ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮುಂಗಾರು ಮಳೆ ಆರಂಭದ ಮೊದಲೇ ಚಿಕ್ಕಮಗಳೂರಿನ ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು ಈ ಬಾರಿಯ ಮಳೆಗಾಲದಲ್ಲಿ ಅನೇಕ ಅಪಾಯಗಳು ಎದುರಾಗುವ ಸಾಧ್ಯತೆಗಳಿವೆ.
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಭಾಗದಲ್ಲಿ ಸಂಭವಿಸಿದ ಮಳೆಗೆ ದತ್ತಪೀಠದ ರಸ್ತೆಮಾರ್ಗ ಕುಸಿತಗೊಂಡಿದೆ. ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯು, ಈ ಮಾರ್ಗದಲ್ಲಿ ಓಡಾಡುವ ಪ್ರವಾಸಿಗರನ್ನು ಹಾಗೂ ದಾರಿಹೋಕರನ್ನು ಆತಂಕಕ್ಕೀಡುಮಾಡಿದೆ. ಇನ್ನೂ ಆರಂಭದ ಮಳೆಯಲ್ಲಿ ಈ ರೀತಿಯ ತೊಂದರೆಗಳುಂಟಾದರೆ ಮುಂದೆ ಸಂಭವಿಸುವ ಮಳೆಗೆ ಈ ರಸ್ತೆಯ ಪರಿಸ್ಥಿತಿ ಏನು ಎಂಬಂತಾಗಿದೆ.
ಇದನ್ನೂ ಓದಿ : ಶೃಂಗೇರಿ: ಸ್ಕೂಲ್ ಟ್ರಿಪ್ ವಾಹನಕ್ಕೆ ಗುದ್ದಿದ ಇನೋವಾ ಕಾರು; ಅದೃಷ್ಟವಶಾತ್ ಮಕ್ಕಳು ಪಾರು
ಚಿಕ್ಕಮಗಳೂರಿನ ದತ್ತಪೀಠದ ರಸ್ತೆ ಅರ್ಧ ಭಾಗಕ್ಕೆ ಕುಸಿತಗೊಂಡಿದೆ, ಈ ರಸ್ತೆಯ 40-50 ಅಡಿ ಆಳದ ಮಣ್ಣು ಕುಸಿತಗೊಂಡ ಪರಿಣಾಮ ರಸ್ತೆ ದುರಸ್ಥಿ ಹಾಗೂ ವಾಹನ ಸಂಚಾರ ಎರಡಕ್ಕೂ ಕ್ಲಿಷ್ಟಕರವಾದ ಸನ್ನಿವೇಶ ಎದುರಾಗಿದೆ. ದತ್ತಾತ್ರೇಯ ಪೀಠಕ್ಕೆ ತೆರಳಲು ಇರುವ ಒಂದೇ ಮುಖ್ಯ ಮಾರ್ಗವಾದ ಈ ದಾರಿಯು ಕುಸಿದಿರುವುದು ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.
ದೇಶದ ವಿವಿಧ ಭಾಗಗಳಿಂದ ಹಾಗೂ ರಾಜ್ಯದ ಅನೇಕ ಕಡೆಗಳಿಂದ ಪ್ರವಾಸಿಗರು ಚಿಕ್ಕಮಗಳೂರಿನ ದತ್ತಾತ್ರೇಯ ಪೀಠಕ್ಕೆ ಭೇಟಿ ನೀಡುತ್ತಾರೆ, ಈ ಮಾರ್ಗದಲ್ಲಿ ಸಂಚಾರ ಮಾಡುವ ಯಾವುದೇ ಅನುಭವಗಳನ್ನು ಪ್ರವಾಸಿಗರು ಹೊಂದಿರದ ಕಾರಣ ಸ್ವಲ್ಪ ಮೈಮರೆತರು ಬಹುದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ಈ ರಸ್ತೆ ಕುಸಿತದಿಂದಾಗಿ ದತ್ತಾತ್ರೇಯ ಪೀಠಕ್ಕೆ ಭೇಟಿನೀಡುವುದು ಕಷ್ಟ ಸಾಧ್ಯವಾಗುತ್ತದೆ.
ಅತೀ ಶೀಘ್ರವಾಗಿ ಈ ಸಂಬಂಧ ದುರಸ್ಥಿ ಕಾರ್ಯಗಳು ಅರಂಭವಾದಲ್ಲಿ ಉಂಟಾಗಬಹುದಾದ ದೊಡ್ಡ ಮಟ್ಟದ ಅಪಾಯಗಳು ನಿಯಂತ್ರಣಕ್ಕಾದರೂ ಬರಬಹುದು ಇಲ್ಲವಾದಲ್ಲಿ, ಆ ಪ್ರದೇಶದ ಸುತ್ತಮುತ್ತ ವಾಸಿಸುವ ಜನರಿಗೆ ಓಡಾಡುವ ವಾಹನ ಸವಾರರಿಗಂತೂ ಅಪಾಯ ಕಟ್ಟಿಟ್ಟಬುತ್ತಿ.
ಭಾರೀ ಮಳೆಯಾಗುವ ಮುನ್ಸೂಚನೆ ನಿಟ್ಟಿನಲ್ಲಿ ಹೈ ಅಲರ್ಟ್ ಘೋಷಿಸಿದ ಚಿಕ್ಕಮಗಳೂರು ಜಿಲ್ಲಾಡಳಿತ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನದಾಗಿ ಮುಂಗಾರು ಮಳೆ ಆಗುವ ಮುನ್ಸೂಚನೆ ಇರುವುದರಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಈ ಬಾರಿ ಮಲೆನಾಡಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ.
ಮಳೆಗಾಲದ ಸಂದರ್ಭದಲ್ಲಿ ಅಬ್ಬರದ ಮಳೆಯಾಗುವ ಹಾಗೂ ಹೆಚ್ಚು ಹಾನಿಗೀಡಾಗುವ ಮಲೆನಾಡು ಹಾಗೂ ಅರೆಮಲೆನಾಡು ಭಾಗದಲ್ಲಿ ಈ ಬಾರಿ ಯಾವುದೇ ದೊಡ್ಡ ಮಟ್ಟದ ತೊಂದರೆಗಳು ಉಂಟಾಗದಂತೆ, ಸುರಕ್ಷತಾ ಕ್ರಮಗಳನ್ನು ಹಾಗೂ ಅಗತ್ಯ ಮುಂಜಾಗ್ರತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ.
ಈ ಬಾರಿಯ ಮುಂಗಾರು ಮಳೆಯನ್ನು ಎದುರಿಸಲು 83 ಟ್ರ್ಯಾಕ್ಟರ್, 155 ಟಿಪ್ಪರ್, 65 ಹಿಟಾಚಿ, 64 ಜೆಸಿಬಿ ಗಳನ್ನು ತುರ್ತು ಕಾರ್ಯಾಚರಣೆಗಾಗಿ ಜಿಲ್ಲಾಡಳಿತ ಸಜ್ಜು ಮಾಡಿಕೊಂಡಿದೆ. ಇದಲ್ಲದೇ 77 ಅಪಾಯದಲ್ಲಿರುವ ಗ್ರಾಮಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಚಿಕ್ಕಮಗಳೂರಿನಲ್ಲಿ 05, ಮೂಡಿಗೆರೆ 33, ನರಸಿಂಹರಾಜಪುರ 21, ಕೊಪ್ಪ 06, ಶೃಂಗೇರಿಯಲ್ಲಿ 09, ತರೀಕೆರೆಯಲ್ಲಿ 01, ಕಡೂರಿನಲ್ಲಿ 02 ಗ್ರಾಮವನ್ನು ಜಿಲ್ಲಾಡಳಿತ ಅಪಾಯದ ಸ್ಥಳವೆಂದು ಗುರುತುಮಾಡಿದೆ.
ಅಪಾಯ ಎದುರಿಸಲು ತಂಡಗಳ ನಿಯೋಜನೆ :
ಮಳೆಗಾಲದ ಪ್ರವಾಹದ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಲು ಹಾಗೂ ತುರ್ತು ಸಂದರ್ಭಗಳಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಹೋಬಳಿವಾರು ತರಬೇತಿ ಹೊಂದಿರುವ 34 ತಂಡವನ್ನು ರಚನೆ ಮಾಡಿದ್ದು 40 ಜನ ಸ್ವಯಂ ಸೇವಕರು, 70 ಈಜು ತಜ್ಞರು, 290 ಹೋಂ ಗಾರ್ಡ್ ಗಳ ನಿಯೋಜನೆಯನ್ನು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲ ವರ್ಷಗಳ ಮಳೆಗೆ ಸೂರು ಹಾಗೂ ತೋಟ ಗದ್ದೆಗಳನ್ನು ಕಳೆದುಕೊಂಡಿರುವ ಅನೇಕರು ಇನ್ನೂ ತಮಗೆ ದೊರೆಯದೇ ಇರುವ ಪರಿಹಾರವನ್ನು ಶೀಘ್ರವಾಗಿ ದೊರೆಯುವಂತೆ ಮಾಡಬೇಕೆಂದು ಕೋರಿದ್ದಾರೆ.





0 Comments