ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಸೇವಾ ಕಾರ್ಯಗಳ ಜೊತೆಗೆ ಸಮಾಜದ ಹಿತಕ್ಕಾಗಿ ಶ್ರಮಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದು ಹರಿಹರಪುರ ಗುರುಕುಲದ ವ್ಯವಸ್ಥಾಪಕರಾದ ಉಮೇಶ್ ಅವರು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಚೌಡಿಕಟ್ಟೆ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅವಶ್ಯಕವಾಗಿರುವ ಪರಿಕರಗಳನ್ನು ವಿತರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕ್ಷಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಂಚನೆಗೊಳಗಾಗಬಾರದು, ಮಲೆನಾಡಿನ ಬಹುತೇಕ ಪೋಷಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ವಿದ್ಯಾರ್ಥಿಗಳಿಗೆ ಎಲ್ಲಾ ಪರಿಕರಗಳನ್ನು ಒದಗಿಸುವಲ್ಲಿ ಅವರು ಕೂಡ ಕೆಲವೊಂದು ತೊಡಕುಗಳನ್ನು ಎದುರಿಸುತ್ತಿದ್ದಾರೆ, ಇದನ್ನು ಮನಗಂಡು ಸೇವಾ ಸಂಸ್ಥೆಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸುತ್ತಿದ್ದೇವೆ ಎಂದರು.
ಯೂತ್ ಫಾರ್ ಸೇವಾ ಸಂಸ್ಥೆ, ಜಯಪುರದ ಸ್ಪಂದನ ಸ್ವಯಂಸೇವಾ ಸಂಸ್ಥೆ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪರಿಕರಗಳ ವಿತರಣೆ ನಡೆಯಿತು.
ಈ ಕುರಿತಾಗಿ ಮಾತನಾಡಿದ ಸ್ಪಂದನಾ ಸಂಸ್ಥೆಯ ಅಧ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್, ಮೆಗುಂದ ಹೋಬಳಿ ವ್ಯಾಪ್ತಿಯ ಗ್ರಾಮೀಣ ಭಾಗದ ಮಕ್ಕಳನ್ನು ಗುರುತಿಸಿ ಶೈಕ್ಷಣಿಕವಾಗಿ ಅವರಿಗೆ ಪೂರಕ ಸಹಕಾರಗಳನ್ನು ನೀಡುವುದರ ಸಲುವಾಗಿ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಪರಿಕರಗಳನ್ನು ನೀಡುತ್ತಿದ್ದೇವೆ ಎಂದರು.
ಮೇಗುಂದಾ ಹೋಬಳಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ರೈನ್ ಕೋಟ್, ಛತ್ರಿ,ಬ್ಯಾಗ್ ಗಳ ವಿತರಣೆಯನ್ನು ಮಾಡಲಿದ್ದೇವೆ, ವಿದ್ಯೆಗೆ ಪ್ರೋತ್ಸಾಹ ನೀಡುತ್ತಾ ಈ ಭಾಗದ ಮಕ್ಕಳ ಕಲಿಕೆಗೆ ಪೂರಕವಾಗುವ ಎಲ್ಲಾ ಕಾರ್ಯಗಳನ್ನು ಮಾಡಲಾಗುವುದು ಎಂದು ಸ್ಪಂದನ ಸಂಸ್ಥೆಯ ಗೌರವಾಧ್ಯಕ್ಷ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಯವಂತ ಭಟ್, ಕಾರ್ಯದರ್ಶಿ ಅರ್ಪಿತ, ಸುಂದರೇಶ್, ಸಂತೋಷ್, ಅಶೋಕ್, ಮಂಜುನಾಥ್, ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ರಸಗೊಬ್ಬರದ ಮಳಿಗೆಗೆ ದಾಳಿ ನಡೆಸಿದ ಅಧಿಕಾರಿಗಳು ; ದಾಖಲಾತಿಗಳಲ್ಲಿ ಲೋಪವಿದ್ದ ಹಿನ್ನೆಲೆ ಶೋಕಾಸ್ ನೋಟಿಸ್ ಜಾರಿ :
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಾಳೆಹೊಳೆ ಮತ್ತು ಸಂಸೆಯಲ್ಲಿರುವ ರಸಗೊಬ್ಬರ ಮತ್ತು ಕೀಟನಾಶಕ ಗೋದಾಮುಗಳ ಮೇಲೆ ಕೃಷಿ ಜಾಗೃತ ದಳದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸೂಕ್ತವಾಗಿ ನಿರ್ವಹಣೆ ಮಾಡಬೇಕಿದ್ದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಮೂಲ ಪ್ರಮಾಣಪತ್ರ ಹಾಗೂ ಪಿಸಿ ಗಳನ್ನು ನೀಡಿ ಗ್ರಾಹಕರಿಗೆ ವ್ಯವಹಾರ ಮಾಡದೆ ಇರುವುದು ಕಂಡುಬಂದ ಹಿನ್ನೆಲೆ ಅಧಿಕಾರಿಗಳು ಶೋಕಾಸ್ ನೋಟಿಸ್ ಅನ್ನು ಜಾರಿ ಮಾಡಿದ್ದಾರೆ.
ಸೂಕ್ತ ದಾಖಲಾತಿಗಳನ್ನು ನಿರ್ವಹಣೆ ಮಾಡದೆ ಮಾರಾಟ ನಡೆಸುತ್ತಿದ್ದ ರಸ ಗೊಬ್ಬರಗಳಿಗೆ 21 ದಿನಗಳವರೆಗೆ ಮಾರಾಟ ತಡೆ ನೋಟಿಸ್ ನ್ನು ಅಧಿಕಾರಿಗಳು ನೀಡಿದ್ದಾರೆ. ಒಂದು ವೇಳೆ ಅಧಿಕೃತ ದಾಖಲೆಗಳನ್ನು ನೀಡದೆ ಹೋದಲ್ಲಿ ಕಾಯ್ದೆಯ ಅಡಿಯಲ್ಲಿ ವಸ್ತುಗಳನ್ನು ಜಪ್ತಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ದಾಳಿ ನಡೆಯುವ ಸಂದರ್ಭದಲ್ಲಿ ಕೃಷಿ ಜಾಗೃತದಳದ ಸಹಾಯಕ ನಿರ್ದೇಶಕ ವೆಂಕಟೇಶ್ ಚೌಹಾಣ್, ಕಳಸ ಹೋಬಳಿಯ ಕೃಷಿ ಅಧಿಕಾರಿ ಪಾಂಡುರಂಗ, ಹರೀಶ್, ಅಶೋಕ್ ಸೇರಿದಂತೆ ಇತರರು ಇದ್ದರು.






0 Comments