ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾನ್ಸ್ಟೇಬಲ್ ಕುಟುಂಬಕ್ಕೆ 30 ಲಕ್ಷ ರೂ ವಿಮಾ ಮೊತ್ತ ವಿತರಣೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿದ್ದು ಮೂವರು ಕಳ್ಳರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಶಿಕಾರಿಪುರ ತಾಲೂಕಿನ ಅಂಜನಾಪುರದ ಸಮೀರ್, ಶಿವಮೊಗ್ಗದ ಶಾಂತಿನಗರದ ಸೊಹೇಲ್, ಟ್ಯಾಂಕ್ ಮೊಹಲ್ಲಾದ ಜುನೈದ್ ಖಾನ್ ಎಂದು ಗುರುತಿಸಲಾಗಿದೆ.
ಈ ಮೂವರು ಆರೋಪಿಗಳು ಸಾಗರ, ಭದ್ರಾವತಿ, ದಾವಣಗೆರೆ, ಹರಿಹರ, ಹಾಸನ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ನಡೆಸಿದ್ದರು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಮನೆಕಳ್ಳತನ ನಡೆಸಿದ್ದ ಅಸ್ಸಾಂ ಮೂಲದ ಇಬ್ಬರು ಪೊಲೀಸರ ಬಲೆಗೆ :
ಕೊಡಗು : ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಲೂಟಿ ಮಾಡಿದ್ದ ಖದೀಮರನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೊಸ್ಕೇರಿ ಗ್ರಾಮದ ಸುಬ್ಬಯ್ಯ ಅವರ ಮನೆಯಲ್ಲಿ ಜೂನ್ 12 ರಂದು ಬೀರುವಿನಲ್ಲಿದ್ದ 9 ರಿಂದ 10 ಲಕ್ಷ ಮೌಲ್ಯದ ಆಭರಣಗಳು ಕಳ್ಳತನವಾಗಿದ್ದವು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದರು. ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ಕಳ್ಳತನ ಮಾಡಿದ ಅಸ್ಸಾಂ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರಿಗಾಗಿ ಶೋಧ ಮುಂದುವರೆಸಿದ್ದಾರೆ. ಕುರ್ಬನ್ ಆಲಿ ಮತ್ತು ಮಹಿರುದ್ದೀನ್ ಆಲಿ ಬಂಧಿತ ಆರೋಪಿಗಳು.
ಬಂಧಿತರಿಂದ 11,70,000 ರೂಪಾಯಿ ಮೌಲ್ಯದ 247.1 ಗ್ರಾಂ ಚಿನ್ನಾಭರಣ ಹಾಗೂ ಪೀಚೆಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳು ಎಸಗಿರುವ ಇನ್ನಷ್ಟು ಕೃತ್ಯಗಳ ಕುರಿತು ಸಂಪೂರ್ಣ ತನಿಖೆಯ ನಂತರ ಮಾಹಿತಿ ಹೊರಬೀಳಲಿದೆ.
ಒಂಟಿ ಮನೆಗಳು , ಮಹಿಳೆಯರಿರುವ ಮನೆಗಳೇ ಟಾರ್ಗೆಟ್ :
ಏನೂ ಅರಿಯದವರಂತೆ ನಟಿಸುವ ಅಸ್ಸಾಂ ಮೂಲದ ಕಾರ್ಮಿಕರು ಯಾವುದಾದರೊಂದು ಪ್ರದೇಶಕ್ಕೆ ಕೆಲಸಕ್ಕೆಂದು ತೆರಳಿದರೆ ಸಾಕು ಮನೆಯವರ ಸಂಪೂರ್ಣ ಚಲನವಲನಗಳ ಮೇಲೆ ನಿಗಾವಹಿಸಿ ಅವರ ಚಟುವಟಿಕೆಗಳನ್ನು ಗಮನಿಸಿ ಕಳ್ಳತನಕ್ಕೆ ಪ್ಲಾನ್ ನಡೆಸುತ್ತಾರೆ. ಅದರಲ್ಲೂ ನಿರ್ಜನ ಪ್ರದೇಶಗಳಲ್ಲಿರುವ ಮನೆಗಳು, ಒಂಟಿ ಮಹಿಳೆಯರಿರುವ ಮನೆಗಳನ್ನು ಗುರುತಿಸಿಕೊಂಡು ಕಳ್ಳತನವನ್ನು ಎಸಗುತ್ತಿರುವ ಪ್ರಕರಣಗಳು ನಡೆದಿವೆ.
ಕೊಡಗಿನಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಏರಿಕೆಯಾಗುತ್ತಿದ್ದು. ಈ ಪ್ರಕರಣಗಳಲ್ಲಿ ಅಸ್ಸಾಂ ಮೂಲದವರೇ ಹೆಚ್ಚಾಗಿ ಸಿಕ್ಕಿಬೀಳುತ್ತಿದ್ದಾರೆ. ಈ ವಲಸೆ ಕಾರ್ಮಿಕರನ್ನು ತೋಟದ ಕೃಷಿ ಕೆಲಸಕ್ಕಾಗಿ ಕರೆಸಲಾಗುತ್ತದೆ, ಕಡಿಮೆ ಸಂಬಳಕ್ಕೆ ಕೆಲಸವನ್ನರಸಿ ಬರುವ ಅವರು ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿ ಯಾರದೇ ಭಯವಿಲ್ಲದೆ ನಿರಾತಂಕವಾಗಿ ಕಳ್ಳತನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ರೀತಿಯ ಪ್ರಕರಣಗಳು ಇನ್ನಷ್ಟು ಗಂಭೀರವಾಗುವ ಮೊದಲು ಕೆಲಸಕ್ಕೆಂದು ಕರೆಯಿಸಿಕೊಳ್ಳುವ ತೋಟದ ಮಾಲೀಕರು ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಕೋರಿದ್ದಾರೆ.






0 Comments