ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ :
ಶೃಂಗೇರಿ : ಸರ್ಕಾರಿಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡುವ ಕಾರ್ಯಕ್ರಮ ನಡೆಯಿತು. ಶೃಂಗೇರಿ ಜಗದ್ಗುರುಗಳ ಆಪ್ತಸಹಾಯಕರು ಭಾರತೀ ತೀರ್ಥ ದಾಸ ಬಿರುದಾಂಕಿತರಾದ ಶ್ರೀ ಕೃಷ್ಣಮೂರ್ತಿಯವರು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿರುವಂತೆ ಹಾರೈಸಿದರು.
ವೃದ್ದೆಗೆ ಸಹಾಯ ಹಸ್ತ ಚಾಚಿದ ಪವನ್ ಸುಧಾಕರ್ ಶೆಟ್ಟಿ :
ಓರ್ವ ಅನಾರೋಗ್ಯಪೀಡಿತ ವೃದ್ದ ಮಹಿಳೆಗೆ ಅಮ್ಮಾ ಫೌಂಡೇಶನ್ ಮುಖೇನ ಸಂಸ್ಥಾಪಕ ಸುಧಾಕರ್ ಎಸ್ ಶೆಟ್ಟಿ ಅವರ ಪುತ್ರ ಪವನ್ ಶೆಟ್ಟಿ ನೆರವಿನ ಭರವಸೆ ನೀಡಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಕಾನೂರು ಕಟ್ಟಿನಮನೆ ವ್ಯಾಪ್ತಿಯ ದಲಿತ ಮಹಿಳೆ ರಾಧಮ್ಮ ಹಾಗೂ ಅವರ ಮೊಮ್ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಸೌಲಭ್ಯಗಳನ್ನು ಒದಗಿಸುವುದಾಗಿ ಹಾಗೂ ಕಡ್ಲೆಮಕ್ಕಿ ಅಂಗನವಾಡಿ ಮಕ್ಕಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಪವನ್ ಶೆಟ್ಟಿ ಅವರು ತಿಳಿಸಿದ್ದಾರೆ. ಈ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಅಮ್ಮ ಫೌಂಡೇಶನ್ ಮುಖಾಂತರ ಮಾಡಲಿದ್ದೇವೆ, ಮಲೆನಾಡು ಭಾಗದ ಜನರ ಸಮಸ್ಯೆಗಳಿಗೆ ಸುಧಾಕರ್ ಎಸ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸೂಕ್ತವಾದ ಪರಿಹಾರವನ್ನು ಒದಗಿಸುವ ಎಲ್ಲಾ ಕಾರ್ಯಗಳನ್ನು ನಡೆಸಲಾಗುವುದು ಎಂದರು.
ಡಿವೈಡರ್ ಗೆ ಡಿಕ್ಕಿ ಹೊಡೆದ ಆಟೋ ಓರ್ವ ಮಹಿಳೆಯ ಸಾವು :
ಕಡೂರು : ಡಿವೈಡರ್ ಗೆ ಆಟೋ ಗುದ್ದಿದ ಪರಿಣಾಮ ಮಹಿಳೆಯೋರ್ವರು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಕಡೂರಿನಲ್ಲಿ ನಡೆದಿದೆ. ಕಡೂರು ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಡಿವೈಡರ್ ಗೆ ಗುದ್ದಿದ ಪರಿಣಾಮ ಈ ಅವಘಡ ಸಂಭವಿಸಿದ್ದು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ 43 ವರ್ಷ ಪ್ರಾಯದ ಸೌಭಾಗ್ಯ ಎಂಬುವವರು ದುರ್ಮರಣಕ್ಕೀಡಾಗಿದ್ದಾರೆ. ಅಪಘಾತಕ್ಕೀಡಾದ ಇನೋರ್ವರಾದ ಚಂದನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಭಾರೀ ಮಳೆಗೆ ರೈತ ಬೆಳೆದ ಬೆಳೆ ನಾಶ :
ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ಮೊನ್ನೆ ಸುರಿದ ಮಳೆಗೆ ನಾಶವಾಗಿರುವ ಘಟನೆ ಕಡೂರಿನ ಬ್ರಹ್ಮ ಸಮುದ್ರದಲ್ಲಿ ನಡೆದಿದೆ. ಕಡೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಅಡಿಕೆ ಹಾಗೂ ತೆಂಗಿನ ಮರಗಳು ಧರೆಗುರಳಿವೆ. ಕಡೂರಿನ ಬ್ರಹ್ಮ ಸಮುದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಗಾಳಿ, ಮಳೆಯಿಂದಾಗಿ ಈ ಅನಾಹುತ ಸಂಭವಿಸಿದ್ದು ರೈತರು ಬೆಳೆದ ಟೊಮ್ಯಾಟೋ ಬೆಳೆ ಕೂಡ ನಾಶವಾಗಿದೆ. ವಿದ್ಯುತ್ ಕಂಬಗಳು ಕೂಡ ಧರೆಗುರುಳಿದ್ದು ಅನೇಕರು ಈ ಮಳೆಯಿಂದಾಗಿ ನಷ್ಟ ಅನುಭವಿಸಿದ್ದಾರೆ. ಸರ್ಕಾರ ಸೂಕ್ತವಾದ ಪರಿಹಾರವನ್ನು ಒದಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಕಾಲೇಜಿನಿಂದ ಮನೆಗೆ ತೆರಳುವ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ :
