ಚಿಕ್ಕಮಗಳೂರು : 

ಕನ್ಹಯ್ಯ ಹತ್ಯೆ ಖಂಡಿಸಿ ಪ್ರತಿಭಟನೆ : 

ಚಿಕ್ಕಮಗಳೂರು : ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ದರ್ಜಿ ಕನ್ಹಯ್ಯನ ಹತ್ಯೆ ಮಾಡಿರುವ ಇಬ್ಬರು ಮುಸಲ್ಮಾನರ ಕೃತ್ಯವನ್ನು ಖಂಡಿಸಿ ಇಂದು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಚಿಕ್ಕಮಗಳೂರಿನ ಅಜಾದ್ ವೃತ್ತದಲ್ಲಿ ಇಂದು ಬೆಳಗ್ಗೆ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಈ ಕೃತ್ಯವನ್ನು ಖಂಡಿಸಿ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಜಾರಿಯಾಗುವಂತೆ ಆಗ್ರಹಿಸಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಆಗ್ರಹಿಸಿದರು. ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿ ದೇಶದ ಅಶಾಂತಿ ಮೂಡಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು, ದೇಶದಲ್ಲಿ ಹಿಂದೂಗಳು ಆತಂಕದಿಂದ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ, ಇಂತಹ ಪೈಶಾಚಿಕ ಕೃತ್ಯಗಳನ್ನು ಎಸಾಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್ ಗಾಗಿ ಇಂತಹ ಕೃತ್ಯಗಳನ್ನು ನಡೆಸುವವರಿಗೆ ಸಹಕಾರ ನೀಡುತ್ತಿದೆ ಎಂದು ಹರಿಹಾಯ್ದರು.



ಶೃಂಗೇರಿಯಲ್ಲಿ ನಡೆದ ಪ್ರತಿಭಟನೆ :

ರಾಜಸ್ಥಾನದಲ್ಲಿ ನಡೆದ ಘೋರ ಹತ್ಯೆಗೆ ಸಂಬಂಧಿಸಿದಂತೆ ಇಂದು ಶೃಂಗೇರಿಯ ಕಟ್ಟೆಬಾಗಿಲಿನಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ದಿವೀರ್ ಮಲ್ನಾಡ್ ಹಿಂದುತ್ವವನ್ನು ಒಪ್ಪದ ರೀತಿಯ ಮಾನಸಿಕತೆಯನ್ನು ಒಂದು ಸಮುದಾಯದ ಜನರಲ್ಲಿ ತುಂಬಿ ಬಹುತ್ವದ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲ ಸಮಾಜಘಾತುಕ ಶಕ್ತಿಗಳು ಮಾಡುತ್ತಿದೆ ಇದನ್ನು ನಾವು ಖಂಡಿಸುತ್ತೇವೆ, ಕೇವಲ ನೂಪುರ್ ಶರ್ಮಾಳ ಒಂದು ಪೋಸ್ಟ್ ನ್ನು ಶೇರ್ ಮಾಡಿದ್ದಕ್ಕಾಗಿ ನಡೆಸಿದ ಈ ಘೋರ ಕೃತ್ಯವನ್ನು ಎಂದಿಗೂ ಹಿಂದೂ ಸಮಾಜ ಸಹಿಸುವುದಿಲ್ಲ, ಈ ಪೈಶಾಚಿಕ ಕೃತ್ಯದ ಹಿಂದಿರುವ ಜಿಹಾದಿಗಳಿಗೆ ಶೀಘ್ರವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. 

