ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ತರಕಾರಿಗಳು, ಹಣ್ಣುಗಳು ವಿವಿಧ ಆಕಾರ ವಿವಿಧ ರೀತಿಗಳಲ್ಲಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ ಹೊಲವೊಂದರಲ್ಲಿರುವ ಮರದಲ್ಲಿ ಗಣಪತಿಯ ಆಕೃತಿ ನಿರ್ಮಾಣವಾಗಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : ಬಾಳೆಹೊನ್ನೂರು : ಯುವಕರ ನಡುವೆ ಗ್ಯಾಂಗ್ ವಾರ್ ; ದೂರು ಪ್ರತಿದೂರು ದಾಖಲು
ಚಿಕ್ಕಮಗಳೂರಿನ ಹೊಲವೊಂದರಲ್ಲಿರುವ ಈಚಲು ಮರದಲ್ಲಿ ಗಣಪನ ಆಕಾರ ಮೂಡಿದೆ. ಈ ಗಣಪನನ್ನು ಕಂಡು ಜನ ಭಕ್ತಿ ಭಾವಗಳಿಗೊಳಗಾಗಿದ್ದಾರೆ. ಗಣಪತಿಯನ್ನೇ ಹೋಲುವ ಸೊಂಡಿಲು, ಕಣ್ಣು, ಕೈ, ದೇಹದ ಆಕಾರ ಮರದ ಬುಡದಲ್ಲಿ ಮೂಡಿದೆ. ಸ್ಥಳೀಯರು ಬಂದು ಭಕ್ತಿ ಭಾವಗಳಿಂದ ಪೂಜೆ, ಪ್ರಾರ್ಥನೆಯನ್ನು ಪ್ರತಿನಿತ್ಯವೂ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿದ್ದು, ಎಲ್ಲ ಗಣಪತಿಗಳು ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ ಈ ಈಚಲು ಮರದಲ್ಲಿ ಉದ್ಭವಿಸಿರುವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿರುವುದು ಜನರಲ್ಲಿ ಇನ್ನಷ್ಟು ಅಚ್ಚರಿ ಮೂಡಿಸಿದೆ.
ಕೌತುಕದಿಂದ ಮರದಲ್ಲಿ ಮೂಡಿರುವ ಗಣಪನನ್ನು ನೋಡಲು ಬರುವ ಜನರು ನಂತರದಲ್ಲಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿ ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.
ಭೂಕುಸಿತ ಸಂಭವಿಸುವ ಭೀತಿ ಹಿನ್ನೆಲೆ ; ಮಳೆಗಾಲದಲ್ಲಿ ಮರಗಳ ಸಾಗಾಣಿಕೆಗೆ ತಡೆಯೊಡ್ಡುವಂತೆ ಸಾರ್ವಜನಿಕರ ಆಗ್ರಹ
ಚಿಕ್ಕಮಗಳೂರು : ನಿರಂತರವಾಗಿ ಮರಗಳ ಸಾಗಾಟ, ಮರ ಕಡಿಯುವಿಕೆಗಳಿಂದಾಗಿ ಗುಡ್ಡ ಕುಸಿತದಂತಹ ಘಟನೆಗಳು ಮಲೆನಾಡಿನಲ್ಲಿ ಸಂಭವಿಸುತ್ತಿದ್ದು ಮಲೆನಾಡಿಗರು ಕಂಗಾಲಾಗಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ಯಾವೆಲ್ಲಾ ರೀತಿಯ ಸಂಕಷ್ಟಗಳು ಎದುರಾಗಲಿದೆಯೋ ಎಂಬ ಆತಂಕ ಈಗಾಗಲೇ ಮಲೆನಾಡಿಗರಲ್ಲಿ ಮೂಡಿದೆ.
ಹೆಚ್ಚುಮಳೆ ಬೀಳುವ ಪ್ರದೇಶಗಳಲ್ಲಿ ಕಾಫಿನಾಡು ಚಿಕ್ಕಮಗಳೂರು ಸಹ ಒಂದು, ಕಳೆದ ವರ್ಷಗಳ ನಿರಂತರ ಮಳೆಯಿಂದಾಗಿ ರಸ್ತೆ ಕುಸಿತ, ಗುಡ್ಡ ಧರೆ ಕುಸಿತ, ಪ್ರವಾಹ ಮುಂತಾದವುಗಳು ಜನರ ಬದುಕಿಗೆ ಸಮಸ್ಯೆಗಳನ್ನು ತಂದೊಡ್ಡಿತ್ತು. ಪ್ರಸ್ತುತ ಸರ್ಕಾರವನ್ನು ಮನವಿ ಮಾಡಿರುವ ಸಾರ್ವಜನಿಕರು ಮಳೆಗಾಲದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿದು ಸಾಗಣೆ ಮಾಡಲು ಅವಕಾಶ ಕಲ್ಪಿಸಬಾರದು ಎಂದು ಸರ್ಕಾರವನ್ನು ಕೋರಿದ್ದಾರೆ.
ಶೃಂಗೇರಿ, ಕಳಸ, ಹೊರನಾಡು, ಕುದುರೆಮುಖ, ಮೂಡಿಗೆರೆ, ಎನ್. ಆರ್.ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಣ್ಣ ಸಣ್ಣ ಸೇತುವೆಗಳಿದ್ದು ಅದರಲ್ಲೂ ಕೆರೆಕಟ್ಟೆ ಮಾರ್ಗದಲ್ಲಿರುವ ಸೇತುವೆಗಳು ಶಿಥಿಲಾವಸ್ಥೆಯನ್ನು ತಲುಪಿದ್ದು ಅಧಿಕಾರಿಗಳು ಇತ್ತ ಗಮನವಹಿಸಿ 8,10,12 ಚಕ್ರಗಳ ಲಾರಿಗಳಲ್ಲಿ ಮರಗಳ ಸಾಗಾಟ ನಡೆಸುವುದನ್ನು ತಡೆಯಬೇಕೆಂದು ಕೋರಿದ್ದಾರೆ.
ಮರಗಳನ್ನು ಕಡಿಯುವುದು ಬೆಟ್ಟ ಗುಡ್ಡಗಳ ಕುಸಿತಕ್ಕೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಮಳೆಗಾಲದ ಅವಧಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಡೆಯಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಅನುಮತಿ ಪಡೆಯದೆ ಮರಗಳನ್ನು ಕಡಿಯುತ್ತಿರುವ ಮಾಫಿಯಾವನ್ನು ಪತ್ತೆ ಮಾಡಬೇಕು. ಯಾವುದೇ ಕಾರಣಕ್ಕೂ ಮರಗಳ ಸಾಗಾಟಕ್ಕೆ ಮಳೆಗಾಲದ ಅವಧಿಯಲ್ಲಿ ಅನುಮತಿ ನೀಡಬಾರದು ಎಂಬುದು ಮಲೆನಾಡಿಗರ ಒಕ್ಕೊರಲಿನ ಆಗ್ರಹವಾಗಿದೆ.






0 Comments