ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗ : ಯುವತಿಯ ಜಾತಕ ಸರಿಯಿಲ್ಲವೆಂದು ಯುವಕನ ಮನೆಯವರು ಮದುವೆಗೆ ಒಪ್ಪದ ಕಾರಣ ಮಹಿಳಾ ಕಾನ್ಸ್ಟೇಬಲ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಕಲ್ಲಾಪುರದ ಸುಧಾ ಎಂಬುವವರು ಮೃತ ದುರ್ದೈವಿ.
ಇದನ್ನೂ ಓದಿ : ಎಸಿಬಿ ಬಲೆಗೆ ಬಿದ್ದ ಕಡೂರಿನ ಕುಬೇರನ ಪುತ್ರನ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್
ಬೆಳಗಾವಿ ಮೂಲದ ಅರಣ್ಯ ಇಲಾಖೆ ನೌಕರ ಪ್ರವೀಣ್ ಹಾಗೂ ಸುಧಾ ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ, ಜಾತಿ ಬೇರೆಯಾಗಿದ್ದರೂ ಇವರ ಪ್ರೀತಿಗೆ ಯಾವುದೇ ಅಡ್ಡಿಯಾಗಿರಲಿಲ್ಲ. ಆದರೆ, ಪ್ರವೀಣ್ ಅವರ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಗೆ ತೋರಿಸಿದಾಗ ಯುವತಿಗೆ ಕುಜದೋಷವಿದ್ದು, ಆಕೆಯೊಂದಿಗೆ ಮದುವೆ ಮಾಡಿದರೆ ಮಗನ ಆಯಸ್ಸು ಕಡಿಮೆಯಾಗಲಿದೆ, ಆತ ಸಾಯುತ್ತಾನೆ ಎಂದು ತಿಳಿಸಿದ್ದಾರೆ. ಈ ಜ್ಯೋತಿಷ್ಯದಿಂದಾಗಿ ಪ್ರವೀಣ್ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಪ್ರವೀಣ್ ಕೂಡ ನಿಧಾನವಾಗಿ ದೂರವಾಗ ತೊಡಗಿದ್ದ.
ಇದರಿಂದಾಗಿ ಮನನೊಂದ ಸುಧಾ ಮೇ 31ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಕಾನ್ಸ್ಟೇಬಲ್ ಸುಧಾ ಸಾವನ್ನಪ್ಪಿದ್ದಾರೆ.
ತಾಯಿಯ ಮಾತು ಮೀರಿ ಒಂದಾಗಿ ಬದುಕಲು ಸಾಧ್ಯವಿಲ್ಲ ಒಟ್ಟಿಗೆ ಸಾಯೋಣ ಎಂದು ಪ್ರಿಯಕರ ಹೇಳಿ ಮೊದಲಿಗೆ ಪ್ರಿಯತಮೆಗೆ ವಿಷ ಕುಡಿಸಿದ್ದಾನೆ ಬಳಿಕ ಆತನೂ ಕುಡಿದಿದ್ದಾನೆ ಈ ವಿಷಯ ತಿಳಿಯುತ್ತಿದ್ದಂತೆಯೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ, ಜೂನ್ 13 ರಂದು ಹೇಳಿಕೆ ನೀಡಿದ್ದ ಸುಧಾ ಪ್ರವೀಣ್ ವಿಷ ಸೇವನೆ ಮಾಡಿದ್ದು ತನಗೆ ಕಾಣಿಸಲಿಲ್ಲ ಎಂದಿದ್ದಾರೆ. ಘಟನಾ ಸಂಬಂಧ ಭದ್ರಾವತಿ ಹಳೆನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.




0 Comments