ಕಳಸ : (ನ್ಯೂಸ್ ಮಲ್ನಾಡ್ ವರದಿ) ಹೊಸತಾಗಿ ನಿರ್ಮಾಣಗೊಂಡಿದ್ದ ಸೇತುವೆಯೊಂದು ಕಳಪೆ ಕಾಮಗಾರಿಯಿಂದಾಗಿ ಕುಸಿದು ವಾಹನವೊಂದು ಸಿಲುಕಿ ಕೆಲಕಾಲ ಸಮಸ್ಯೆಯುಂಟಾಗಿರುವ ಘಟನೆ ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮದ, ನೆಲ್ಲಿಬೀಡು ದ್ಯಾವರ್ನಪಾಲ್ ಸೇತುವೆಯ ಸಂಪೂರ್ಣ ಕಾಮಗಾರಿ ಮುಗಿದಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು, ಆದರೆ ಒಂದು ವಾರದ ಬಳಿಕ ಅಂದರೆ ನಿನ್ನೆ ಈ ಸೇತುವೆಯ ಮೇಲೆ ಪಿಕಪ್ ವಾಹನವೊಂದು ತೆರಳುವ ಸಂದರ್ಭದಲ್ಲಿ ಸೇತುವೆಯ ಕಾಂಕ್ರೀಟ್ ಗೋಡೆಯು ಕುಸಿದ ಪರಿಣಾಮ ಪಿಕಪ್ ವಾಹನವು ಸೇತುವೆಯ ಮೇಲೆಯೇ ಸಿಲುಕಿಕೊಂಡಿದೆ. ಅದೃಷ್ಟವಶಾತ್ ಎಂಬಂತೆ ಪಿಕಪ್ ನ ಚಾಲಕ ಹಾಗೂ ವಾಹನದೊಳಗಿದ್ದ ಮಾಲೀಕ ಯಾವುದೇ ತೊಂದರೆಗೊಳಗಾಗದೆ ಪ್ರಾಣಾಪಾಯಗಳಿಂದ ಪಾರಾಗಿದ್ದಾರೆ. 

ಇದನ್ನೂ ಓದಿ : ಬಾಳೆಹೊನ್ನೂರು : ಬೇಕರಿಯಲ್ಲಿ ಸಂಗ್ರಹಿಸಿದ್ದ ವೈನ್ ವಶ

30 ಲಕ್ಷ ರೂಪಾಯಿ ಹಣದಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯು ಈ ರೀತಿಯಾಗಿ ಕಳಪೆ ಕಾಮಗಾರಿಯಿಂದ ಕುಸಿದು ಸಂಚಾರಕ್ಕೆ ಸಮಸ್ಯೆಯುಂಟುಮಾಡಿರುವುದಕ್ಕೆ ಗ್ರಾಮಸ್ಥರು ಗುತ್ತಿಗೆದಾರನ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಈ ಭಾಗದ ಈಚಲಹೊಳೆ, ಕಟ್ಟೆಮನೆ ಸೇರಿದಂತೆ ಐದಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ಕುಸಿದಿದ್ದು ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯುಂಟುಮಾಡಿದೆ.

ಘಟನೆಯ ಕುರಿತು ಕರೆ ಮಾಡಿ ಸಾರ್ವಜನಿಕರು ತಿಳಿಸಿದಾಗ ಫೋಟೋ ಕಳುಹಿಸುವಂತೆ ತಿಳಿಸಿದ್ದೇನೆ ನಂತರದಲ್ಲಿ ಜೆಸಿಬಿ ಮೂಲಕ ವಾಹನವನ್ನು ಎತ್ತಲು ತಡವಾದರೂ ಅನುಮತಿ ನೀಡಲಾಗಿದೆ, ಅರಣ್ಯ ವ್ಯಾಪ್ತಿಯು ಹೆಚ್ಚಿರುವುದರಿಂದ ಜೆಸಿಬಿ ಕೆಲಸಗಳಿಗೆ ಅನುಮತಿ ಪಡೆಯಲೇಬೇಕಿದೆ - ಹರೀಶ್ DRFO ಕಳಸ

ಸಿಲುಕಿರುವ ಪಿಕಪ್ ವಾಹನವನ್ನು ಮೇಲಕ್ಕೆತ್ತುವ ಸಲುವಾಗಿ ಜೆಸಿಬಿಯ ಸಹಾಯವನ್ನು ಹಾಗೂ ಈ ಕುರಿತು ಅನುಮತಿ ನೀಡುವಂತೆ ಕೋರಿದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆಯೊಡ್ಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಇದೇ ಪಿಕಪ್ ವಾಹನವನ್ನು ಅಧಿಕಾರಿಗಳು ಲೀಸ್ ಗೆ ಪಡೆಯುತ್ತಿದ್ದಾರೆ ಅದರೆ ಆತನ ಕಷ್ಟದ ಸಂದರ್ಭದಲ್ಲಿ ನೆರವಾಗುವ ಬದಲು ದರ್ಪದಿಂದ ಬೈದು ಜೆಸಿಬಿ ಬಂದಲ್ಲಿ ಸೀಜ್ ಮಾಡಿ ಕೇಸ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಾವೇ ಲೀಸ್ ಗೆ ಪಡೆದು ಬಳಸುವ ವಾಹನವು ಸಿಲುಕಿಕೊಂಡಾಗ ಸಹಾಯಕ್ಕೆ ಧಾವಿಸುವುದರ ಬದಲು ಈ ರೀತಿಯ ವರ್ತನೆ ತೋರಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. 

ಅರಣ್ಯ ಇಲಾಖೆಯ ಇಬ್ಬರು ಅಧಿಕಾರಿಗಳು ನಿರಂತರವಾಗಿ ಈ ಭಾಗದ ಜನರಿಗೆ ಕಿರುಕುಳವನ್ನು ನೀಡುತ್ತಿದ್ದಾರೆ, ಇದೇ ರೀತಿಯ ಬೆಳವಣಿಗೆಗಳು ಮುಂದುವರೆದದ್ದು ಕಂಡು ಬಂದಲ್ಲಿ ಅರಣ್ಯ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟಿಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.