ಚಿಕ್ಕಮಗಳೂರು :

ಎನ್.ಆರ್ ಪುರ: ಕೆರೆ ಹೂಳು ತೆಗೆಯದೆ ಬಿಲ್ ಮಾಡಿ ಹಗರಣ: ಅಧಿಕಾರಿ ಸಸ್ಪೆಂಡ್

ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ಸಂಬಂಧಿಸಿದಂತೆ ನರಸಿಂಹರಾಜಪುರದ 37 ಕೆರೆಯ ಹೂಳೆತ್ತದೆ ಕೇವಲ ದಾಖಲೆಗಾಗಿ ಮಾತ್ರ ಜೆಸಿಬಿ ಹಾಗೂ ಟ್ರಾಕ್ಟರ್ ಗಳನ್ನು ಕೆರೆಯ ಪಕ್ಕದಲ್ಲಿ ನಿಲ್ಲಿಸಿ ಫೋಟೋ ತೆಗೆದು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಪಂಚಾಯತ್ ರಾಜ್ ಇಲಾಖೆಯ ಎಇಇ ಮಂಜುನಾಥ್ ರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಆದೇಶ ನೀಡಿದ್ದಾರೆ. 37 ಕೆರೆಗಳ ಹೂಳು ತೆಗೆಯುವ ಕಾಮಗಾರಿಯನ್ನು ನಡೆಸದೆ,ಸರ್ಕಾರಕ್ಕೆ ಹಣ ಮರಳಿ ಹೋಗುತ್ತದೆ ಎಂಬ ಕಾರಣಕ್ಕೆ ಹಣವನ್ನು ಕೆಲಸವೇ ನಡೆಸದ ಗುತ್ತಿಗೆದಾರನ ಖಾತೆಗೆ ಇಂಜಿನಿಯರ್ ಜಮೆ ಮಾಡಿದ್ದರು. ಈ ಕುರಿತಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ಕೂಡ ಗಂಭೀರ ಆರೋಪವನ್ನು ಮಾಡಿದ್ದರು. ಈ ಅವ್ಯವಹಾರದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಅವರು ತಾಲೂಕು ಪಂಚಾಯತ್ ಇಓ ನಯನಾ ಅವರಿಗೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ವರದಿ ನೀಡುವಂತೆ ಸೂಚನೆ ನೀಡಿದ್ದರು, ಸೂಚನೆಯ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ನಯನ ಕೆರೆಯ ಹೂಳೆತ್ತುವ ಕಾಮಗಾರಿಗಳು ನಡೆಯದಿರುವುದನ್ನು ವರದಿಯ ಮೂಲಕ ಸಲ್ಲಿಸಿದ್ದಾರೆ. ಈ ವರದಿಯನ್ನಾಧರಿಸಿ ಯಾವುದೇ ಕಾಮಗಾರಿಗಳು ನಡೆಯದ ಹಿನ್ನೆಲೆ ಅಧಿಕಾರಿಯ ಸಸ್ಪೆಂಡ್ ಗೆ ಆದೇಶಿಸಿದ್ದಾರೆ. 37 ಕೆರೆಗಳ ಅಭಿವೃದ್ಧಿಗೆಂದು, 25 ಲಕ್ಷಕ್ಕೂ ಅಧಿಕ ಹಣ ಸರ್ಕಾರದಿಂದ ಬಿಡುಗಡೆಯಾಗಿತ್ತು, ಆದರೆ ಯಾವುದೇ ಕೆಲಸಗಳನ್ನು ಮಾಡದೆ ಹಣವನ್ನು ಗುತ್ತಿಗೆದಾರನಿಗೆ ಹಾಕಿ ಸೂಕ್ತ ರೀತಿಯ ಕಾಮಗಾರಿಗಳನ್ನು ನಡೆಸದೆ ಅಕ್ರಮದಲ್ಲಿ ಭಾಗಿಯಾಗಿರುವ ಕಾರಣ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ನಡೆಯುವ ಅಶಿಸ್ತಿನ ವರ್ತನೆ ಸಹಿಸಲಾಗುವುದಿಲ್ಲ ; ಸಿಇಓ ಜಿ.ಪ್ರಭು

ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಯೋಜನೆಯನ್ನು ರೂಪುಗೊಳಿಸಲಾಗಿದ್ದು ಸಮರ್ಪಕ ಸೌಲಭ್ಯಗಳನ್ನು ಹೊಂದಿದ್ದರೂ ಮಾಡುವ ಕೆಲಸಗಳಲ್ಲಿ ಬೇಜವಾಬ್ದಾರಿ ತೋರುವವರ ಮೇಲೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಶಿಶುಗಳ ಮರಣ ಪ್ರಮಾಣವು ಹೆಚ್ಚಾಗುತ್ತಿದೆ ಎಂಬುದರ ಕುರಿತಾಗಿ ಮಾತನಾಡಿದ ಅವರು ಶಿಶುಗಳ ಹಾಗೂ ಗರ್ಭಿಣಿಯರ ಆರೋಗ್ಯಕ್ಕೆ ಯಾವುದೇ ತೊಡಕುಗಳು ಎದುರಾಗದಂತೆ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದರೂ ಕೂಡ ಶಿಶು ಮರಣ ಪ್ರಮಾಣದ ಸಂಖ್ಯೆ ಅಧಿಕವಾಗಿದೆ. ಈ ಸಂಬಂಧ ಹೆಚ್ಚಿನ ನಿಗಾವಹಿಸಿ ಲೋಪಗಳಿದ್ದರೆ ಸರಿದೂಗಿಸಿಕೊಂಡು 

ಹೋಗುವಂತೆ ಸೂಚಿಸಿದರು. ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದ ಔಷಧ ದಾಸ್ತಾನಿದ್ದು, ಹೊಸದಾಗಿ ಬಂದಿರುವ ಔಷಧಿಗಳನ್ನಿಡಲು ಜಾಗದ ಸಮಸ್ಯೆಗಳಿರುವಂತಾಗಿದೆ. ಈ ರೀತಿಯ ಉತ್ಕೃಷ್ಟ ಗುಣಮಟ್ಟದ ಔಷಧಿಗಳು ಲಭ್ಯವಿರುವಾಗ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಬೇರೆ ಮೆಡಿಕಲ್ ಗಳಲ್ಲಿ ಔಷಧ ಖರೀದಿ ಮಾಡುವಂತೆ ವೈದ್ಯರು ಸೂಚಿಸುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಿದರು.


ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ KSRTC ಬಸ್ ಸಂಚಾರ ಆರಂಭ :

ಕಳೆದ ಕೆಲವು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಾಲೇಜು ವಿದ್ಯಾರ್ಥಿಗಳು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ತಮಗೆ ಶಾಲಾ ಕಾಲೇಜುಗಳಿಗೆ ಬರಲು ಉಂಟಾಗುತ್ತಿದ್ದ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ 10 ದಿನಗಳೊಳಗೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದ ತಹಸೀಲ್ದಾರ್ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತೀರ್ಥಹಳ್ಳಿ ಭಾಗದಿಂದ ಶಾಲಾ ಕಾಲೇಜಿನ ಸಮಯಕ್ಕೆ KSRTC ಸಂಚಾರವನ್ನು ಇಂದಿನಿಂದ ಆರಂಭಿಸಲಾಗಿದೆ. ಈ ಕುರಿತಾಗಿ ಹರ್ಷ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ತಹಸೀಲ್ದಾರ್ ರಿಗೆ ಧನ್ಯವಾದಗಳನ್ನು ತಿಳಿಸಿದರು. 


