ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ ಮುಖಂಡ ಶಬರೀಶ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಶೃಂಗೇರಿ ಗಾಂಧಿ ಮೈದಾನ ಟೆಂಡರ್ ಪಡೆಯುವಲ್ಲಿ ಜೀವರಾಜ್ ತನಗೆ ಸಹಾಯ ಮಾಡಿದ್ದರು ಎಂದು ಹಾಕಿದ್ದಾರೆ ಎಂಬುದರ ಕುರಿತಾಗಿ ಕೆಲ ದಿನಗಳ ಹಿಂದೆ ಪತ್ರಿಕಾ ಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ, ಪಟ್ಟಣ ಪಂಚಾಯತ್ ಅಧ್ಯಕ್ಷ ಹರೀಶ್ ವಿ ಶೆಟ್ಟಿ ಅವರು ಗಬ್ಬಾನೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುವಂತೆ ಪಂಥಾಹ್ವಾನಕ್ಕೆ ಕರೆದಿದ್ದರು, ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ದಾರರಾದ ಶಬರೀಶ್ ಇಂದು ಪತ್ರಿಕಾ ಹೇಳಿಕೆ ನೀಡಿದ್ದು.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಶೃಂಗೇರಿ ಕಡೆಗೆ ಬರುತ್ತಿದ್ದ ಬಸ್
ಗಬ್ಬಾನೆ ದೇವಸ್ಥಾನಕ್ಕೆ ಬಂದು ಆಣೆ ಮಾಡುವಂತೆ ನೀವು ಪಂಥಾಹ್ವಾನ ನೀಡಿದ್ದೀರಿ, ಆದರೆ ದೇವಸ್ಥಾನ ಮಠ-ಮಂದಿರಗಳು ಸರ್ವಾಂತರ್ಯಾಮಿ, ದೇವರನ್ನು ಭಕ್ತಿಯಿಂದ ಪೂಜಿಸುವ ಶ್ರದ್ಧಾ ಕೇಂದ್ರವೆಂದು ನಾನು ನಂಬಿಕೊಂಡು ಬಂದಿದ್ದು ನಿಮ್ಮ ರೀತಿಯಲ್ಲಿ ಹಗೆ ಸಾಧಿಸಲು ಅಥವಾ ಆಣೆ ಪ್ರಮಾಣ, ಮಾಟ ಮಂತ್ರ ಇದನ್ನೆಲ್ಲಾ ಮಾಡಲು ಅಲ್ಲ. ಅಷ್ಟಕ್ಕೂ ನನ್ನನ್ನು ಕರೆದು ಆಣೆ ಪ್ರಮಾಣ ಮಾಡಲು ಕರೆಯಲು ನೀವ್ಯಾರು ಎಂದು ಪ್ರಶ್ನಿಸಿದ್ದಾರೆ.
ಕಾನೂನುಬದ್ಧನಾಗಿದ್ದ ನನಗೆ ಜೀವರಾಜ್ ಸಹಾಯ ಮಾಡಿದ್ದಾರೆಂದು ನಾನು ನಂಬಿಕೊಂಡಿದ್ದರೆ ನಿಮಗೇಕೆ ಅಷ್ಟೊಂದು ಆಕ್ರೋಶ, ಅಷ್ಟಕ್ಕೂ ನಾನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ವಿಷಯ ಸುಳ್ಳಾಗಿದ್ದಾರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಕಿದ್ದ ವ್ಯಕ್ತಿ ಜೀವರಾಜ್ ಅವರೇ ಹೊರತು ನೀವಲ್ಲ, ಯಾರಿಗೋ ಏನೋ ಹೇಳಿದರೆ ಮುಟ್ಟಿನೋಡಿಕೊಳ್ಳುವ ಪರಿಸ್ಥಿತಿ ನಿಮಗೇಕೆ ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ತಾನು ತನ್ನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಿರುವಷ್ಟು ಅಭಿವೃದ್ಧಿ ಕೆಲಸ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ನಿಮ್ಮ ವ್ಯಾಪ್ತಿಯಲ್ಲಿ ಆಗಿಲ್ಲ. ಹಾಗಾಗಿ ನೀವು ವಿಫಲ ಅಧ್ಯಕ್ಷರು
ಏನಿದು ಟೆಂಡರ್ ಗೊಂದಲ :
ಕಳೆದ ಕೆಲ ತಿಂಗಳ ಹಿಂದೆ ಶೃಂಗೇರಿಯ ಗಾಂಧೀ ಮೈದಾನದ ವಾಹನ ನಿಲುಗಡೆಯ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಟೆಂಡರ್ ದಾರರು ಮುಂಗಡ ಹಣ ಪಾವತಿಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲಗಳು ನಿರ್ಮಾಣವಾಗಿತ್ತು. ಈ ವಿಷಯ ಜಿಲ್ಲಾಧಿಕಾರಿಗಳ ವರೆಗೂ ತಲುಪಿತ್ತು ಈ ಬಳಿಕದಲ್ಲಿ ಟೆಂಡರ್ ನ್ನು ಶಬರೀಶ್ ಎಂಬುವವರಿಗೆ ನೀಡಬೇಕೆಂದು ಆದೇಶಿಸಲಾಗಿತ್ತು, ಈ ಸಂಬಂಧ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶಬರೀಷ್ ಮಾಜಿ ಶಾಸಕ ಡಿ. ಎನ್ ಜೀವರಾಜ್ ಅವರು ತಮಗೆ ಟೆಂಡರ್ ದೊರೆಯಲು ಸಹಕಾರ ನೀಡಿದ್ದರೆಂದು ಬರೆದು ಹಾಕಿಕೊಂಡಿದ್ದರು.
