ಕಳಸ : (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಾಗಿ ದೊಡ್ಡ ಮಟ್ಟದ ಚರ್ಚೆ, ಪ್ರತಿಭಟನೆ ವಿವಾದಗಳು ದಿನ ಕಳೆದಂತೆ ಹೆಚ್ಚುತ್ತಿದ್ದರೆ ಇತ್ತ ತಮ್ಮ ಪುಸ್ತಕಗಳನ್ನು ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಹರಸಾಹಸ ಪಡಬೇಕಾದ ದುಸ್ಥಿತಿ ಕಳಸದಲ್ಲಿ ನಿರ್ಮಾಣವಾಗಿದೆ. 

ಇದನ್ನೂ ಓದಿ : ಗುರುವಿಗೆ ತಿರುಗುತ್ತರ ನೀಡಿದ ವಿದ್ಯಾರ್ಥಿ, ಸಿಟ್ಟಿಗೆದ್ದ ಶಿಕ್ಷಕನಿಂದ ಬಾಸುಂಡೆ ಬರುವಂತೆ ಏಟು

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತನೋಡಿ ಸರ್ಕಾರಿ ಶಾಲೆಯಲ್ಲಿ ಮಳೆ ನೀರು ಶಾಲಾ ಕಟ್ಟಡದೊಳಗೆ ಬರುವ ಪರಿಣಾಮ ಮಕ್ಕಳ ಪಠ್ಯ ಪುಸ್ತಕಗಳು ಸಂಪೂರ್ಣವಾಗಿ ಒದ್ದೆಯಾಗಿದೆ, ಇದರಿಂದಾಗಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಬಿಸಿಲಿನಲ್ಲಿಟ್ಟು ಒಣಗಿಸಬೇಕಾದಂತಹ ಪರಿಸ್ಥಿತಿ ತಲೆದೋರಿದ್ದು ಸರ್ಕಾರಿ ಶಾಲೆಗಳನ್ನು ಸಂರಕ್ಷಿಸಬೇಕಿರುವ ಸರ್ಕಾರ ಹಾಗೂ ಇಲಾಖೆ ಕಣ್ಣುಮುಚ್ಚಿ ಕುಳಿತಂತೆ ಭಾಸವಾಗುತ್ತಿದೆ. 

ಪ್ರತಿ ಬಾರಿಯೂ ಮಳೆ ಬಂದಾಗ ಇಂತಹುದೇ ಪರಿಸ್ಥಿತಿಯನ್ನು ಮಕ್ಕಳು ಎದುರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದ್ದು, ಈ ಕುರಿತಾಗಿ ಯಾರೂ ಕೂಡ ಗಮನನೀಡಿ ಸ್ಪಂದನೆ ಮಾಡದೇ ಇರುವುದು ಅತ್ಯಂತ ಖಂಡನಾರ್ಹ ಎಂಬುದಾಗಿ ಸಾರ್ವಜನಿಕರು ವಿದ್ಯಾರ್ಥಿಗಳಿಗಾಗುತ್ತಿರುವ ಸಮಸ್ಯೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶಾಲೆಯಲ್ಲಿ ಒಟ್ಟು 28 ಮಂದಿ ವಿದ್ಯಾರ್ಥಿಗಳಿದ್ದು ಹೆಚ್ಚಿನವರು ದಿನಗೂಲಿ ಮಾಡುವ ಕೆಲಸಗಾರರ ಮಕ್ಕಳಾಗಿದ್ದಾರೆ. ಈ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಗಳುಂಟಾಗದಂತೆ ಶಾಲಾ ಮಂಡಳಿ ಹಾಗೂ ಮೇಲಧಿಕಾರಿಗಳು ಎಚ್ಚರವಹಿಸಬೇಕಿದೆ. 

ಮಳೆ ನೀರಿನಲ್ಲಿ ಒದ್ದೆಯಾಗಿರುವ ಪುಸ್ತಕಗಳನ್ನು ಮಕ್ಕಳು ಒಣಗಿಸುತ್ತಿರುವ ದೃಶ್ಯಗಳು ಬೇಸರ ಮೂಡಿಸುವಂತಿದ್ದು ಆಡಳಿತ ನಡೆಸುವ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಿ ಸಮಸ್ಯೆಗೆ ಪೂರಕವಾಗಿ ಸ್ಪಂದನೆಮಾಡಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ.