ಹಾಸನ : (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕೀಳಲು ಯತ್ನಿಸಿದ ಕಳ್ಳನಿಗೆ ಮಹಿಳೆ ಪ್ರತಿರೋಧವಹಿಸಿದ ಕಾರಣಕ್ಕೆ ಮಹಿಳೆಯನ್ನು ಡಕಾಯಿತ ಕೆರೆಯಲ್ಲಿ ಮುಳುಗಿಸಿ ಜೀವ ತೆಗೆದಿರುವ ಘಟನೆ ಹಾಸನ ನಗರದ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ : ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಕಾನ್ಸ್ಟೇಬಲ್

ನೀಲಾ ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದ ಮಗನಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಪ್ರತಿಷ್ಠಿತ ವಿದ್ಯಾಲಯಕ್ಕೆ ಸೇರಿಸಿದ್ದರು. ಮೂರು ದಿನ ಗಾರ್ಮೆಂಟ್ಸ್‌ ಗೆ ರಜೆ ಹಾಕಿ ಮಗನನ್ನು ನೋಡುವ ಸಲುವಾಗಿ ತಾಯಿ ನೀಲಾ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕಾಗಿ ಮಗನಿಗೆ ಬೇಕಿದ್ದ ಕೆಲ ವಸ್ತುಗಳು, ತಿಂಡಿ ತಿನಿಸುಗಳನ್ನು ಖರೀದಿಸಲು ತನ್ನ ಗಂಡನ ಜೊತೆಗೆ ಬೈಕ್ನಲ್ಲಿ ಗುರುವಾರ ಬೆಳಗ್ಗೆ ಹಾಸನ ನಗರಕ್ಕೆ ಬಂದಿದ್ದ ನೀಲಾ ಬೆಡ್‌ ಶೀಟ್ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಮನೆಗೆ ವಾಪಸ್ ಹೊರಟಿದ್ದರು. ಈ ವೇಳೆ ಪತಿ ಬೈಕ್‌ ನಲ್ಲಿ ಮನೆಗೆ ಬಿಡುತ್ತೇನೆ ಎಂದಿದ್ದು, ಬಸ್‌ ನಲ್ಲಿಯೇ ತೆರಳುತ್ತೇನೆ ಎಂದು ಬಸ್ ಏರಿ ಗವೇನಹಳ್ಳಿ ಬಳಿ ಬಂದು ಇಳಿದಿದ್ದಾರೆ.

ನಡೆದುಕೊಂಡು ತೆರಳುವಾಗ ಸರ ಕದಿಯಲು ಬಂದ ಕಳ್ಳ :

ಮೃತ ಮಹಿಳೆ ನೀಲಾ ಮನೆಗೆ ಹೋಗಲು ಕೆರೆಯ ಪಕ್ಕದಲ್ಲಿದ್ದ ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ದಿಢೀರ್ ಎದುರಾದ ಕಂದಲಿಯ ಭರತ್ ಎಂಬ ಖದೀಮ, ನೀಲಾ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ ಕದಿಯಲು ವಿಫಲಯತ್ನ ನಡೆಸಿದ್ದಾನೆ. ಅರ್ಧ ಸರ ಕಳ್ಳನ ಕೈ ಸೇರಿದ್ದರೆ ಉಳಿದ ಅರ್ಧ ಸರವು ಮಹಿಳೆ ಬಳಿಯಲ್ಲಿಯೇ ಉಳಿದಿದೆ. ಇಡೀ ಚಿನ್ನದ ಸರ ಕೀಳಲು ಅವಕಾಶ ನೀಡದೇ ಇದ್ದಾಗ ಕೋಪಗೊಂಡ ಕಳ್ಳ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡ ಪರಿಣಾಮ ಮಿಶ್ರಿತ ಕೆರೆಯ ನೀರಲ್ಲಿ ಮುಳುಗಿಸಿ ಆಕೆಯನ್ನು ಕಳ್ಳ ಕೊಲೆ ಮಾಡಿದ್ದಾನೆ.

ಕೊಲೆ ನಡೆದ ಸ್ವಲ್ಪ ದೂರದ ಪ್ರದೇಶದಲ್ಲೇ ಹೊರ ರಾಜ್ಯದ ಕೆಲ ಯುವಕರು ಕೆಲಸ‌ ಮಾಡುತ್ತಿದ್ದು ಮಹಿಳೆ ಜೋರಾಗಿ ಕಿರುಚಿದ್ದನ್ನು ಕೇಳಿಸಿಕೊಂಡು ಓಡಿ ಬಂದಿದ್ದಾರೆ. ಅಷ್ಟರಲ್ಲಿ ನೀಲಾ ಅವರ ಕೊಲೆ ನಡೆದಿತ್ತು. ಸುತ್ತ ನೋಡಿದಾಗ ಕೊಲೆಗಾರ ಭರತ್ ಪರಾರಿಯಾಗಲು ಪ್ರಯತ್ನಿಸಿದ್ದಾನೆ. 

ಕಳ್ಳನನ್ನು ಬೆನ್ನಟ್ಟಿದ ಯುವಕರು ಗ್ರಾಮಕ್ಕೆ ಕರೆ ತಂದಿದ್ದಾರೆ, ಕೊಲೆ ಮಾಡಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೊಲೆಗಾರನಿಗೆ ಹಿಗ್ಗಾಮುಗ್ಗಾ ಗೂಸ ಕೊಟ್ಟು ಪೊಲೀಸರಿಗೊಪ್ಪಿಸಿದ್ದಾರೆ. ಸುದ್ದಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ, ಡಿವೈ‌ಎಸ್‌ಪಿ ಉದಯ್‌ ಭಾಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. ಒಂದೆಡೆ ತಾನು ಹೆತ್ತ ಮಗನನ್ನು ಕಾಣಲು ಬಹಳಷ್ಟು ಆಸೆಯಿಂದ ಹೊರಟಿದ್ದ ತಾಯಿ ದಾರುಣವಾಗಿ ಅಂತ್ಯ ಕಂಡಿದ್ದರೆ, ಇನ್ನೊಂದೆಡೆ ಮಗನು ತಾಯಿಯನ್ನೇ ನೋಡಲು ಬೇಸರದಿಂದ ಊರಿಗೆ ಬರುವಂತಾಗಿದೆ.