ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರ್ ಒಂದಕ್ಕೆ ಕಿಡಿಗೇಡಿಯೊಬ್ಬ ಬೆಂಕಿಹಚ್ಚಿ ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.

ಶಿವಮೊಗ್ಗ ನಗರದ ಜೆ.ಎಸ್.ಕೆ ಎಮ್ ರಸ್ತೆಯಲ್ಲಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 


ಆರೋಪಿಯು ಸ್ಥಳದಿಂದ ಎಸ್ಕೇಪ್ ಆಗಿದ್ದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಮನುಷ್ಯರ ವೈಯಕ್ತಿಕ ವಿಚಾರಗಳಿಗೆ, ಅವರವರ ದ್ವೇಷಕ್ಕೆ ಈ ರೀತಿಯ ಕೃತ್ಯಗಳನ್ನು ಎಸಗುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಕೃತ್ಯಗಳನ್ನು ಎಸಗುವವರ ಮೇಲೆ ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಕೋರಿದ್ದಾರೆ.

ಪ್ರೇಯಸಿ ಮದುವೆಯಾಗಿರುವ ವಿಷಯ ತಿಳಿದು ಆಕೆಯ ಊರಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ : 

ಶಿವಮೊಗ್ಗ : ಪ್ರೀತಿಗೆ ಬಿದ್ದ ಯುವಕನೋರ್ವ ಮನೆಯವರ ಮಾತನ್ನು ಕೇಳದೇ ತನ್ನ ಪ್ರೇಯಸಿಗಾಗಿ ಹೆತ್ತವರ ಸಂಬಂಧವನ್ನೇ ಕಳೆದುಕೊಂಡು ಕೊನೆಗೆ ಆಕೆಯೂ ಅವನಿಗೆ ದೊರೆಯದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. 

ಬೆಂಗಳೂರಿನ ಗಾರ್ಮೆಂಟ್ಸ್‌ವೊಂದರಲ್ಲಿ ಅಸಿಸ್ಟೆಂಟ್ ಕ್ವಾಲಿಟಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ದಿಲೀಪ್ ಮೂಲತಃ ಹಾಸನ ಜಿಲ್ಲೆ ಅರಸೀಕೆರೆಯವನು. ಅದೇ ಗಾರ್ಮೆಂಟ್ಸ್‌ನಲ್ಲಿ ಸ್ಯಾಂಪಲ್ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಆತನಿಗೆ ಪ್ರೀತಿ ಉಂಟಾಗಿದ್ದು ಇಬ್ಬರೂ ಸಹ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧ ಮೃತ ದಿಲೀಪ್ ನ ಮನೆಯವರಿಗೂ ವಿಷಯ ತಿಳಿದಿತ್ತು, ಅವರು ಈ ಸಂಬಂಧವನ್ನು ಒಪ್ಪಿರಲಿಲ್ಲ ಅದ ಕಾರಣ ಹೆತ್ತ ಪೋಷಕರನ್ನು ಸಹ ದಿಲೀಪ್ ನಿರಾಕರಿಸಿ ಮನೆಯಿಂದ ಹೊರಬಂದಿದ್ದ.


ತನ್ನ ಹಾಗೂ ಪ್ರೇಯಸಿಯ ಮುಂದಿನ ಜೀವನಕ್ಕಾಗಿ ಯುವಕ ಹಗಲು ರಾತ್ರಿಎನ್ನದೇ ಕಷ್ಟಪಟ್ಟು ದುಡಿದು ಮುಂದಿನ ಜೀವನಕ್ಕಾಗಿ ಶ್ರಮಿಸುತ್ತಿದ್ದ. ಚೆನ್ನಾಗಿಯೇ ಇದ್ದ ಇಬ್ಬರ ಮದ್ಯೆ ಅದೇನಾಯಿತೋ ಎಂಬಂತೆ ಅಂತರ ಕಾಯ್ದುಕೊಳ್ಳಲಾರಂಭವಾಗಿದೆ ಎನ್ನಲಾಗಿದೆ. 

ತನ್ನ ತಾಯಿಗೆ ಹುಷಾರಿಲ್ಲದ ನೆಪ ಹೇಳಿ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ಬಂದಿದ್ದ ಯುವತಿ, ಪ್ರಿಯಕರನಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದಳು ಎನ್ನಲಾಗಿದೆ. ಊರಿಗೆ ಬಂದ ಬಳಿಕ ಯುವತಿಗೆ ಅದೇ ಊರಿನ ಬೇರೊಬ್ಬನೊಂದಿಗೆ ಮೇ 20ರಂದು ಮದುವೆಯಾಗಿದೆ.

ಈ ವಿಷಯ ತಿಳಿದ ದಿಲೀಪ್, ಬೆಂಗಳೂರಿನಿಂದ ಆನವಟ್ಟಿಯ ತಲ್ಲೂರು ಗ್ರಾಮಕ್ಕೆ ಇದೇ 24ರಂದು ಬಂದಿದ್ದಾನೆ. ಅಷ್ಟರೊಳಗೆ ತನ್ನ ಪ್ರಿಯತಮೆಯ ವಿವಾಹವಾಗಿರುವುದು ಅವನಿಗೆ ತಿಳಿದಿದೆ. ಇದರಿಂದ ಮನನೊಂದ ದಿಲೀಪ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ. ಯುವತಿ ವಾಸವಿರುವ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕನೋರ್ವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ದಾರಿಹೋಕರು ತಕ್ಷಣವೇ ಏನಾಯಿತು ಎಂದು ಗಮನಿಸಿದ್ದಾರೆ. ಪಕ್ಕದಲ್ಲೇ ಬಿದ್ದಿದ್ದ ವಿಷದ ಬಾಟಲಿಯನ್ನು ನೋಡಿ ತಕ್ಷಣ ದಿಲೀಪ್‍ನನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಆತ ಬದುಕುಳಿಯಲೇ ಇಲ್ಲ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಹೆತ್ತವರನ್ನು ದೂರ ಮಾಡಿಕೊಂಡು ತನ್ನ ಪ್ರೀತಿಗಾಗಿ, ಪ್ರೇಯಸಿಗಾಗಿ ಬಂದಿದ್ದ ಯುವಕನ ಜೀವನವು ಅಂತ್ಯ ಕಂಡಿದ್ದು ಮೃತನನ್ನು ಕಳೆದುಕೊಂಡಿರುವ ಪೋಷಕರು ಅತೀವ ದುಃಖವನ್ನು ವ್ಯಕ್ತಪಡಿಸಿದ್ದಾರೆ.