ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಇಂದು  ಗುಂಪು ಗುಂಪಾಗಿ  ಕಾಡಾನೆಗಳು ಕೊಡಗಿನ  ರಸ್ತೆಯಲ್ಲಿ ಓಡಾಟ ನಡೆಸುವುದನ್ನು ಕಂಡು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರ್ ; ಸ್ಥಳದಲ್ಲೇ ಓರ್ವ ವ್ಯಕ್ತಿಯ ದುರ್ಮರಣ

ವಿರಾಜಪೇಟೆ ತಾಲೂಕಿನ ತಿತಿಮತಿ ಅಬ್ಬೂರುಕಟ್ಟೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ  ಕಾಡಾನೆಗಳು ಓಡಾಡುತ್ತಿರುವುದು ಸಾರ್ವಜನಿಕರಿಗೆ ಕಂಡಿದೆ.  ಆನೆಗಳು ಒಂದೆಡೆಯಿಂದ ಇನ್ನೊಂದೆಡೆಗೆ ಓಡುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದರೆ, ಅನೇಕರು ಆನೆಗಳ ಓಡಾಟವನ್ನು ಕಂಡು ಭಯಕ್ಕೀಡಾಗಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಕಾಫಿ ತೋಟಕ್ಕೆ ಬಂದ ಆನೆಗಳನ್ನು ಕಾಡಿಗಟ್ಟಿದರೂ ಅವುಗಳು ಮತ್ತೆ ಆಹಾರ ಅರಸಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಬೆಳೆದ ಬೆಳೆಗಳನ್ನು ಆನೆಗಳು ಹಾಳು ಮಾಡುತ್ತಿವೆ ಎಂದು ಸಾರ್ವಜನಿಕರು ತಮ್ಮಗೋಳನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಆನೆಗಳು ಈ ಭಾಗದ ಕೃಷಿಕರಿಗೆ ಸಮಸ್ಯೆ ನೀಡುತ್ತಲೇಬಂದಿವೆ. ಅತಿವೃಷ್ಟಿ, ಅನಾವೃಷ್ಟಿ, ವಿವಿಧ ಬಗೆಯ ರೋಗಗಳಿಂದ ಜನರು ತಮ್ಮ ತೋಟಗಳಲ್ಲಿ ಬೆಳೆಯನ್ನು ರಕ್ಷಿಸಿಕೊಂಡು ಬರುತ್ತಿದ್ದರೆ ಇತ್ತ ಆನೆದಾಳಿಯು ಬೆಳೆದ ಬೆಳೆಯನ್ನು ಸಂಪೂರ್ಣವಾಗಿ ನಾಶಮಾಡುತ್ತಿದೆ. 

ಆನೆಗಳನ್ನು ನಾಡಿನಿಂದ ಕಾಡಿಗಟ್ಟುವ ಕ್ಷಿಪ್ರ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಬೇಕು, ಜನರಿಗೆ ಹಾಗೂ ಬೆಳೆದ ಬೆಳೆಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಆನೆ ದಾಳಿಯಿಂದ ಉಂಟಾಗದಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.

ನೀರು ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಎಗರಿಸಲು ಯತ್ನಿಸಿದ ಖದೀಮರು

ತೀರ್ಥಹಳ್ಳಿ : ನೀರು ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕದಿಯಲು ಕಳ್ಳರು ಯತ್ನಿಸಿರುವ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಡಿಗ ಗ್ರಾಮದ ಸಿದ್ಧಾಪುರದಲ್ಲಿ ಈ ಕೃತ್ಯ ನಡೆದಿದ್ದು, ಮನೆಯಲ್ಲಿ ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿದ ಕಾರಿನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯ ಬಳಿಗೆ ತೆರಳಿ ನೀರು ಕೇಳಿದ್ದಾರೆ. ಈ ಸಮಯದಲ್ಲಿ ನೀರು ತರಲೆಂದು ಮಹಿಳೆ ತೆರಳಿದಾಗ ಓರ್ವ ಕಾರ್ ಒಳಗೆ ಕುಳಿತು ಹೊರಡಲು ತಯಾರಾಗಿದ್ದಾನೆ, ಮಹಿಳೆ ನೀರು ತಂದ ಕೂಡಲೇ ಆಕೆಯ ಕುತ್ತಿಗೆಗೆ ಕೈ ಹಾಕಿ ಸರ ಎಗರಿಸಲು ಕಳ್ಳ ಯತ್ನಿಸಿದ್ದಾನೆ. 

ಕೂಡಲೇ ಮಹಿಳೆಯು ಕಿರುಚಾಡಿದಾಗ ಅಕ್ಕ ಪಕ್ಕದಲ್ಲಿದ್ದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ, ಈ ಸಂದರ್ಭದಲ್ಲಿ ಆತನು ಓಡಿ ಹೋಗಿದ್ದು ಕಾರಿನಲ್ಲಿದ್ದ ಇನ್ನೋರ್ವ ಎಲ್ಲೂ ಹೋಗಲಾರದೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಗಳು ಬಯಲುಸೀಮೆ ಮೂಲದವರಾಗಿದ್ದು, ಈ ಭಾಗದಲ್ಲಿ ಜೆಸಿಬಿ ಕೆಲಸವನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. 

ಈ ಹಿಂದೆಯೂ ಕೂಡ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ದರೋಡೆ ನಡೆಸಲು ಯತ್ನಿಸಿದ್ದರು, ಈ ಘಟನೆಯ ಕುರಿತಾಗಿ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿರುವ ಈ ಸಂದರ್ಭದಲ್ಲಿ ಇನ್ನೊಂದು ಕಳ್ಳತನದ ಯತ್ನವು ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ಈ ಕೃತ್ಯಕ್ಕೆ ಆರೋಪಿಗಳು ಬಳಸಿದ್ದ ಕಾರ್ ಕೋಣಂದೂರು ಮೂಲದ ವ್ಯಕ್ತಿಯೋರ್ವರದ್ದು ಎನ್ನಲಾಗಿದ್ದು ಯಾವ ಕಾರಣಕ್ಕಾಗಿ ಕಾರ್ ತಂದಿದ್ದರು ಎಂದು ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

ಈ ಭಾಗದಲ್ಲಿ ಕೆಲಸ ಮಾಡುವ ನೆಪದಲ್ಲಿ ಬೇರೆ ಬೇರೆ ಊರುಗಳಿಂದ ಅನೇಕರು ಬರುತ್ತಿದ್ದು ಅವರುಗಳ ಪರಿಚಯ ಹಾಗೂ ಚಲನವಲನಗಳ ಮೇಲೆ ಯಾರಿಗೂ ಹೆಚ್ಚಿನ ಮಾಹಿತಿಗಳಿಲ್ಲದೆ ಇರುವ ಕಾರಣ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುತ್ತುದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಘಟನಾ ಸಂಬಂಧ ಆರೋಪಿಗಳಿಂದ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು,  ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಕೋರಿದ್ದಾರೆ.