ಕಡೂರು : (ನ್ಯೂಸ್ ಮಲ್ನಾಡ್ ವರದಿ) ಡಿವೈಡರ್ ಗೆ ಆಟೋ ಗುದ್ದಿದ ಪರಿಣಾಮ ಮಹಿಳೆಯೋರ್ವರು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಕಡೂರಿನಲ್ಲಿ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಡಿವೈಡರ್ ಗೆ ಗುದ್ದಿದ ಪರಿಣಾಮ ಈ ಅವಘಡ ಸಂಭವಿಸಿದ್ದು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ 43 ವರ್ಷ ಪ್ರಾಯದ ಸೌಭಾಗ್ಯ ಎಂಬುವವರು ದುರ್ಮರಣಕ್ಕೀಡಾಗಿದ್ದಾರೆ. 

ಅಪಘಾತದ ತೀವ್ರತೆಗೆ ಆಟೋದಲ್ಲಿದ್ದ ಗೆಳತಿಯರಾದ ಚಂದನಾ ಹಾಗೂ ಸೌಭಾಗ್ಯ ಇಬ್ಬರ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿತ್ತು. ಪ್ರಾಥಮಿಕ ಚಿಕಿತ್ಸೆಗಾಗಿ ಅವರನ್ನು ಕಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೌಭಾಗ್ಯ ಅವರು ಕೊನೆಯುಸಿರೆಳೆದಿದ್ದಾರೆ. 

ಅಪಘಾತಕ್ಕೀಡಾದ ಚಂದನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.