ನಗರ ಸಭೆ ಅಧಿಕಾರಿಗಳ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ : 

ಚಿಕ್ಕಮಗಳೂರು : ಡಂಪಿಂಗ್ ಯಾರ್ಡ್ ನ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಪೌರಾಯುಕ್ತರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ಚಿಕ್ಕಮಗಳೂರು ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ, ಅನೇಕರು ಈಗಾಗಲೇ ಆಸ್ಪತ್ರೆ ಸೇರಿದ್ದರು ಕೂಡ ನಗರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ , ನಗರದ ಜನವಸತಿ ಪ್ರದೇಶದಲ್ಲಿ ತ್ಯಾಜ್ಯದ ವಿಂಗಡಣೆ ಮಾಡುವ ಡಂಪಿಂಗ್ ಯಾರ್ಡ್ ಮಾಡುತ್ತಿದ್ದಾರೆ ಇದು ಜನರ ಬದುಕಿಗೆ ಮಾರಕವಾಗಲಿದೆ ಎಂದು ಆರೋಪಿಸಿ ಜನರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಸ್ಥಳಕ್ಕಾಮಿಸಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಪೌರಾಯುಕ್ತ ಬಸವರಾಜು ಅವರಿಗೆ ಸ್ಥಳೀಯರು ಸಂತೇಮೈದಾನದ ಆವರಣದಲ್ಲಿ ತ್ಯಾಜ್ಯ ಡಂಪ್ ಮಾಡುವುದಕ್ಕೆ ವಿರೊಧ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಒಪ್ಪದ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಸಂತೇಮೈದಾನದ ಜಾಗ ನಗರಸಭೆಗೆ ಸೇರಿದ್ದಾಗಿದ್ದು, ನಗರದಲ್ಲಿ ಸಂಗ್ರಹಿಸಿದ ತ್ಯಾಜ್ಯ ವಿಂಗಡಣೆ ಮಾಡಲು, ಡಂಪ್ ಮಾಡಲು ಬೇರೆ ಜಾಗ ಇಲ್ಲದ ಕಾರಣಕ್ಕೆ ಸಂತೇಮೈದಾನದಲ್ಲಿರುವ ಖಾಲಿ ಜಾಗದಲ್ಲಿ ವಿಂಗಡಣೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯರು ಹಾಗೂ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರೊಂದಿಗೆ ಕೆಲಕಾಲ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.


ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾನ್ಸ್ಟೇಬಲ್ ಕುಟುಂಬಕ್ಕೆ 30 ಲಕ್ಷ ರೂ ವಿಮಾ ಮೊತ್ತ ವಿತರಣೆ : 

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಹೆಡ್ ಕಾನ್ಸ್ಟೇಬಲ್ ವಸಂತ್ ಕುಮಾರ್ ವೈ.ಆರ್ ಅವರು ಕರ್ತವ್ಯದ ನಿಮಿತ್ತ ಕಡೂರಿನಿಂದ ಸಿಂಗಟಗೆರೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಕ್ಯಾಂಟರ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಆಂಬುಲೆನ್ಸ್ ನ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ತೆರಳುವ ಸಂದರ್ಭದಲ್ಲಿ ಅವರು ಕೊನೆ ಯುಸಿರೆಳೆದಿದ್ದರು. ಕರ್ತವ್ಯ ನಿರತರಾಗಿದ್ದ ವೇಳೆಯಲ್ಲಿ ಮೃತಪಟ್ಟ ಹೆಡ್ ಕಾನ್ಸ್ಟೇಬಲ್ ವಸಂತ್ ಕುಮಾರ್ ಅವರ ತಾಯಿಗೆ ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಪೊಲೀಸ್ ವೇತನ ಪ್ಯಾಕೇಜ್ ಅಡಿಯಲ್ಲಿ ವಿಮಾ ಮೊತ್ತವಾದ 30 ಲಕ್ಷ ರೂಪಾಯಿ ಹಣವನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಧಿಕಾರಿಗಳು ವಿತರಿಸಿದರು. 


