ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಮೇಯಲೆಂದು ತೆರಳಿದ್ದ ಹಸುವೊಂದು ವಿದ್ಯುತ್ ತಗುಲಿದ ಪರಿಣಾಮ ದುರ್ಮರಣವನ್ನಪ್ಪಿರುವ ಘಟನೆ ಸಂಭವಿಸಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಆಜಾದ್ ನಗರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕೊಟ್ಟಿಗೆಹಾರದ ತೂಫಾನ್ ಮಂಜು ನಾಯ್ಕ್ ಅವರಿಗೆ ಸೇರಿದ ಸಿಂಧಿ ಹಸು ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿತಗುಲಿ ದುರ್ಮರಣವನ್ನಪ್ಪಿದೆ. 

ಹಸುವು ಮೇಯಲೆಂದು ತೆರಳಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದ್ದು, ಮೆಸ್ಕಾಂ ನಿರ್ಲಕ್ಷದಿಂದ ಈ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದೇ ಹಾದಿಯಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ತಿರುಗಾಡುತ್ತಾರೆ ಅಂತಹ ಸಮಯದಲ್ಲಿ ಯಾರಿಗಾದರೂ ಅಪಾಯವಾದರೆ ಹೊಣೆಗಾರಿಕೆ ಯಾರೆಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. 

ಹಸುವನ್ನು ಕಳೆದುಕೊಂಡಿರುವ ಕುಟುಂಬ ಪರಿಹಾರಕ್ಕಾಗಿ ಆಗ್ರಹಿಸಿದ್ದು, ಇಂತಹ ದುರ್ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಸಂಬಂಧಪಟ್ಟ ಇಲಾಖೆ ಹಾಗೂ ಅದರ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಎಚ್ಚರವಹಿಸಬೇಕಿದೆ.

ತನು ಕೊಟ್ಟಿಗೆಹಾರ, ವರದಿಗಾರರು