ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಇಂದು ಹಾಗೂ ನಾಳೆ ರಾಜ್ಯದ ಹಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಅಂತೆಯೇ ಜೂನ್ 26 ರವರೆಗೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕಳೆದ ವರ್ಷ ಮಲೆನಾಡು ಭಾಗದಲ್ಲಿ ಈ ಅವಧಿಯಲ್ಲಿ ನಿರಂತರವಾಗಿ ಮಳೆಯಾಗಿತ್ತು, ಈ ಬಾರಿ ಮಳೆಯ ಪ್ರಮಾಣ ಹಾಗೂ ಅದರಿಂದ ಎದುರಾಗಬಹುದಾದ ಸಂಕಷ್ಟಗಳ ಕುರಿತು ಜಿಲ್ಲಾಡಳಿತ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ವಿಪತ್ತುಗಳು ಎದುರಾಗುವ ಸಂದರ್ಭದಲ್ಲಿ ಈ ಕುರಿತಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಲು ತಂಡಗಳನ್ನು ರಚಿಸಿದೆ.
ಭಾರೀ ಮಳೆಯಾಗುವ ಮುನ್ಸೂಚನೆ ನಿಟ್ಟಿನಲ್ಲಿ ಹೈ ಅಲರ್ಟ್ ಘೋಷಿಸಿದ ಚಿಕ್ಕಮಗಳೂರು ಜಿಲ್ಲಾಡಳಿತ :
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನದಾಗಿ ಮುಂಗಾರು ಮಳೆ ಆಗುವ ಮುನ್ಸೂಚನೆ ಇರುವುದರಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಈ ಬಾರಿ ಮಲೆನಾಡಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ.
ಮಳೆಗಾಲದ ಸಂದರ್ಭದಲ್ಲಿ ಅಬ್ಬರದ ಮಳೆಯಾಗುವ ಹಾಗೂ ಹೆಚ್ಚು ಹಾನಿಗೀಡಾಗುವ ಮಲೆನಾಡು ಹಾಗೂ ಅರೆಮಲೆನಾಡು ಭಾಗದಲ್ಲಿ ಈ ಬಾರಿ ಯಾವುದೇ ದೊಡ್ಡ ಮಟ್ಟದ ತೊಂದರೆಗಳು ಉಂಟಾಗದಂತೆ, ಸುರಕ್ಷತಾ ಕ್ರಮಗಳನ್ನು ಹಾಗೂ ಅಗತ್ಯ ಮುಂಜಾಗ್ರತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ.
ಈ ಬಾರಿಯ ಮುಂಗಾರು ಮಳೆಯನ್ನು ಎದುರಿಸಲು 83 ಟ್ರ್ಯಾಕ್ಟರ್, 155 ಟಿಪ್ಪರ್, 65 ಹಿಟಾಚಿ, 64 ಜೆಸಿಬಿ ಗಳನ್ನು ತುರ್ತು ಕಾರ್ಯಾಚರಣೆಗಾಗಿ ಜಿಲ್ಲಾಡಳಿತ ಸಜ್ಜು ಮಾಡಿಕೊಂಡಿದೆ. ಇದಲ್ಲದೇ 77 ಅಪಾಯದಲ್ಲಿರುವ ಗ್ರಾಮಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಚಿಕ್ಕಮಗಳೂರಿನಲ್ಲಿ 05, ಮೂಡಿಗೆರೆ 33, ನರಸಿಂಹರಾಜಪುರ 21, ಕೊಪ್ಪ 06, ಶೃಂಗೇರಿಯಲ್ಲಿ 09, ತರೀಕೆರೆಯಲ್ಲಿ 01, ಕಡೂರಿನಲ್ಲಿ 02 ಗ್ರಾಮವನ್ನು ಜಿಲ್ಲಾಡಳಿತ ಅಪಾಯದ ಸ್ಥಳವೆಂದು ಗುರುತುಮಾಡಿದೆ.
ಅಪಾಯ ಎದುರಿಸಲು ತಂಡಗಳ ನಿಯೋಜನೆ :
ಮಳೆಗಾಲದ ಪ್ರವಾಹದ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಲು ಹಾಗೂ ತುರ್ತು ಸಂದರ್ಭಗಳಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಹೋಬಳಿವಾರು ತರಬೇತಿ ಹೊಂದಿರುವ 34 ತಂಡವನ್ನು ರಚನೆ ಮಾಡಿದ್ದು 40 ಜನ ಸ್ವಯಂ ಸೇವಕರು, 70 ಈಜು ತಜ್ಞರು, 290 ಹೋಂ ಗಾರ್ಡ್ ಗಳ ನಿಯೋಜನೆಯನ್ನು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲ ವರ್ಷಗಳ ಮಳೆಗೆ ಸೂರು ಹಾಗೂ ತೋಟ ಗದ್ದೆಗಳನ್ನು ಕಳೆದುಕೊಂಡಿರುವ ಅನೇಕರು ಇನ್ನೂ ತಮಗೆ ದೊರೆಯದೇ ಇರುವ ಪರಿಹಾರವನ್ನು ಶೀಘ್ರವಾಗಿ ದೊರೆಯುವಂತೆ ಮಾಡಬೇಕೆಂದು ಕೋರಿದ್ದಾರೆ.






0 Comments