ಚಿಕ್ಕಮಗಳೂರು 

 ಕಂದಕಕ್ಕೆ ಉರುಳಿದ ಕಾರು :

ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಕೊಟ್ಟಿಗೆಹಾರದಲ್ಲಿ ನಡೆದಿದೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ನಿಸರ್ಗ ಹೋಟೆಲ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ. ಕಾರು ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಗಾಯಕ್ಕೀಡಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈ ಸಂಬಂಧ ಬಣಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಪಿಕಪ್ ಹಾಗೂ ಟಾಟಾ ವಾಹನದ ನಡುವೆ ರಸ್ತೆ ಅಪಘಾತ 

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಮಾಗೋಡು ಬಳಿ ಈ ಅಪಘಾತ ಸಂಭವಿಸಿದ್ದು ಹುಣಸೇಹಳ್ಳಿಯಿಂದ ಹಂದಿಗಳನ್ನು ಸಾಗಣೆ ನಡೆಸುತ್ತಿದ್ದ ಪಿಕಪ್ ವಾಹನ ಹಾಗೂ ಟಾಟಾ ವಾಹನದ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಇಬ್ಬರು ಗಾಯಾಳುಗಳಾಗಿದ್ದಾರೆ. ಎರಡೂ ವಾಹನಗಳು ನಜ್ಜುಗುಜ್ಜಾಗಿದ್ದು ಅಪಘಾತದಲ್ಲಿ ಗಾಯಕ್ಕೀಡಾದವರನ್ನು ಚಿಕ್ಕಮಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಜಮಾವಣೆಗೊಂಡ ಸ್ಥಳೀಯರು ಪೆಟ್ಟಾದವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕಾರ ನೀಡಿದ್ದಾರೆ.


ಹಾಸನ, ಕೊಡಗಿನಲ್ಲಿ ಕಂಪಿಸಿದ ಭೂಮಿ :

ಹಾಸನ ಜಿಲ್ಲೆಯ ಕೆಲಭಾಗಗಳಲ್ಲಿ ಭೂಕಂಪನವಾಗಿರುವ ಅನುಭವ ಸ್ಥಳೀಯರಿಗುಂಟಾಗಿದೆ. ಹಾಸನ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅರಕಲಗೂಡು ತಾಲೂಕಿನ ಹಣೆಮಾರನಹಳ್ಳಿ, ಕಾರಹಳ್ಳಿ, ಮುದ್ದನಹಳ್ಳಿಯಲ್ಲಿ ಇಂದು ಬೆಳಗಿನಜಾವ 4.38ಕ್ಕೆ ಭೂಕಂಪನವಾಗಿದೆ. ಹಾಸನ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ಅರಕಲಗೂಡು ತಾಲೂಕಿನ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ್ದು, ಜನ ಆತಂಕಗೊಂಡು ತಕ್ಷಣವೇ ಮನೆಯಿಂದ ಹೊರಬಂದಿದ್ದಾರೆ. ಅಂತೆಯೇ ಕೊಡಗಿನಲ್ಲೂ ಇಂದು ಬೆಳಗ್ಗೆ ಭೂಕಂಪನವಾಗಿದೆ. ಕೊಡಗಿನ ಗೌಡಳ್ಳಿ, ಮೆಗಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಕೊಡಗಿನ ಜನರಿಗಾಗಿದೆ.