ಹಾಸನ :

ಮನೆ ಬೀಗ ಮುರಿದು ನಗದು ಹಾಗೂ ಚಿನ್ನಾಭರಣವನ್ನು ದೋಚಿದ ಕಳ್ಳರು 

ಹಾಸನ : ಮನೆಗೆ ಹಾಕಲಾಗಿದ್ದ ಬೀಗವನ್ನು ಮುರಿದು ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಹಾಸನದ ವಿಜಯನಗರ ಬಡಾವಣೆಯಲ್ಲಿ ಈ ಕೃತ್ಯ ನಡೆದಿದ್ದು, ಇಲ್ಲಿನ ಸಿಲ್ಕ್ ಬೋರ್ಡ್ ನಿವಾಸಿ ಗೋವಿಂದ ಸ್ವಾಮಿ ಎನ್ನುವವರು ಮನೆಗೆ ಬೀಗ ಹಾಕಿ ಪತ್ನಿಯೊಂದಿಗೆ ಸಾಮಗ್ರಿಗಳನ್ನು ಖರೀದಿಸುವ ಸಲುವಾಗಿ ತೆರಳಿದ್ದಾರೆ. ಈ ಸಮಯವನ್ನು ನೋಡಿಕೊಂಡು ಕಳ್ಳತನ ನಡೆದಿರುವ ಕಳ್ಳ ಮನೆಯ ಬೀರುವಿನಲ್ಲಿರಿಸಿದ್ದ ಚಿನ್ನಾಭರಣ ಹಾಗೂ 70 ಸಾವಿರ ರೂಪಾಯಿ ಹಣವನ್ನು ಎಗರಿಸಿದ್ದಾನೆ. ಮನೆಯವರು ಹೊರಗಡೆ ತೆರಳುವ ಸಲುವಾಗಿ ಮನೆಗೆ ಬೀಗ ಹಾಕಿ, ಕೀಯನ್ನು ಅಲ್ಲೇ ಸಮೀಪದಲ್ಲಿರಿಸಿ ತೆರಳಿದ್ದರು ಎನ್ನಲಾಗಿದ್ದು, ಇದನ್ನು ಗಮನಿಸಿದ ಖದೀಮ ಕಳ್ಳತನದಲ್ಲಿ ಭಾಗಿಯಾಗಿ ಮನೆಯಲ್ಲಿರಿಸಿದ್ದ ಚಿನ್ನಾಭರಣವನ್ನು ದೋಚಿದ್ದಾನೆ. ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಾಸನ ನಗರಠಾಣೆಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ತಾವು ಕಳೆದುಕೊಂಡ ನಗದು ಹಾಗೂ ಚಿನ್ನಾಭರಣವನ್ನು ಆದಷ್ಟು ಶೀಘ್ರವಾಗಿ ಪತ್ತೆ ಮಾಡಿ ಕೊಡುವಂತೆ ಕುಟುಂಬಸ್ಥರು ಕೋರಿದ್ದಾರೆ.


ಬಾಗಿಲು ಮುರಿದು ಮನೆಯೊಳಗೆ ನುಗ್ಗಲು ಯತ್ನಿಸಿದ ಕಾಡಾನೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದ ಮನೆಯೊಂದಕ್ಕೆ ಮಧ್ಯರಾತ್ರಿಯ ವೇಳೆಯಲ್ಲಿ ಮನೆಯ ಬಾಗಿಲನ್ನು ಮುರಿದು ಒಳನುಗ್ಗಲು ಆನೆ ಯತ್ನಿಸಿದೆ. ಬಾಗಿಲು ಮುರಿಯುವ ಶಬ್ದ ಕೇಳಿಸುತ್ತಿದ್ದಂತೆಯೆ ಎಚ್ಚೆತ್ತ ಮನೆ ಮಂದಿ ಜೋರಾಗಿ ಕೂಗಲಾರಂಭಿಸಿದ್ದಾರೆ, ಜನರ ಕೂಗಾಟಕ್ಕೆ ಆನೆಯು ಸ್ಥಳದಿಂದ ಕಾಲ್ಕಿತ್ತಿದೆ ಎನ್ನಲಾಗಿದೆ. ಈ ದಾಳಿಯಿಂದ ಆತಂಕಕ್ಕೀಡಾಗಿರುವ ಸ್ಥಳೀಯ ಗ್ರಾಮಸ್ಥರು ಬಹಳ ಹಿಂದಿನಿಂದಲೂ ಸರ್ಕಾರವು ಆನೆ ದಾಳಿಯನ್ನು ನಿಯಂತ್ರಿಸುವಲ್ಲಿ ಈ ಕುರಿತಾಗಿ ಸೂಕ್ತ ನಿರ್ಧಾರ ಮತ್ತು ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಇಲ್ಲಿನ ಜನರಿಗೆ ಜೀವಭಯ ಎದುರಾಗಿದೆ ಎಂದು ಜನರು ತಮಗಾಗುತ್ತಿರುವ ಸಮಸ್ಯೆಯ ಕುರಿತು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಒಂದೆಡೆ ಬೆಳೆದ ಬೆಳೆಗಳನ್ನು ಆನೆಗಳು ನಾಶಪಡಿಸುತ್ತಿದ್ದರೆ ಇನ್ನೊಂದೆಡೆ ಜನರು ಆನೆದಾಳಿಯಿಂದ ಜೀವ ಉಳಿಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕೆಂದು ಸ್ಥಳೀಯರು ಕೋರಿದ್ದಾರೆ.


