ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿಕ್ಕಮಗಳೂರು ಮೂಲದ ಗಣೇಶ್ ಎಂಬ ಯೋಧನ ಶವ ಪತ್ತೆಯಾಗಿದೆ. 

ಇದನ್ನೂ ಓದಿ : ಶೃಂಗೇರಿ ಮಠದ ಪದ್ಮನಾಭ ಅವಧಾನಿಗಳು ನಿಧನ

ಮೂಲತಃ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮಸೀಗದ್ದೆ ಮೂಲದ ಭಾರತೀಯ ಸೇನೆಯ ಯೋಧ ಗಣೇಶ್ ಅವರು ಏಪ್ರಿಲ್ 24 ರಂದು ಊರಿಗೆ ಬಂದಿದ್ದು ಜೂನ್ 09ರಂದು ಮನೆಯಿಂದ ವಾಪಾಸ್ ಕರ್ತವ್ಯದ ಸಲುವಾಗಿ ತೆರಳಿದ್ದರು. ವಾಪಸ್‌ ಗುವಾಹಟಿಗೆ ತೆರಳುತ್ತಿರುವಾಗ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಅವರ ಸಾವಿಗೆ ನಿಖರ ಕಾರಣಗಳೇನು ಎಂದು ಈ ವರೆಗೆ ತಿಳಿದುಬಂದಿಲ್ಲ.

ಗಣೇಶ್‌ ಅವರು ಮಸಿಗದೆಯಿಂದ ವಾಪಸ್‌ ಗುವಾಹಟಿಗೆ ಸಾಗುವಾಗ ಮೃತಪಟ್ಟಿದ್ದಾರೆ. ಏನಾಯಿತು ಎಂಬುದು ಇನ್ನಷ್ಟೇ ತಿಳಿಯಬೇಕಿದ್ದು, ಕಿಶನ್‌ಗಂಜ್‌ ಪ್ರದೇಶದಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದೇವೆ ಎಂದು ಸೇನೆಯ ತಂಡದವರು ತಿಳಿಸಿದ್ದಾರೆ. ಪಾರ್ಥಿವ ಶರೀರವನ್ನು ಇನ್ನು ಎರಡು ದಿನದಲ್ಲಿ ಕಳಿಸಬಹುದು. ಸಂಬಂಧಪಟ್ಟವರೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿ ಇದ್ದೇವೆ - ರಮೇಶ್ ಕೆ. ಎನ್, IAS, ಜಿಲ್ಲಾಧಿಕಾರಿ, ಚಿಕ್ಕಮಗಳೂರು

ಜಿಲ್ಲಾಡಳಿತವು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಪಾರ್ಥಿವ ಶರೀರವನ್ನು ಇನ್ನೆರಡು ದಿನಗಳಲ್ಲಿ ಸ್ವಗ್ರಾಮಕ್ಕೆ ತರಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ 14 ವರ್ಷಗಳಿಂದ ಭಾರತೀಯ ಸೇನೆಯ ಸಿಗ್ನಲ್ ರೆಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಅವರು ಮಸೀಗದ್ದೆ ನಾಗಯ್ಯ ಹಾಗೂ ಗಂಗಮ್ಮ ದಂಪತಿಗಳ ಪುತ್ರ, ಮೃತ ಯೋಧನ ಸಾವಿಗೆ ಸಂತಾಪ ಸೂಚಿಸುವ ಸಲುವಾಗಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಹಾಗೂ ಮಾಜಿ ಶಾಸಕರಾದ ಡಿ. ಎನ್ ಜೀವರಾಜ್ ಅವರ ಮನೆಗೆ ಭೇಟಿ ನೀಡಿದ್ದು ಮುಂದಿನ ಕಾರ್ಯಗಳ ಕುರಿತಾಗಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. 

ಸ್ಥಳೀಯರು ಹಾಗೂ ಸುತ್ತಮುತ್ತಲಿನ ಊರಿನವರು ಅಪಾರ ಸಂಖ್ಯೆಯಲ್ಲಿ ಮೃತರ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಲು ಆಗಮಿಸುತ್ತಿದ್ದು, ಮುಂದಿನ ಕಾರ್ಯಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ಕಾರ್ಯಗಳು ನಡೆಯುತ್ತಿದೆ.