ಈ ಕುರಿತು ಅಂದು ಪ್ರತಿಕ್ರಿಯಿಸಿದ್ದ ಪಟ್ಟಣ ಪಂಚಾಯತ್ ಅಧ್ಯಕ್ಷ ಹರೀಶ್ ವಿ ಶೆಟ್ಟಿ ಟೆಂಡರ್ ಪ್ರಕ್ರಿಯೆಗೆ ಮಾಜಿ ಶಾಸಕ ಡಿ.ಎನ್ ಜೀವರಾಜ್ ಅವರು ಜಿಲ್ಲಾಧಿಕಾರಿಗಳ ಬಳಿಯಲ್ಲಿ ಮಾತನಾಡಿ ಟೆಂಡರ್ ನ್ನು ದೊರಕಿಸಿ ಕೊಟ್ಟಿದ್ದಾರೆಂದು ಶಬರೀಶ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ, ಮಾಜಿ ಶಾಸಕರು ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಪಾರ್ಕಿಂಗ್ ಟೆಂಡರ್ ನ್ನು ವಹಿಸಿಕೊಟ್ಟಿದ್ದಾರೆ ಎಂದು ಶಬರೀಷ್ ಗಬ್ಬಾನೆ ದೇವರ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ ಎಂದು ಪಂಥಾಹ್ವಾನ ನೀಡಿದ್ದರು ಹಾಗೂ ಒಂದು ವೇಳೆ ಮಾಜಿ ಶಾಸಕರೇ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಶಬರೀಶ್ ಪರ ವಕಾಲತ್ತು ವಹಿಸಿದ್ದು ನಿಜವಾದಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದರು.
ಅಧ್ಯಕ್ಷರ ಮನೆಯಂಗಳದಿಂದಲೇ ಭ್ರಷ್ಟಾಚಾರ ; ಸಾಲು ಸಾಲು ಆರೋಪ :
ಇನ್ನು ಮೇಲಿನ ಪತ್ರಿಕಾ ಹೇಳಿಕೆಯ ಜೊತೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಶೃಂಗೇರಿಯ ಮಾನುಗಾರಿನ ಕೊಳಚೆ ನೀರು ಕಾಲುವೆ ಕೆಲಸದಲ್ಲಿ ಹೆಚ್ಚಿನ ಬಿಲ್ ಮಾಡಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕಲಾಗಿದೆ ಎಂದು ಶಬರೀಷ್ ಗಂಭೀರ ಆರೋಪ ಮಾಡಿದ್ದಾರೆ. ಇದಲ್ಲದೇ ಪಟ್ಟಣದ ಜನತೆಗೆ ನೀರು ಸರಬರಾಜು ಮಾಡುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ, ಹೊಸ ಮೋಟಾರ್ ಖರೀದಿ ಮಾಡುವ ಬದಲು ಎರಡರಷ್ಟು ಹಣವನ್ನು ಬಾಡಿಗೆ ಮೋಟಾರ್ ಗೆ ನೀಡಿದ್ದಾರೆ . ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರು ಸಹ ಪಟ್ಟಣದ ನಿವೇಶನ ರಹಿತರಿಗೆ ನಿವೇಶನ ನೀಡುವ ಆಶ್ವಾಸನೆ ನೀಡಿ ಒಂದು ಸಣ್ಣ ನಿವೇಶನ ನೀಡುವಲ್ಲೂ ವಿಫಲರಾಗಿರುವುದು ಜನರಿಗೆ ಮಾಡಿರುವ ವಿಶ್ವಾಸದ್ರೋಹ. ಇದಲ್ಲದೇ ತಮ್ಮ ಸ್ವಾರ್ಥಕ್ಕಾಗಿ ಒಂದಿಷ್ಟು ಯುವಕರನ್ನು ತನ್ನ ವಿರುದ್ಧ ಎತ್ತಿಕಟ್ಟಿ ಶೃಂಗೇರಿಯ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿರುವವರು ನೀವಲ್ಲವೇ ಎಂದು ಪ್ರಶ್ನಿಸಿದ್ದಾರೆ.






0 Comments