ಚಿಕ್ಕಮಗಳೂರು :
ಚಿಕ್ಕಮಗಳೂರಿನ ಖಾಂಡ್ಯ ಮೂಲದ ಕರ್ತವ್ಯನಿರತ ಯೋಧನ ಶವ ಪತ್ತೆ
ಚಿಕ್ಕಮಗಳೂರು : ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿಕ್ಕಮಗಳೂರು ಮೂಲದ ಗಣೇಶ್ ಎಂಬ ಯೋಧನ ದೇಹ ಪತ್ತೆಯಾಗಿದೆ. ಮೂಲತಃ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮಸೀಗದ್ದೆ ಮೂಲದ ಭಾರತೀಯ ಸೇನೆಯ ಯೋಧ ಗಣೇಶ್ ಅವರು ಏಪ್ರಿಲ್ 24 ರಂದು ಊರಿಗೆ ಬಂದಿದ್ದು ಜೂನ್ 09ರಂದು ಮನೆಯಿಂದ ವಾಪಸ್ ಕರ್ತವ್ಯದ ಸಲುವಾಗಿ ತೆರಳಿದ್ದರು ಎನ್ನಲಾಗಿದೆ. ವಾಪಸ್ ಗುವಾಹಟಿಗೆ ಸಾಗುವಾಗ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಅವರ ಸಾವಿಗೆ ನಿಖರ ಕಾರಣಗಳೇನು ಎಂದು ಈ ವರೆಗೆ ತಿಳಿದುಬಂದಿಲ್ಲ.ಸ್ಥಳೀಯರು ಹಾಗೂ ಸುತ್ತಮುತ್ತಲಿನ ಊರಿನವರು ಅಪಾರ ಸಂಖ್ಯೆಯಲ್ಲಿ ಮೃತರ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಲು ಆಗಮಿಸುತ್ತಿದ್ದು, ಮುಂದಿನ ಕಾರ್ಯಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ಕಾರ್ಯಗಳು ನಡೆಯುತ್ತಿದೆ.
ಪತ್ರಿಕೋದ್ಯಮ ಪದವಿಯಲ್ಲಿ ಚಿನ್ನದ ಪದಕ ಪಡೆದ ಯುವತಿ :
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಯ ಉದಯಕುಮಾರ್ ಹಾಗೂ ಮಹಾಲಕ್ಷ್ಮಿ ದಂಪತಿಗಳ ಪುತ್ರಿ ಅಮುದಾ ಪತ್ರಿಕೋದ್ಯಮ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ತಂದೆ-ತಾಯಿಯರು ಕೂಲಿ ಕೆಲಸ ಮಾಡಿಕೊಂಡು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದು ರಜಾದಿನಗಳಲ್ಲಿ ಈ ಯುವತಿಯು ಕೂಡ ಪೋಷಕರೊಂದಿಗೆ ಕೆಲಸಕ್ಕೆ ತೆರಳುತ್ತಿದ್ದಳು, ಬಹಳಷ್ಟು ಕಷ್ಟ ಪಟ್ಟು 3 ಕಿಮೀ ನಡೆದುಕೊಂಡೆ ಕಾಲೇಜಿಗೆ ಹೋಗಿಬರುತ್ತಿದ್ದ ಯುವತಿ ತನ್ನ ಶ್ರಮ ಹಾಗೂ ಶ್ರದ್ಧೆಯಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ. ಚಿನ್ನದ ಪದಕವನ್ನು ಪಡೆದಿರುವ ಯುವತಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು ಈ ಸಾಧನೆ ಅದ್ವಿತೀಯ ಎಂದು ಅನೇಕರು ಹಾರೈಸಿದ್ದಾರೆ.
