ಹಾಸನ : (ನ್ಯೂಸ್ ಮಲ್ನಾಡ್ ವರದಿ) 400 ರೂಪಾಯಿ ಹಣಕ್ಕಾಗಿ ಅಪರಿಚಿತನೋರ್ವ ಕೂಲಿ ಕಾರ್ಮಿಕನೋರ್ವನಿಗೆ ಚಾಕುವಿನಿಂದ ಚುಚಿರುವ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ. 


ಹಾಸನ ಶ್ರೀನಗರದ ಬಸವೇಶ್ವರ ದೇವಾಲಯದ ಬಳಿ ಈ ಘಟನೆ ಸಂಭವಿಸಿದ್ದು ಸಕಲೇಶಪುರದ ಬಾಳೂಪೇಟೆ ಮೂಲದ ಕೂಲಿ ಕಾರ್ಮಿಕ ರಮೇಶ್ ಚಾಕುವಿನಿಂದ ಇರಿತಕ್ಕೊಳಪಟ್ಟ ವ್ಯಕ್ತಿ. ತನ್ನ ಕೆಲಸ ಮುಗಿಸಿಕೊಂಡು ಊಟಕ್ಕೆಂದು ತೆರಳುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಏಕಾಏಕಿ ಬಳಿಗೆಬಂದು ಪ್ಯಾಂಟ್ ಜೇಬಿಗೆ ಕೈ ಹಾಕಿ ಹಣ ತೆಗೆಯಲು ಯತ್ನಿಸಿದ್ದಾನೆ, ಈ ಸಂದರ್ಭದಲ್ಲಿ ಆತನನ್ನು ತಡೆದು ಈ ರೀತಿಯಾಗಿ ಏಕೆ ವ್ಯವಹರಿಸುತ್ತಿರುವೆ ಎಂದಾಗ ಹಣ ನೀಡು ಇಲ್ಲದೇ ಹೋದಲ್ಲಿ ಚಾಕು ಹಾಕುವುದಾಗಿ ಜೇಬಿನಿಂದ ಚಾಕುವನ್ನು ಹೊರತೆಗೆದು ಬೆದರಿಸಿದ್ದಾನೆ ಎನ್ನಲಾಗಿದೆ. 

ಈ ಕುರಿತಾಗಿ ಪ್ರತಿರೋಧ ವ್ಯಕ್ತಪಡಿಸಿದಾಗ ಚಾಕುವನ್ನು ಹೊಟ್ಟೆಗೆ ಚುಚ್ಚಿ ಜೇಬಿನಲ್ಲಿದ್ದ 400 ರೂಪಾಯಿ ಹಣವನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಲ್ಲೇ ಕುಸಿದು ಬಿದ್ದಿದ್ದ ರಮೇಶ್ ಬೆಳಗ್ಗಿನವರೆಗೂ ನರಳಾಡಿ, ಬೆಳಗ್ಗೆ ಪರಿಚಯಸ್ಥರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. 

ಘಟನಾ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಹಾಸನ ನಗರಠಾಣಾ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.