ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಾಳೆಹೊಳೆ ಮತ್ತು ಸಂಸೆಯಲ್ಲಿರುವ ರಸಗೊಬ್ಬರ ಮತ್ತು ಕೀಟನಾಶಕ ಗೋದಾಮುಗಳ ಮೇಲೆ ಕೃಷಿ ಜಾಗೃತ ದಳದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಸೂಕ್ತವಾಗಿ ನಿರ್ವಹಣೆ ಮಾಡಬೇಕಿದ್ದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಮೂಲ ಪ್ರಮಾಣಪತ್ರ ಹಾಗೂ ಪಿಸಿ ಗಳನ್ನು ನೀಡಿ ಗ್ರಾಹಕರಿಗೆ ವ್ಯವಹಾರ ಮಾಡದೆ ಇರುವುದು ಕಂಡುಬಂದ ಹಿನ್ನೆಲೆ ಅಧಿಕಾರಿಗಳು ಶೋಕಾಸ್ ನೋಟಿಸ್ ಅನ್ನು ಜಾರಿ ಮಾಡಿದ್ದಾರೆ.

ಸೂಕ್ತ ದಾಖಲಾತಿಗಳನ್ನು ನಿರ್ವಹಣೆ ಮಾಡದೆ ಮಾರಾಟ ನಡೆಸುತ್ತಿದ್ದ ರಸ ಗೊಬ್ಬರಗಳಿಗೆ 21 ದಿನಗಳವರೆಗೆ ಮಾರಾಟ ತಡೆ ನೋಟಿಸ್ ನ್ನು ಅಧಿಕಾರಿಗಳು ನೀಡಿದ್ದಾರೆ. ಒಂದು ವೇಳೆ ಅಧಿಕೃತ ದಾಖಲೆಗಳನ್ನು ನೀಡದೆ ಹೋದಲ್ಲಿ ಕಾಯ್ದೆಯ ಅಡಿಯಲ್ಲಿ ವಸ್ತುಗಳನ್ನು ಜಪ್ತಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ದಾಳಿ ನಡೆಯುವ ಸಂದರ್ಭದಲ್ಲಿ ಕೃಷಿ ಜಾಗೃತದಳದ ಸಹಾಯಕ ನಿರ್ದೇಶಕ ವೆಂಕಟೇಶ್ ಚೌಹಾಣ್, ಕಳಸ ಹೋಬಳಿಯ ಕೃಷಿ ಅಧಿಕಾರಿ ಪಾಂಡುರಂಗ, ಹರೀಶ್, ಅಶೋಕ್ ಸೇರಿದಂತೆ ಇತರರು ಇದ್ದರು.

ಎರಡು ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ ; ದಂಪತಿಗಳ ದುರ್ಮರಣ: 

ಶಿವಮೊಗ್ಗ : ಎರಡು ಕಾರುಗಳ ನಡುವೆ ಮುಖಾಮುಖಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಗರ್ಭಿಣಿ ಮಹಿಳೆ ಹಾಗೂ ಆಕೆಯ ಗಂಡ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ.

ಶಿವಮೊಗ್ಗ ತಾಲೂಕಿನ ಬೇಡರ ಹೊಸಹಳ್ಳಿಯ ಕೆರೆ ಏರಿ ಮೇಲೆ ಈ ಭೀಕರ ಅಪಘಾತ ಸಂಭವಿಸಿದ್ದು ಒಮಿನಿ ಕಾರ್ ಹಾಗೂ ಐ ಟ್ವೆಂಟಿ ವಾಹನಗಳ ನಡುವೆ ಈ ಮುಖಾಮುಖಿ ಅಪಘಾತ ಸಂಭವಿಸಿದ್ದು, ಚನ್ನಗಿರಿ ಮೂಲದ ಆಂಬುಲೆನ್ಸ್ ವಾಹನದ ಚಾಲಕ ಧನಂಜಯ್ ಹಾಗೂ ಅವರ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದ ರೋಜಾ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 

ಐ ಟ್ವೆಂಟಿ ಕಾರಿನಲ್ಲಿ ಇಬ್ಬರು ಪ್ರಯಾಣ ನಡೆಸುತ್ತಿದ್ದು ಓಮಿನಿ ಕಾರಿನಲ್ಲಿ ಪ್ರಯಾಣ ನಡೆಸುತ್ತಿದ್ದವರು ಗಂಭೀರಗಾಯಗಳಿಗೆ ತುತ್ತಾಗಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಪಾಸಣೆಗಾಗಿ ಗರ್ಭಿಣಿ ರೋಜಾ ಹಾಗೂ ಚೇತನ ಅವರನ್ನು ಕರೆದುಕೊಂಡು ಹೋಗಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. 

ಅಪಘಾತದ ಕುರಿತು ಶಿವಮೊಗ್ಗದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.