ಕೊಪ್ಪ : ನೂತನ ತಹಸೀಲ್ದಾರ್ ಆಗಿ ವಿಮಲಾ ಸುಪ್ರಿಯ ಅಧಿಕಾರ ಸ್ವೀಕಾರ

ಕೊಪ್ಪ ತಾಲೂಕಿನ ನೂತನ ತಹಸೀಲ್ದಾರ್ ಆಗಿ ವಿಮಲಾ ಸುಪ್ರಿಯ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತಹಸೀಲ್ದಾರ್ ಆಗಿ ಎರಡು ವರ್ಷಗಳ ಕಾಲ ಹೆಚ್.ಎಸ್ ಪರಮೇಶ್ವರ್ ಅವರು ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಅವರು ವರ್ಗಾವಣೆಗೊಂಡಿದ್ದು ಅವರಿಂದ ತೆರವಾದ ಸ್ಥಾನಕ್ಕೆ ನೂತನ ತಹಸೀಲ್ದಾರ್ ಆಗಿ ವಿಮಲಾ ಸುಪ್ರಿಯ ಅಧಿಕಾರ ಸ್ವೀಕರಿಸಿದರು. ಕೊಪ್ಪದ ಶಿರಸ್ತೇದಾರ್ ರಶ್ಮಿ ಅವರು ನೂತನ ತಹಸೀಲ್ದಾರ್ ರಿಗೆ ಹೂಗುಚ್ಚವನ್ನು ನೀಡುವುದರ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. 

ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಜುಲೈ 1 ನೆಯ ತಾರೀಖಿನಿಂದ 4 ನೆಯ ತಾರೀಖಿನ ವರೆಗೆ ಉಡುಪಿ, ದಕ್ಷಿಣ ಕನ್ನಡ, ಕೊಡಗು,ಚಿಕ್ಕಮಗಳೂರು, ಹಾಗೂ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನೈಋತ್ಯ ಮುಂಗಾರು ಚುರುಕಾದ ಹಿನ್ನೆಲೆ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದೆ ಎನ್ನಲಾಗಿದ್ದು, ಕರಾವಳಿ ಭಾಗದ ಜನರ ಜೀವನಕ್ಕೆ ಭಾರೀ ಮಳೆಯಿಂದಾಗಿ ಸಮಸ್ಯೆಯುಂಟಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ,ಕೊಪ್ಪ, ಮೂಡಿಗೆರೆ ಸೇರಿದಂತೆ ವಿವಿಧೆಡೆಗಳಲ್ಲಿ ಮಳೆಯಾಗುತ್ತಿದ್ದು ಮುಂದಿನ ನಾಲ್ಕು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯಾಗುವ ಮುನ್ನಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.