ಶಿವಮೊಗ್ಗ :
ವಸತಿ ವಿದ್ಯಾಲಯದ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರತಿಭಟನೆ
ಸಾಗರದ ಅಟಲ್ ಬಿಹಾರಿ ವಾಜಪೇಯಿ ವಸತಿ ವಿದ್ಯಾಲಯದ ವಿದ್ಯಾರ್ಥಿಗಳು ನಿನ್ನ ತಡರಾತ್ರಿ ತಮ್ಮ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆರನೇ ತರಗತಿಯಿಂದ 10ನೇ ತರಗತಿಯವರೆಗೆ ಮಕ್ಕಳು ಓದುವ ಈ ಶಾಲೆಯಲ್ಲಿ ಪ್ರಾಚಾರ್ಯೆಯ ವಿರುದ್ಧ ಪ್ರತಿಭಟನೆ ನಡೆಯಿತು, ಹೊಡೆಯುತ್ತಾರೆ ಬೈಯ್ಯುತ್ತಾರೆ ಆದರೆ ಸರಿಯಾದ ಆಹಾರವನ್ನು ನೀಡುವುದಿಲ್ಲ ಎಂದು ಮಕ್ಕಳು ಆರೋಪಿಸಿದರು. ಈ ಪ್ರತಿಭಟನೆಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪಾಲ್ಗೊಳ್ಳುತ್ತಿದ್ದಂತೆಯೆ ಬಿಜೆಪಿಯ ಕೆಲ ಪ್ರಮುಖರು ಘಟನಾ ಸ್ಥಳಕ್ಕೆ ಧಾವಿಸಿದರು. ಕೆಲಕಾಲ ಸ್ಥಳದಲ್ಲಿ ಗೊಂದಲ ಉಂಟಾಗಿತ್ತು, ಬಳಿಕ ದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಪಠ್ಯ ಪರಿಷ್ಕರಣೆ ವಿರುದ್ಧ ಕಿಮ್ಮನೆ ಸಮರ :
ತೀರ್ಥಹಳ್ಳಿ : ರಾಜ್ಯದಲ್ಲಿ ಆರಂಭವಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿತ ವಿವಾದದ ಮುಂದುವರೆದ ಭಾಗವಾಗಿ ಇದೀಗ ಕಾಂಗ್ರೆಸ್ ನಿಂದ ಪಾದಯಾತ್ರೆಯ ಕೂಗು ಕೇಳಿ ಬಂದಿದೆ. ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ವಿಸರ್ಜನೆಯಾಗಿದೆ ಆದರೆ ಆ ಪಠ್ಯಗಳು ಹಾಗೆಯೇ ಉಳಿದಿದೆ ಇದು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಮಾರಕವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ. ಪಠ್ಯ ಪರಿಷ್ಕರಣೆಯಲ್ಲಿ ದೊಡ್ಡ ದೊಡ್ಡ ಪ್ರಮಾದಗಳೇ ಆಗಿದ್ದರೂ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಮ್ಮನ್ನು ತಾವೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರ ವಿದ್ಯಾರ್ಹತೆ ಏನು? ಬೋಧನಾ ಅನುಭವ ಏನೆಂದು ಪ್ರಶ್ನಿಸಿದರು. ಈ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದರು. ಪರಿಷ್ಕರಣೆ ಸಂಬಂಧ ಇದುವರೆಗೂ ಪಿಡಿಎಫ್ ಬಿಡುಗಡೆಯಾಗಿಲ್ಲ ಈ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಆಗಿರುವ ಅಧ್ವಾನ ಸರಿಪಡಿಸುವಂತೆ ಆಗ್ರಹಿಸಿ ಜೂ.15 ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸಲಾಗುತ್ತದೆ ಎಂದರು.
ಹಾಸನ :
ಜೂಜಾಟದಲ್ಲಿ ಭಾಗಿಯಾಗಿದ್ದ ಐವರು ಸೆರೆ :
ಅಕ್ರಮವಾಗಿ ಜೂಜಾಟದಲ್ಲಿ ಭಾಗಿಯಾಗಿದ್ದ ಐವರನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಸೆರೆಹಿಡಿದಿದ್ದಾರೆ, ಹಾಸನದ ಚನ್ನಂಗಿಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಜೂಜಾಟಕ್ಕೆ ಬಳಸಿಕೊಂಡಿದ್ದ 3400 ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಜಮೀನಿನಲ್ಲಿ ಐವರು ಸೇರಿಕೊಂಡು ಅಂದರ್ ಬಾಹರ್ ಜೂಜಾಟ ನಡೆಸುತ್ತಿದ್ದರು ಎನ್ನಲಾಗಿದೆ. ಘಟನಾ ಸಂಬಂಧ ಹಾಸನದ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



0 Comments