಯದ ಬಳಿ ಈ ಘಟನೆ ಸಂಭವಿಸಿದ್ದು ಸಕಲೇಶಪುರದ ಬಾಳೂಪೇಟೆ ಮೂಲದ ಕೂಲಿ ಕಾರ್ಮಿಕ ರಮೇಶ್ ಚಾಕುವಿನಿಂದ ಇರಿತಕ್ಕೊಳಪಟ್ಟ ವ್ಯಕ್ತಿ. ತನ್ನ ಕೆಲಸ ಮುಗಿಸಿಕೊಂಡು ಊಟಕ್ಕೆಂದು ತೆರಳುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಏಕಾಏಕಿ ಬಳಿಗೆಬಂದು ಪ್ಯಾಂಟ್ ಜೇಬಿಗೆ ಕೈ ಹಾಕಿ ಹಣ ತೆಗೆಯಲು ಯತ್ನಿಸಿದ್ದಾನೆ, ಈ ಸಂದರ್ಭದಲ್ಲಿ ಆತನನ್ನು ತಡೆದು ಈ ರೀತಿಯಾಗಿ ಏಕೆ ವ್ಯವಹರಿಸುತ್ತಿರುವೆ ಎಂದಾಗ ಹಣ ನೀಡು ಇಲ್ಲದೇ ಹೋದಲ್ಲಿ ಚಾಕು ಹಾಕುವುದಾಗಿ ಜೇಬಿನಿಂದ ಚಾಕುವನ್ನು ಹೊರತೆಗೆದು ಬೆದರಿಸಿದ್ದಾನೆ ಎನ್ನಲಾಗಿದೆ. ಈ ಕುರಿತಾಗಿ ಪ್ರತಿರೋಧ ವ್ಯಕ್ತಪಡಿಸಿದಾಗ ಚಾಕುವನ್ನು ಹೊಟ್ಟೆಗೆ ಚುಚ್ಚಿ ಜೇಬಿನಲ್ಲಿದ್ದ 400 ರೂಪಾಯಿ ಹಣವನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಲ್ಲೇ ಕುಸಿದು ಬಿದ್ದಿದ್ದ ರಮೇಶ್ ಬೆಳಗ್ಗಿನವರೆಗೂ ನರಳಾಡಿ, ಬೆಳಗ್ಗೆ ಪರಿಚಯಸ್ಥರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಘಟನಾ ಸಂಬಂಧ ಹಾಸನ ನಗರಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.



0 Comments