ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಯುವಕನೋರ್ವ ಅತ್ಯಾಚಾರ ಎಸಗಿ ವಿದೇಶಕ್ಕೆ ಎಸ್ಕೇಪ್ ಆಗಿ ಪ್ರಸ್ತುತ ಅತ್ಯಾಚಾರಕ್ಕೊಳಗಾದ ಬಾಲಕಿಗೆ ಜೀವ ಬೆದರಿಕೆ ಹಾಕಿರುವ ಆರೋಪವೊಂದು ಶಿವಮೊಗ್ಗದಲ್ಲಿ ಕೇಳಿ ಬಂದಿದೆ. 

ಇದನ್ನೂ ಓದಿ : ಸ್ಕೂಟಿಯೊಳಗೆ ಪತ್ತೆಯಾದ ಹಾವು

ಶಿವಮೊಗ್ಗದ ಹೊಳೆಹೊನ್ನೂರು ಸದಾಶಿವಪುರದ ಹಕ್ಕಿ ಪಿಕ್ಕಿ ಕ್ಯಾಂಪ್ ನಲ್ಲಿ ಈ ದುರ್ಘಟನೆ ನಡೆದಿದ್ದು ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಬಾಲಕಿ ಶಿವಮೊಗ್ಗದ ಹೊಳೆಹೊನ್ನೂರು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಯುವಕ ಅತ್ಯಾಚಾರ ಎಸಗಿ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ ಹಾಗೂ ಈ ಕುರಿತಾಗಿ ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಬಾಲಕಿ ಗಂಭೀರ ಆರೋಪ ಮಾಡಿದ್ದಾಳೆ. 

ತನ್ನ ಅಜ್ಜಿಯೊಂದಿಗೆ ವಾಸವಿರುವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಯುವಕನು ವಿದೇಶಕ್ಕೆ ತೆರಳಿ ಯುವತಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ ಹಾಗೂ ಆತನ  ಕಡೆಯವರಿಂದ ಹಲ್ಲೆ ನಡೆಸಿದ್ದಾನೆಂದು ಯುವತಿಯು ಆರೋಪಿಸಿದ್ದು ಈ ಕುರಿತಾಗಿ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗದ ಎಸ್ಪಿ ಕಛೇರಿಗೆ ತೆರಳಿ ದೂರು ಸಲ್ಲಿಸಿದ್ದಾಳೆ. 

ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ತಮಗೆ ನ್ಯಾಯ ಒದಗಿಸಬೇಕೆಂದು ಆಕೆಯ ಅಜ್ಜಿ ಕೋರಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಯು ಸಂಪೂರ್ಣ ತನಿಖೆಯ ನಂತರವಷ್ಟೇ ಲಭ್ಯವಾಗಬೇಕಿದೆ.