ಚಿಕ್ಕಮಗಳೂರು :

ಅಕ್ರಮ ಗೋಮಾಂಸ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ 

ಅಕ್ರಮವಾಗಿ ಗೋಹತ್ಯೆ ನಡೆಸಲು ನಿರ್ಮಾಣ ಮಾಡಿದ್ದ ಶೆಡ್ ಒಂದನ್ನು ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಕಾರ್ಯಾಚರಣೆಯ ಮೂಲಕ ಪತ್ತೆ ಮಾಡಿ ನೆಲಸಮಗೊಳಿಸಿದೆ.ಚಿಕ್ಕಮಗಳೂರಿನ ತಮಿಳುಕಾಲೋನಿ ಬಳಿಯಲ್ಲಿ ಗೋಹತ್ಯೆ ನಡೆಸಲೆಂದೇ ಖಾಲಿ ಇದ್ದ ಜಾಗದಲ್ಲಿ ಅನಧಿಕೃತವಾಗಿ ಶೆಡ್ಡನ್ನು ನಿರ್ಮಿಸಿ ಗೋಹತ್ಯೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇಂದು ಮುಂಜಾನೆ ಸರಿಸುಮಾರು ಏಳು ಗಂಟೆಯ ಸಮಯದಲ್ಲಿ ನಗರಸಭೆ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಸೇರಿದಂತೆ ಪೌರಾಯುಕ್ತರು, ಇನ್ಸ್ಪೆಕ್ಟರ್, ಸೂಪರ್ವೈಸರ್, ಪೊಲೀಸ್ ಅಧಿಕಾರಿಗಳ ಭದ್ರತೆಯಲ್ಲಿ ದಾಳಿ ನಡೆಸಿ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಕಾಫಿನಾಡಿನಲ್ಲಿ ಹೈ ಅಲರ್ಟ್ :

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನದಾಗಿ ಮುಂಗಾರು ಮಳೆ ಆಗುವ ಮುನ್ಸೂಚನೆ ಇರುವುದರಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಈ ಬಾರಿ ಮಲೆನಾಡಿನಾದ್ಯಂತ  ಹೈ ಅಲರ್ಟ್ ಘೋಷಣೆ ಮಾಡಿದೆ. ಮಳೆಗಾಲದ ಸಂದರ್ಭದಲ್ಲಿ ಅಬ್ಬರದ ಮಳೆಯಾಗುವ ಹಾಗೂ ಹೆಚ್ಚು ಹಾನಿಗೀಡಾಗುವ ಮಲೆನಾಡು ಹಾಗೂ ಅರೆಮಲೆನಾಡು ಭಾಗದಲ್ಲಿ ಈ ಬಾರಿ ಯಾವುದೇ ದೊಡ್ಡ ಮಟ್ಟದ ತೊಂದರೆಗಳು ಉಂಟಾಗದಂತೆ, ಸುರಕ್ಷತಾ ಕ್ರಮಗಳನ್ನು ಹಾಗೂ ಅಗತ್ಯ ಮುಂಜಾಗ್ರತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. 

ನಿಯಂತ್ರಣ ತಪ್ಪಿ ಉರುಳಿದ ಕಾರು; ಓರ್ವನ ದುರ್ಮರಣ : 

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ದುರ್ಮರಣವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಹಿರೆಗೌಜ ಸಮೀಪ ಈ ದುರಂತ ಸಂಭವಿಸಿದ್ದು ಸೇತುವೆಗೆ ಕಾರು ಗುದ್ದಿದ ಪರಿಣಾಮ ದೊಡ್ಡದೊಂದು ಅನಾಹುತ ಸಂಭವಿಸಿದೆ. ಕಡೂರು ಕಡೆಯಿಂದ ಕಾರ್ ಚಿಕ್ಕಮಗಳೂರಿನ ಕಡೆಗೆ ತೆರಳುತ್ತಿದ್ದ ವೇಳೆಯಲ್ಲಿ ಈ ದುರಂತ ನಡೆದಿದೆ. ಅಪಘಾತದ ತೀವ್ರತೆಗೆ ಚಾಲಕ ಗಂಭೀರವಾಗಿ ಗಾಯಗೊಂಡಿದ್ದ, ಆತನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಗಂಭೀರವಾಗಿ ಗಾಯಕ್ಕೀಡಾಗಿದ್ದ ಚಾಲಕ ಚಿಕಿತ್ಸೆಗೆ ಸೂಕ್ತ ಸ್ಪಂದನೆ ನೀಡದೇ ದುರ್ಮರಣವನ್ನಪ್ಪಿದ್ದಾನೆ.