ಮೂಡಿಗೆರೆ : ಕಾಲೇಜಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿಗೆ ಊರಿನ ಪಕ್ಕದ ಗ್ರಾಮಸ್ಥ ಬಲಾತ್ಕಾರ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿದ್ಯಾರ್ಥಿನಿ ಕಾಲೇಜಿನಿಂದ ತರಗತಿಯನ್ನು ಮುಗಿಸಿಕೊಂಡು ಹಿಂದಿರುಗಿ ಮನೆಗೆ ಬರುವ ಸಮಯದಲ್ಲಿ, ಊರಿನ ಪಕ್ಕದ ಗ್ರಾಮದವರಾದ ದೇವರಾಜ್ ಎಂಬುವವರು ನಿನ್ನನ್ನು ಊರಿಗೆ ಬಿಟ್ಟು ಹೋಗುತ್ತೇನೆಂದು ಹೇಳಿ, ಬೈಕಿನಲ್ಲಿ ಕುಳಿತ ಬಳಿಕ ಅವಾಚ್ಯವರ್ತನೆ ಮಾಡಿದ್ದಾನೆಂದು ಯುವತಿಯು ಆರೋಪಿಸಿದ್ದಾಳೆ. ಆಕೆಯು ಬೈಕಿನಿಂದ ಇಳಿಯಲು ಪ್ರಯತ್ನಿಸಿದಾಗ ಮೈಮೇಲೆ ಕೈಹಾಕಿ ಬಲಾತ್ಕಾರ ನಡೆಸಲು ಯತ್ನಿಸಿದ್ದಾನೆ ಹಾಗೂ ಈ ವಿಷಯವನ್ನು ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿ ಯುವತಿಯು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.
ಗಾಂಜಾ ಸಾಗಾಟ ನಡೆಸುತ್ತಿದ್ದ ಇಬ್ಬರು ಸೆರೆ :
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಬುಕ್ಕಾಂಬುದಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತರಿಂದ 1.535 ಕೆಜಿ ಗಾಂಜಾ ಹಾಗೂ ಗಾಂಜಾ ಸೇವನೆ ಮಾಡುವ ನಳಿಕೆಯನ್ನು ಅಜ್ಜಂಪುರ ಪೊಲೀಸರು ವಶಕ್ಕೆ ಪಡೆದಿದ್ದು ಈ ಸಂಬಂಧ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಶಿವಮೊಗ್ಗ :
ವ್ಯಕ್ತಿಗೆ ಚಾಕು ಇರಿತ
ಶಿವಮೊಗ್ಗ : ಶಿವಮೊಗ್ಗದ ಚೋರ್ ಬಜಾರ್ ನಲ್ಲಿ ವ್ಯಕ್ತಿ ಅವನ ಮೇಲೆ ಚಾಕುವಿನಿಂದ ಇರಿದು ಗಂಭೀರವಾಗಿ ಆತನನ್ನು ಗಾಯಾಗೊಳಿಸಲಾಗಿದೆ. ಹಣದ ವಿಚಾರವಾಗಿ ಸೆಂತಿಲ್ ಕುಮಾರ್ ಎಂಬುವರಿಗೆ ಚಾಕುವಿನಿಂದ ಇರಿಯಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಘಟನಾ ಸಂಬಂಧ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
RSS ಕಚೇರಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಗೃಹ ಸಚಿವರ ಸೂಚನೆ :
ಶಿವಮೊಗ್ಗ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಗಳ ಮೇಲೆ ದಾಳಿ ನಡೆಸುವ ಬೆದರಿಕೆಯ ಸಂದೇಶ ಬಂದಿರುವ ಕಾರಣ ರಾಜ್ಯದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೆಂದ್ರ ಸೂಚನೆ ನೀಡಿದ್ದಾರೆ. ಈ ರೀತಿಯಾಗಿ ಬೆದರಿಕೆಯೊಡ್ಡಿದ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದು ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಸನ
ಜೆಡಿಎಸ್ ಪಕ್ಷದ ನಗರಸಭೆ ಸದಸ್ಯನ ಹತ್ಯೆ ಪ್ರಕರಣ ; ತನಿಖೆಯನ್ನು CID ಗೆ ವಹಿಸಿದ ಸರ್ಕಾರ
ಕಳೆದ ಕೆಲ ದಿನಗಳ ಹಿಂದಷ್ಟೇ ಹತ್ಯೆಗೀಡಾದ ಹಾಸನ ನಗರಸಭೆಯ ಜೆಡಿಎಸ್ ಬೆಂಬಲಿತ ಸದಸ್ಯ ಪ್ರಶಾಂತ್ ಹತ್ಯೆಯ ಕುರಿತು ಸಂಪೂರ್ಣ ಪ್ರಕರಣದ ತನಿಖೆಯನ್ನು ನಡೆಸುವಂತೆ ಸಿಐಡಿ ಅಧಿಕಾರಿಗಳಿಗೆ ಪ್ರಕರಣವನ್ನು ಒಪ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ನಾಲ್ವರು ಸದಸ್ಯರನ್ನು ಹೊಂದಿರುವ ಸಿಐಡಿ ತಂಡ ತನಿಖೆಯನ್ನು ಆರಂಭಿಸಿದ್ದು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈಗಾಗಲೇ ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದು ಅಧಿಕಾರಿಗಳ ಸಂಪೂರ್ಣ ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.



0 Comments