ಕ್ಯಾಂಟರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ 

ಹಾಸನ : ಬೈಕ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಹೊರವಲಯವಾದ ಬೂವನಹಳ್ಳಿ ವೃತ್ತದಲ್ಲಿ ಬೈಕ್ ಹಾಗೂ ಕ್ಯಾಂಟರ್ ನಡುವೆ ಈ ಅಪಘಾತ ಸಂಭವಿಸಿದ್ದು ಅರಕಲಗೂಡು ತಾಲೂಕು ಬೋಳ ಕ್ಯಾತನಹಳ್ಳಿಯ ರಾಕೇಶ್ ಎಂಬ 22 ವರ್ಷದ ಯುವಕ ಮೃತ ದುರ್ದೈವಿ. ಯುವಕನು ಹಂಪ್ ನ್ನು ಹಾರಿಸಲೆಂದು ವಾಹನವನ್ನು ಸಂಪೂರ್ಣವಾಗಿ ನೊಧಾನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅತೀ ವೇಗದಿಂದ ಬಂದ ಕ್ಯಾಂಟರ್ ಚಾಲಕ ಹಿಂದಿನಿಂದ ಬೈಕ್ ಗೆ ಗುದ್ದಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಆರೋಪಿಯನ್ನು ಸ್ಥಳೀಯರೇ ಹಿಡಿದುಕೊಟ್ಟಿದ್ದಾರೆ. ಈ ಕುರಿತಾಗಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ್ನು ಕಳೆದುಕೊಂಡಿರುವ ಮನೆಯವರು ಹಾಗೂ ಸಂಬಂಧಿಕರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.


ಕೊಡಗು : 

ಚಿಪ್ಪು ಹಂದಿಯ ಚಿಪ್ಪನ್ನು ಮಾರಾಟ ನಡೆಸಲು ಯತ್ನಿಸಿದ ಇಬ್ಬರು ಸಿಐಡಿ ಪೊಲೀಸರ ಬಲೆಗೆ 

ಅಕ್ರಮವಾಗಿ ಚಿಪ್ಪು ಹಂದಿಯ ಚಿಪ್ಪನ್ನು ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ. ಕೊಡಗಿನ ತಾಳತ್ ಮನೆ ಜಂಕ್ಷನ್ ಬಳಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿರುವ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.ಬಂಧಿತರನ್ನು ಇಮ್ತಿಯಾಜ್ ಹಾಗೂ ಬಿ.ಮನೋಜ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ಚಿಪ್ಪು ಹಂದಿಯ ಚಿಪ್ಪನ್ನು ಮಾರಾಟ ನಡೆಸಲು ತಯಾರಾಗಿದ್ದರು ಎನ್ನಲಾಗಿದೆ. ಬಂಧಿತರಿಂದ 17.50 ಕೆಜಿ ತೂಕದ ಮುಳ್ಳು ಹಂದಿ ಚಿಪ್ಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 