PSI ಸ್ಥಳ ನಿಯುಕ್ತಿ ಕುರಿತು ಶಾಸಕ MPK ಪತ್ರ : 

ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆಯ ಮಲ್ಲಂದೂರು ಪೊಲೀಸ್ ಠಾಣೆಯ PSI ಸ್ಥಳ ನಿಯುಕ್ತಿ ಆದೇಶವನ್ನು ಒಂದು ವಾರದ ಗಡುವಿನೊಳಗೆ ಹಿಂಪಡೆಯದೆ ಹೋದಲ್ಲಿ ಧರಣಿ ನಡೆಸುವುದಾಗಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪತ್ರದ ಮೂಲಕ ಪೊಲೀಸ್ ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ. ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ  ನಡೆಸಿದ ಸಂಭಾಷಣೆಯಂತೆ ಮೂಡಿಗೆರೆ ಮತ ಕ್ಷೇತ್ರ ವ್ಯಾಪ್ತಿಯು ನನ್ನ ಮತಕ್ಷೇತ್ರವಾಗಿದ್ದು ಈ ವ್ಯಾಪ್ತಿಯಲ್ಲಿನ ಎಲ್ಲಾ ಪೊಲೀಸ್ ಠಾಣೆಯ ಎಲ್ಲಾ ಉಪ ನಿರೀಕ್ಷಕರನ್ನು ಉಲ್ಲೇಖದಂತೆ ಮುಂದುವರೆಸಲು E-mail ಮುಖಾಂತರ ಕೋರಲಾಗಿತ್ತು, ಆದರೂ ತಾವು ನನ್ನ ಗಮನಕ್ಕೆ ತಾರದೆಯೇ ಮೂಡಿಗೆರೆ ಠಾಣೆಯಲ್ಲಿರುವ ಉಪನಿರೀಕ್ಷಕರಾದ ಶ್ರೀ ರವಿ ಅವರನ್ನು ಹಾಗೂ ಮಲ್ಲಂದೂರು ಠಾಣೆಯ ಉಪನಿರೀಕ್ಷಕರನ್ನು ಬೇರೆಡೆ ಸ್ಥಳ ನಿಯುಕ್ತಿ ಮಾಡಿ ಆದೇಶ ಹೊರಡಿಸಿರುತ್ತೀರಿ, ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ಈ ಆದೇಶವನ್ನು ಹಿಂಪಡೆದು, ಮೂಡಿಗೆರೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನಿರೀಕ್ಷಕರಾದ ಶ್ರೀ ರವಿ ಅವರನ್ನು ಕೇಂದ್ರ ಸ್ಥಾನದಲ್ಲೇ ಮುಂದುವರೆಸಬೇಕು ಹಾಗೂ ಮಲ್ಲಂದೂರು ಠಾಣೆಯ ಉಪನಿರೀಕ್ಷಕರ ಸ್ಥಳ ನಿಯುಕ್ತಿ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿದ್ದಾರೆ, ಇಲ್ಲವಾದಲ್ಲಿ ಪೊಲೀಸ್ ಮಹಾನಿರೀಕ್ಷಕರ ಕಛೇರಿ ಮುಂದೆ ಧರಣಿ ಕೂರುತ್ತೇನೆ ಎಂದಿದ್ದಾರೆ.


ಗಾಂಜಾ ವ್ಯಸನಿಗಳನ್ನು ಹಿಡಿಯುವತ್ತ ಪೊಲೀಸರ ಹೊಸ ತಂತ್ರ : 

ಜಿಲ್ಲೆಯಲ್ಲಿ ಬಹುತೇಕ ಯುವಕರು ಗಾಂಜಾ ಚಟಕ್ಕೆ ಬಲಿಯಾಗಿ ಅದನ್ನು ಸೇವಿಸುವ ಛಟವನ್ನು ಹೊಂದಿರುವ ಹಿನ್ನೆಲೆ ಈ ಕುರಿತು ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ವಿವಿಧ ರೀತಿಯ ಕಾರ್ಯಾಚರಣೆ ಹಾಗೂ ಈ ದಂಧೆಯನ್ನು ಮಟ್ಟಹಾಕುವ ಸಲುವಾಗಿ ಹೊಸಹೊಸ ಯೊಜನೆಗಳನ್ನು ರೂಪಿಸುತ್ತಿದ್ದಾರೆ. ದಿನ ಕಳೆದಂತೆ ಗಾಂಜಾ ವ್ಯಸನಿಗಳು ಹಾಗೂ ಈ ದಂಧೆಯ ಭಾಗಿದಾರರು ಹೆಚ್ಚುತ್ತಲೇ ಇದ್ದಾರೆ ಈ ನಿಟ್ಟಿನಲ್ಲಿ, ಅವರನ್ನು ಮಟ್ಟ ಹಾಕುವ ಸಲುವಾಗಿ ಜಿಲ್ಲೆಯ ಖಾಕಿಪಡೆ ಕಾರ್ಯಾಚರಣೆಗಿಳಿದಿದೆ. ಸಂಜೆಯಾಗುತ್ತಿದ್ದಂತೆಯೇ ಬೀಟ್ ಗೆ ತೆರಳುವ ಪೊಲೀಸರು ನಶೆಯಲ್ಲಿದ್ದವರಂತೆ ಕಂಡುಬರುವವರನ್ನು ವಶಕ್ಕೆ ಪಡೆದು, ಅವರನ್ನು ತಪಾಸಣೆಗೊಳಪಡಿಸಿ ಒಂದು ವೇಳೆ ಧೃಢಪಟ್ಟಲ್ಲಿ ಅವರ ಮೇಲೆ ಎನ್.ಡಿ.ಪಿ.ಎಸ್ ಆಕ್ಟ್ ನ ಅಡಿಯಲ್ಲಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸುತ್ತಿದ್ದಾರೆ. 