ನಾಳೆ ಸ್ವಯಂ ಪ್ರೇರಿತ ಸಂಪೂರ್ಣ ಮೂಡಿಗೆರೆ ಪಟ್ಟಣ ಬಂದ್'ಗೆ ಕರೆ

ರಾಜಸ್ಥಾನದಲ್ಲಿ ಇಬ್ಬರು ಮುಸಲ್ಮಾನರು ಬರ್ಬರವಾಗಿ ಓರ್ವ ಹಿಂದೂ ಟೈಲರ್ ಹತ್ಯೆ ಮಾಡಿರುವುದನ್ನು ಖಂಡಿಸಿ ಹಾಗೂ ಬಂಧಿತರಿಗೆ ಗುಂಡೇಟು ಅಥವಾ ಗಲ್ಲುಶಿಕ್ಷೆ ನೀಡಬೇಕೆಂದು ಆಗ್ರಹಿಸಿ ನಾಳೆ ಮೂಡಿಗೆರೆ ಸ್ವಯಂ ಪ್ರೇರಿತ ಬಂದ್ ಘೋಷಣೆಯಾಗಿದೆ. ರಾಜಸ್ಥಾನದ ಉದಯಪುರದ ಕನ್ಹಯ್ಯ ಲಾಲ್ ಎಂಬ ಸಾಮಾನ್ಯ ಹಿಂದೂ ಟೈಲರ್ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ, ಇದು ಸಹಿಸುವ ಕೃತ್ಯವಲ್ಲ ಇದನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕೆಂದು ಆಗ್ರಹಿಸಿ ಹಾಗೂ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ನಾಳೆ ನಾಗರೀಕರು ಮೂಡಿಗೆರೆ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ್ದಾರೆ. ರಾಷ್ಟ್ರದ್ರೋಹಿಗಳನ್ನು ಸಾರ್ವಜನಿಕವಾಗಿ ನೇಣು ಬಿಗಿದು ಅಥವಾ ಕಲ್ಲು ಹೊಡೆಸಿ ಅಥವಾ ಬಹಿರಂಗ ಗುಂಡೇಟು ಶಿಕ್ಷೆ ನೀಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹವರ ಅಟ್ಟಹಾಸ ನಮ್ಮ ದೇಶದಲ್ಲಿ ಮರುಕಳಿಸದಂತೆ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕೆಂಬ ಆಗ್ರಹವನ್ನು ಸಾರ್ವಜನಿಕರು ಮುಂದಿಟ್ಟುಕೊಂಡು ನಾಳೆ ಬಂದ್ ಗೆ ಕರೆ ನೀಡಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕ ಪ್ರತಿಭಟನೆ ಅಡ್ಯಂತಾಯ ರಂಗಮಂದಿರದಿಂದ ನಡೆಯಲಿದೆ, ಬೆಳಗ್ಗೆ ಆರರಿಂದ ಸಂಜೆ ಆರು ಗಂಟೆಯವರೆಗೆ ಸಂಪೂರ್ಣ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ.


ಶಿವಮೊಗ್ಗ : 

ಬಜರಂಗದಳದ ಕಾರ್ಯಕರ್ತರ ಹರ್ಷನ ಕೊಲೆ ಪ್ರಕರಣ ; NIA ಅಧಿಕಾರಿಗಳ ದಾಳಿ, ಪರಿಶೀಲನೆ

ಶಿವಮೊಗ್ಗ : ಹರ್ಷನ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸರ್ಕಾರ ವಹಿಸಿತ್ತು. ಈ ನಿಟ್ಟಿನಲ್ಲಿ ಇಂದು NIA ಅಧಿಕಾರಿಗಳ ತಂಡ ಶಿವಮೊಗ್ಗದಲ್ಲಿ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದೆ. ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಆಗಮಿಸಿದ್ದು, ಇಂದು ಬೆಳ್ಳಂ ಬೆಳಗ್ಗೆಯೇ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮಾಹಿತಿಯ ಪ್ರಕಾರ ಒಟ್ಟು 8 ವಾಹನಗಳಲ್ಲಿ 30 ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಆಗಮಿಸಿದ್ದು, ಹರ್ಷ ಕೊಲೆ ಪ್ರಕರಣದ ಆರೋಪಿಗಳ ಮನೆ ಸೇರಿದಂತೆ ಮುಂಜಾನೆಯಿಂದ ನಗರದ 18 ಸ್ಥಳಗಳಲ್ಲಿ ದಾಳಿ ಮಾಡಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗಕ್ಕೆ ಆಗಮಿಸಿರುವ ತಂಡದಲ್ಲಿ ಕೇರಳ, ಆಂಧ್ರ ಪ್ರದೇಶದ ಅಧಿಕಾರಿಗಳಿದ್ದಾರೆ ಎನ್ನಲಾಗಿದ್ದು ಘಟನೆಗೆ ಸಂಬಂಧಿಸಿದಂತೆ ವಿವಿಧ ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆಹಾಕಿದ್ದಾರೆ. ಇಂದು ಬೆಳಗ್ಗೆ ಐದು ಗಂಟೆಯಿಂದ ಅಧಿಕಾರಿಗಳು ದಾಳಿ ಆರಂಭಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 13 ಕಡೆಗಳಲ್ಲಿ ವಿಚಾರಣೆ ನಡೆಸಲಾಗಿದೆ. ಬೆಳಿಗ್ಗೆ 10 ಗಂಟೆಯೊಳಗೆ ವಿಚಾರಣೆ ಮುಗಿಸಿ ವಾಪಸ್‌ ತೆರಳಿದ್ದಾರೆ. ಹರ್ಷ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಆರೋಪಿಗಳು ಹಾಗೂ ಅವರ ಸಂಬಂಧಿಕರ ವಿಚಾರಣೆ ನಡೆಸಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಅಧಿಕಾರಿಗಳು ಸುಮಾರು 450 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಸಕ್ರೆಬೈಲಿನಲ್ಲಿ ಬೋಟಿಂಗ್ ಸ್ಪೋರ್ಟ್ ಆರಂಭ :

