ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಹಾಗೂ ಕಾರಿನ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.


ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಗಡಿಭಾಗವಾದ ಗಡಿಕಲ್ ಸಮೀಪದ ಅಗಳಗಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗಾರುಕೊಡಿಗೆ ಸಮೀಪ ಬೈಕ್ ಹಾಗೂ ಕಾರಿನ ನಡುವೆ ರಸ್ತೆ ಅಪಘಾತ ಸಂಭವಿಸಿದೆ. ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು ಶೃಂಗೇರಿಯಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ ತೆರಳುವ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. 

ಅಪಘಾತದ ತೀವ್ರತೆಗೆ ಬೈಕಿನಲ್ಲಿದ್ದ ಮಹಿಳೆಗೆ ಗಂಭೀರವಾಗಿ ಗಾಯಗಳಾಗಿದೆ. ಕೂಡಲೇ ಅವರನ್ನು ಶೃಂಗೇರಿಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಬೈಕ್ ಕಳಸ ಮೂಲದ ಪ್ರಶಾಂತ್ ಎಂಬುವವರಿಗೆ ಸೇರಿದ್ದಾಗಿದ್ದು ಪತ್ನಿಗೆ ಗಂಭೀರ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಯಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.