ಶೃಂಗೇರಿ ಮಠದ ಪದ್ಮನಾಭ ಅವಧಾನಿಗಳು ಅಸ್ತಂಗತ

ಚಿತ್ರದುರ್ಗ/ ಶೃಂಗೇರಿ : ಜೋಗಿಮಟ್ಟಿ ರಸ್ತೆ ನಿವಾಸಿ ವೇದ ಬ್ರಹ್ಮ ಪದ್ಮನಾಭ ಅವಧಾನಿಗಳು (ಪದ್ದಣ್ಣ) ನಿಧನರಾಗಿದ್ದಾರೆ. ಹಲವಾರು ವರ್ಷಗಳಿಂದ ಶ್ರೀ ಕೂಡಲಿ ಶೃಂಗೇರಿ ಮಠದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದ ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗದವರನ್ನು ಹಾಗೂ ಪರಿಚಯಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗಿದೆ. ಅಪಾರ ಸಂಖ್ಯೆಯ ಮಠದ ಭಕ್ತರು ಅವಧಾನಿಗಳಾದ ವೇದಬ್ರಹ್ಮ ಪದ್ಮನಾಭ ಅವಧಾನಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. 

ಪಠ್ಯ ಪರಿಷ್ಕರಣೆ ಸಮಿತಿ ವಿರೋಧಿಸಿ ಬಹುಜನ ಸಮಾಜವಾದಿ ಪಕ್ಷ ಪ್ರತಿಭಟನೆ : 

ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆ ನಡೆಸಿರುವ ಪಠ್ಯಪುಸ್ತಕದಲ್ಲಿ ಸಮಾಜ ಸುಧಾರಕರ ಅಂಶಗಳನ್ನು ಕಡಿಮೆಗೊಳಿಸಿ ಕೋಮು ಭಾವನೆಗಳನ್ನು ಬಿತ್ತಲಾಗಿದೆ ಎಂದು ಆರೋಪಿಸಿ ಹಾಗೂ ಇದನ್ನು ವಿರೋಧಿಸಿ ಶೃಂಗೇರಿಯ ಬಹುಜನ ಸಮಾಜವಾದಿ ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರು  ಪಂಜಿನ ಮೆರವಣಿಗೆಯನ್ನು ನಡೆಸಿದರು. ಈ ಕುರಿತಾಗಿ ಮಾತನಾಡಿದ ಅವರು ಹಿಂದಿನ ವರ್ಷಗಳ ಪಠ್ಯವನ್ನೆ ಮುಂದುವರೆಸಬೇಕು, ಅಂಬೇಡ್ಕರ್, ನಾರಾಯಣ ಗುರು, ಕುವೆಂಪು ಅವರ ಕುರಿತಾದ ವಿಚಾರಗಳನ್ನು ಅಳವಡಿಸಬೇಕೆಂದು ಆಗ್ರಹಿಸಿದರು ಹಾಗೂ ಅಲ್ಲಿಯವರೆಗೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಶಿವಮೊಗ್ಗ: 

ನೂಪುರ್ ಶರ್ಮಾ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆ : 

ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಶಿವಮೊಗ್ಗದಲ್ಲಿ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ಕೂಡ ತೀವ್ರವಾಗಿ ಘೋಷಣೆ ಕೂಗಿ ಪ್ರತಿಭಟಿಸಿದರು. 

ಚಾಕು ಇರಿತಕ್ಕೊಳಪಟ್ಟಿದ್ದ ವ್ಯಕ್ತಿ ಸಾವು :

ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಚಾಕುವಿನಿಂದ ಇರಿತಕ್ಕೊಳಪಟ್ಟಿದ್ದ ಸೆಂಧಿಲ್ ಕುಮಾರ್ ಎಂಬ ವ್ಯಕ್ತಿ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆತ ಮೃತಪಟ್ಟಿದ್ದಾನೆ.