ಬೈಕ್ ಅಪಘಾತದಲ್ಲಿ ನೌಕರ ಸಾವು ;ಹಂಪ್ಸ್ ನಿರ್ಮಾಣಕ್ಕೆ ಜನರ ಒತ್ತಾಯ

ಹಾಸನ ನಗರದ ಆಕಾಶವಾಣಿ ಪಕ್ಕದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಎದುರಿನ ರಸ್ತೆಯಲ್ಲಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಬೈಕ್ ಸವಾರ ದಾರುಣವಾಗಿ ಅಂತ್ಯಕಂಡಿದ್ದಾನೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಶೆಟ್ಟಿ (56) ಸಾವನ್ನಪ್ಪಿರುವ ವ್ಯಕ್ತಿ. ಅಪಘಾತದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿಕ್ಕಿ ಹೊಡೆದ ಬೈಕ್ ಸವಾರರು ಕೂಡಲೇ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಕಛೇರಿಗೆ ತೆರಳುವ ಸಲುವಾಗಿ ಬೈಕ್‌ನಲ್ಲಿ ಕ್ರಾಸ್ ಮಾಡುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಬೈಕ್‌ ಕ್ಷಣಾರ್ಧದಲ್ಲಿ ನೌಕರನ ಬೈಕ್ ಗೆ ಗುದ್ದಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಈ ಘಟನೆಯನ್ನು ಕಂಡ ಇನ್ನೋರ್ವ ಬೈಕ್ ಸವಾರ ರಸ್ತೆಗೆ ಬಿದ್ದು ಸಣ್ಣಪುಟ್ಟ ಗಾಯಕ್ಕೀಡಾಗಿದ್ದಾರೆ. ಎಂ.ಜಿ ರಸ್ತೆ ಮತ್ತು ಸಾಲಗಾಮೆ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಇತ್ತೀಚೆಗೆ ಅಗಲೀಕರಣ ಮಾಡಲಾಗಿದ್ದು ರಸ್ತೆಗೆ ಡಾಂಬರ್ ಹಾಕಲಾಗಿದೆ. ಆದರೆ ಎಲ್ಲೂ ಕೂಡ ಹಂಪ್ಸ್ ಇಲ್ಲದ ಕಾರಣ ಬೈಕ್ ಸವಾರರು ಯಾವುದೇ ಅಡೆತಡೆ ಇಲ್ಲದೆ ವೇಗವಾಗಿ ಓಡಾಡುತ್ತಿರುವ ಕಾರಣ ಈ ರಸ್ತೆಯಲ್ಲಿ ವಿವಿಧ ಕಾಲೇಜು, ಹಾಸ್ಟೆಲ್‌ಗಳಿಗೆ ಹೋಗುವ ವಿದ್ಯಾರ್ಥಿಗಳು, ವಯಸ್ಸಾದವರು ಮಕ್ಕಳು ಸೇರಿದಂತೆ ಅನೇಕರು ನಿತ್ಯವೂ ಸಂಚರಿಸುತ್ತಿರುತ್ತಾರೆ ಅಂತೆಯೇ ಸಾರ್ವಜನಿಕರೂ ಓಡಾಡುತ್ತಿರುವ ರಸ್ತೆಯಾದ ಕಾರಣ ರಸ್ತೆ ಮಧ್ಯೆ ಅಲ್ಲಲ್ಲಿ ಹಂಪ್ಸ್ ಹಾಕಬೇಕೆಂದು ಸಾರ್ವಜನಿಕರು ಕೋರಿದ್ದಾರೆ. ಮೃತವ್ಯಕ್ತಿಯನ್ನು ಕಳೆದುಕೊಂಡಿರುವ ಮನೆಯವರು, ಸಂಬಂಧಿಕರು ಹಾಗೂ ಗೆಳೆಯವೃದಂದ ಸಾವಿನ ಕುರಿತಾಗಿ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.


ಕೊಡಗು : 

ಕಾರ್ ಹಾಗೂ ಬೈಕ್ ನ ನಡುವೆ ಭೀಕರ ರಸ್ತೆ ಅಪಘಾತ

ಕಾರ್ ಹಾಗೂ ಬೈಕಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ದುರ್ಮರಣವನ್ನಪ್ಪಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗುಡ್ಡೆಹೊಸೂರು ಬಳಿ ಈ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ಪ್ರಯಾಣ ನಡೆಸುತ್ತಿದ್ದ ಬೈಕ್ ಸವಾರರಾದ ಸಚಿನ್ (23) ಹಾಗೂ ಪೊನ್ನಪ್ಪ (28) ಮೃತ ದುರ್ದೈವಿಗಳು.ಕಾರ್ ಹಾಗೂ ಬೈಕ್ ನ ಬಹುತೇಕ ಭಾಗಗಳು ನಜ್ಜುಗುಜ್ಜಾಗಿದ್ದು, ಈ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಅಂತ್ಯ ಕಂಡಿದ್ದಾರೆ.