ಶಿವಮೊಗ್ಗದ ಸಕ್ರೆಬೈಲಿನ ಆನೆಗಳ ಬಿಡಾರದ ಜೊತೆಗೆ ಬೋಟಿಂಗ್ ಸ್ಪೋರ್ಟ್ ಅನ್ನು ನಾಳೆ ದಿನಾಂಕ 1 ಜುಲೈ ರಂದು ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಹಿನ್ನೀರಿನ ನೋಟವನ್ನು ಆಸ್ವಾದಿಸುವುದು ಮಾತ್ರವಲ್ಲದೆ ಸಕ್ರೆಬೈಲಿನಲ್ಲಿ ಜಲಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ. ಇಲ್ಲಿನ ಸುಂದರ ವಾತಾವರಣ ಮನಮೋಹಕವಾಗಿದ್ದು, ಪ್ರವಾಸಿಗರನ್ನು ಸಂತಸಪಡಿಸಲಿದೆ. ಇಲ್ಲಿನ ಶುದ್ಧ ಗಾಳಿ, ನೀರು, ಅಷ್ಟಾಗಿ ಇರದ ಜನಜಂಗುಳಿ ವಾತಾವರಣ ಇದೆಲ್ಲವೂ ಪ್ರವಾಸಿಗರನ್ನು ಆಕರ್ಷಿಸಲಿದೆ. ಇದು ಆಗಮಿಸುವ ಪ್ರವಾಸಿಗರಿಗೆ ಹೆಚ್ಚಿನ ಉತ್ಸುಕತೆ ನೀಡಲಿದೆ.

ಕೊಡಗು :

ಕಾಫಿ ತೋಟದಲ್ಲಿ ಮೃತಪಟ್ಟ ಹೆಣ್ಣಾನೆ 

ಕೊಡಗು : ಆನೆಯೊಂದು ಕಾಫಿ ತೋಟದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಕೊಡಗು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸಮೀಪದಲ್ಲಿರುವ ಬಾಳೆಲೆ ವ್ಯಾಪ್ತಿಯ ಸುಳುಗೋಡುವಿನ ಕಾಫಿ ತೋಟದಲ್ಲಿ ಆನೆಯು ಮೃತಪಟ್ಟಿದೆ.

ಮೃತಪಟ್ಟಿರುವುದು ಹೆಣ್ಣಾನೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದು ಆನೆಯ ಸಾವಿಗೆ ಕಾರಣಗಳೇನು ಎಂದು ಆನೆಯ ಮರಣೋತ್ತರ ಪರೀಕ್ಷೆಯ ನಂತರದಲ್ಲಿ ತಿಳಿಯಲಿದೆ. ಘಟನಾ ಸಂಬಂಧ ತಿತಿಮತಿ ವಲಯದ ಅರಣ್ಯ ಅಧಿಕಾರಿಗಳಾದ ಎಸಿಎಫ್ ಉತ್ತಪ್ಪ, ಆರ್.ಎಫ್ ಒ ಅಶೋಕ್ ಹುನಗುಂದ ಚೇತನ ಅವರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆಯನ್ನು ನಡೆಸಿದ್ದಾರೆ.