ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ಶಂಕರಾಚಾರ್ಯ ಮೂರ್ತಿ ಅಪವಿತ್ರ ಪ್ರಕರಣದಲ್ಲಿ ತನ್ನ ಮೇಲೆ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಿದ್ದು, ಸಮಾಜದಲ್ಲಿ ತಪ್ಪು ಕಲ್ಪನೆ ಬರುವಂತೆ ಮಾಡಿ, ಕೋಮು ಸಾಮರಸ್ಯ ಕೆರಳಿಸಲಾಗಿತ್ತು ಎಂದು ಸುಹೈಲ್ ಎಂಬುವವರು ನೀಡಿದ ಖಾಸಗಿ ದೂರಿನ ಆಧಾರದ ಮೇಲೆ ಮಾಜಿ ಸಚಿವರು ಹಾಗೂ ಸಿ.ಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಸೇರಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಎಸಿಬಿ ಬಲೆಗೆ ಬಿದ್ದ ಕಡೂರಿನ ಕುಬೇರನ ಪುತ್ರನ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್

2020ರ ಆಗಸ್ಟ್ 13ರಂದು ಶಂಕರಾಚಾರ್ಯ ಮೂರ್ತಿ ಮೇಲೆ ಹಸಿರು ಶಾಲು ಹೊದಿಸಿ ಅಪವಿತ್ರ ಮಾಡಲಾಗಿದೆ ಎಂಬ ವಿವಾದ ಭುಗಿಲೆದ್ದು ಈ ಕುರಿತು ಶಂಕರಾಚಾರ್ಯರ ಪ್ರತಿಮೆ ಎದುರು ಹಾಗೂ ಪೊಲೀಸ್ ಸ್ಟೇಶನ್ ಮುಂಬಾಗ  ಬೃಹತ್ ಪ್ರತಿಭಟನೆ ನಡೆದಿತ್ತು, ಈ ಸಂಧರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವರಾದ ಡಿ.ಎನ್ ಜೀವರಾಜ್, ಬಿಜೆಪಿ ಮುಖಂಡರಾದ ಹರೀಶ್ ಶೆಟ್ಟಿ, ವೇಣುಗೋಪಾಲ್ ಹಾಗೂ ಶ್ರೀರಾಮಸೇನೆ ಮುಖಂಡ ಅರ್ಜುನ್ ಎಂಬುವವರು ನಮ್ಮ ಬಗ್ಗೆ ಆಧಾರ ರಹಿತ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಿದ್ದರು ಎಂದು ಸುಹೈಲ್ ಎಂಬುವವರು ಖಾಸಗೀ ದೂರು ದಾಖಲಿಸಿದ್ದರು. 

ಈ ಕುರಿತು ಸುಹೈಲ್ ದೂರಿನ ಆಧಾರದ ಮೇಲೆ ಸೆಕ್ಷನ್ 153,153ಎ. 182, 211, 295ಎ ಮತ್ತು ಸೆಕ್ಷನ್ 34 ಐಪಿಸಿ ರಂತೆ ಸಿಸಿ ಸಂಖ್ಯೆ 284/22ರಂತೆ ಶೃಂಗೇರಿ ನ್ಯಾಯಾಲಯದಲ್ಲಿ ದಿನಾಂಕ 16 ಜೂನ್ 2022ರಂದು ಎ1 ಆರೋಪಿಯಾಗಿ ಅರ್ಜುನ್, ಎ2 ಡಿ.ಎನ್ ಜೀವರಾಜ್, ಎ3 ಹರೀಶ್ ವಿ ಶೆಟ್ಟಿ ಹಾಗೂ ಎ4 ಆರೋಪಿಯಾಗಿ ವೇಣುಗೋಪಾಲ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು ಧಾರ್ಮಿಕ ಭಾವನೆಗೆ ಧಕ್ಕೆ, ತನಿಖಾ ಅಧಿಕಾರಿಗಳಿಗೆ ಪ್ರಕರಣದ ಕುರಿತು ತಪ್ಪು ಮಾಹಿತಿ ನೀಡಿರುವುದು, ಗಲಭೆಗೆ ಪ್ರಚೋದನೆ ನೀಡಿರುವುದು ಎಂಬ ಸೆಕ್ಷನ್ ಗಳ ಮೇಲೆ ತಾಲೂಕು ನ್ಯಾಯಾಲಯ ಆರೋಪಿತರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.