ಮನೆಕಳ್ಳತನ ನಡೆಸಿದ್ದ ಅಸ್ಸಾಂ ಮೂಲದ ಇಬ್ಬರು ಪೊಲೀಸರ ಬಲೆಗೆ 

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೊಸ್ಕೇರಿ ಗ್ರಾಮದ ಸುಬ್ಬಯ್ಯ ಅವರ ಮನೆಯಲ್ಲಿ ಜೂನ್​ 12 ರಂದು ಬೀರುವಿನಲ್ಲಿದ್ದ 9 ರಿಂದ 10 ಲಕ್ಷ ಮೌಲ್ಯದ ಆಭರಣಗಳು ಕಳ್ಳತನವಾಗಿದ್ದವು.ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದರು. ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ಕಳ್ಳತನ ಮಾಡಿದ ಅಸ್ಸಾಂ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರಿಗಾಗಿ ಶೋಧ ಮುಂದುವರೆಸಿದ್ದಾರೆ. ಕುರ್ಬನ್ ಆಲಿ ಮತ್ತು ಮಹಿರುದ್ದೀನ್ ಆಲಿ ಬಂಧಿತ ಆರೋಪಿಗಳು. ಬಂಧಿತರಿಂದ 11,70,000 ರೂಪಾಯಿ ಮೌಲ್ಯದ 247.1 ಗ್ರಾಂ ಚಿನ್ನಾಭರಣ ಹಾಗೂ ಪೀಚೆಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳು ಎಸಗಿರುವ ಇನ್ನಷ್ಟು ಕೃತ್ಯಗಳ ಕುರಿತು ಸಂಪೂರ್ಣ ತನಿಖೆಯ ನಂತರ ಮಾಹಿತಿ ಹೊರಬೀಳಲಿದೆ. ಕೊಡಗಿನಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಏರಿಕೆಯಾಗುತ್ತಿದ್ದು. ಈ ಪ್ರಕರಣಗಳಲ್ಲಿ ಅಸ್ಸಾಂ ಮೂಲದವರೇ ಹೆಚ್ಚಾಗಿ ಸಿಕ್ಕಿಬೀಳುತ್ತಿದ್ದಾರೆ. ಈ ವಲಸೆ ಕಾರ್ಮಿಕರನ್ನು ತೋಟದ ಕೃಷಿ ಕೆಲಸಕ್ಕಾಗಿ ಕರೆಸಲಾಗುತ್ತದೆ, ಕಡಿಮೆ ಸಂಬಳಕ್ಕೆ ಕೆಲಸವನ್ನರಸಿ ಬರುವ ಅವರು ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿ ಯಾರದೇ ಭಯವಿಲ್ಲದೆ ನಿರಾತಂಕವಾಗಿ ಕಳ್ಳತನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ರೀತಿಯ ಪ್ರಕರಣಗಳು ಇನ್ನಷ್ಟು ಗಂಭೀರವಾಗುವ ಮೊದಲು ಕೆಲಸಕ್ಕೆಂದು ಕರೆಯಿಸಿಕೊಳ್ಳುವ ತೋಟದ ಮಾಲೀಕರು ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಕೋರಿದ್ದಾರೆ.

ಶಿವಮೊಗ್ಗ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ನಡೆಸಿದ್ದ ಆರೋಪಿಗಳು ಸೆರೆ : 

ಶಿವಮೊಗ್ಗ : ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿದ್ದು ಮೂವರು ಕಳ್ಳರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಶಿಕಾರಿಪುರ ತಾಲೂಕಿನ ಅಂಜನಾಪುರದ ಸಮೀರ್, ಶಿವಮೊಗ್ಗದ ಶಾಂತಿನಗರದ ಸೊಹೇಲ್, ಟ್ಯಾಂಕ್ ಮೊಹಲ್ಲಾದ ಜುನೈದ್ ಖಾನ್ ಎಂದು ಗುರುತಿಸಲಾಗಿದೆ. ಈ ಮೂವರು ಆರೋಪಿಗಳು ಸಾಗರ, ಭದ್ರಾವತಿ, ದಾವಣಗೆರೆ, ಹರಿಹರ, ಹಾಸನ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ನಡೆಸಿದ್ದರು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.