ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗೋಹತ್ಯೆ ನಡೆಸಲು ನಿರ್ಮಾಣ ಮಾಡಿದ್ದ ಶೆಡ್ ಒಂದನ್ನು ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಕಾರ್ಯಾಚರಣೆಯ ಮೂಲಕ ಪತ್ತೆ ಮಾಡಿ ನೆಲಸಮಗೊಳಿಸಿದೆ.

ಚಿಕ್ಕಮಗಳೂರಿನ ತಮಿಳುಕಾಲೋನಿ ಬಳಿಯಲ್ಲಿ ಗೋಹತ್ಯೆ ನಡೆಸಲೆಂದೇ ಖಾಲಿ ಇದ್ದ ಜಾಗದಲ್ಲಿ ಅನಧಿಕೃತವಾಗಿ ಶೆಡ್ಡನ್ನು ನಿರ್ಮಿಸಿ ಗೋಹತ್ಯೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇಂದು ಮುಂಜಾನೆ ಸರಿಸುಮಾರು ಏಳು ಗಂಟೆಯ ಸಮಯದಲ್ಲಿ ನಗರಸಭೆ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಸೇರಿದಂತೆ ಪೌರಾಯುಕ್ತರು, ಇನ್ಸ್ಪೆಕ್ಟರ್, ಸೂಪರ್ವೈಸರ್, ಪೊಲೀಸ್ ಅಧಿಕಾರಿಗಳ ಭದ್ರತೆಯಲ್ಲಿ ದಾಳಿ ನಡೆಸಿ ಈ ಕಾರ್ಯಾಚರಣೆಯನ್ನು ನಡೆಸಿದೆ. 

ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಗೋಮಾಂಸದ ದಂಧೆ ನಡೆಸುವವರ ಕಟ್ಟಡಗಳ ಮೇಲೆ ದಾಳಿ ಮಾಡಿ ಕಟ್ಟಡಗಳನ್ನು ದ್ವಂಸ ಮಾಡುವ ಕೆಲಸವನ್ನು ನಗರಸಭೆ ಮಾಡಲಿದೆ, ಈ  ಕಾರ್ಯಾಚರಣೆಗೆ ಪೊಲೀಸ್ ಇಲಾಖೆಗೆ ನಗರಸಭೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದ್ದೇವೆ, ಅಕ್ರಮ ಚಟುವಟಿಕೆಗಳು ನಡೆಯುವ ಜಾಗಗಳ ಮೇಲೆ ದಾಳಿ ನಡೆಸಿ ಅಕ್ರಮಗಳಿಗೆ ಲಗಾಮ್ ಹಾಕಲಾಗುವುದು - ವರಸಿದ್ಧಿ ವೇಣುಗೋಪಾಲ್, ಚಿಕ್ಕಮಗಳೂರು ನಗರಸಭಾ ಅಧ್ಯಕ್ಷ 

 

ಅಂದಾಜು 400 ಕೆ.ಜಿ ಪ್ರಮಾಣದ ಗೋಮಾಂಸ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಆರು ಜನ ಆರೋಪಿಗಳು ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಘಟನಾ ಸಂಬಂಧ ಆರೋಪಿಗಳನ್ನು ಸೆರೆ ಹಿಡಿಯುವ ಸಲುವಾಗಿ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅಕ್ರಮವಾಗಿ ಲಭ್ಯವಾಗಿರುವ ಗೋಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೇ ಖಾಲಿ ಜಾಗದಲ್ಲಿ ನಿರ್ಮಿಸಲಾಗಿದ್ದ ಶೆಡ್ಡನ್ನು ಅಧಿಕಾರಿಗಳ ಸಮ್ಮುಖದಲ್ಲಿ ಡೆಮಾಲಿಶ್ ಮಾಡಲಾಗಿದೆ.