ಚಿಕ್ಕಮಗಳೂರು :

ಭಾರೀ ಮಳೆಯ ಮುನ್ಸೂಚನೆ :

ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಇಂದು ಹಾಗೂ ನಾಳೆ ರಾಜ್ಯದ ಹಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಅಂತೆಯೇ ಜೂನ್ 26 ರವರೆಗೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕೊಪ್ಪ : ಅರಣ್ಯ ಇಲಾಖೆಯ ಜಾಗವೆಂದು ಕಟ್ಟಿದ್ದ ಮನೆಯನ್ನು ನೆಲಸಮಗೊಳಿಸಿದ ಸಿಬ್ಬಂದಿಗಳು

ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ಮನೆ ಕಟ್ಟಲಾಗಿದೆ ಎಂದು ಆರೋಪಿಸಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿದ ಸ್ಥಳದಲ್ಲಿಯೇ ದಲಿತ ಸಂಘರ್ಷ ಸಮಿತಿಯ ವತಿಯಿಂದ ಮನೆ ನಿರ್ಮಾಣ ಮಾಡಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಆಕ್ರೋಶ ಹೊರಹಾಕಿರುವ ಘಟನೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ.ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಿಲುವಾಗಿಲು ಪಂಚಾಯತ್ ವ್ಯಾಪ್ತಿಯ ಗಾಳಿಮರದ ಓರ್ವ ವಯಸ್ಸಾದ ದಲಿತ ಮಹಿಳೆ ಬೆಳ್ಳಮ್ಮ ಎಂಬುವವರು ತನ್ನ ಸಮುದಾಯದವರೊಂದಿಗೆ ಈ ಭಾಗದಲ್ಲಿ ಮನೆಯೊಂದನ್ನು ನಿರ್ಮಿಸಿಕೊಂಡಿದ್ದರು, ಜಾಗವು ಅರಣ್ಯ ಇಲಾಖೆಗೆ ಸೇರಿದ್ದೆಂದು ತಿಳಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮನೆಯನ್ನು ಸಂಪೂರ್ಣ ನೆಲಸಮ ಮಾಡಿದ್ದಾರೆ ಹಾಗೂ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ನಾಶ ಮಾಡಿದ್ದಾರೆ ಇದು ಮಹಿಳೆಗೆ ಆದ ಅನ್ಯಾಯವೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸ್ಥಳಕ್ಕೆ ಧಾವಿಸಿ ಪ್ರತಿಭಟಿಸಿದೆ. ಇದಲ್ಲದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಿಕ್ಕಮಗಳೂರು, ಕೊಪ್ಪ ತಾಲೂಕು ಇವರ ಸಹಯೋಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿದ್ದ ಮನೆಯನ್ನು ಪುನಃ ಅದೇ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮನೆಯು ಕಂದಾಯ ವ್ಯಾಪ್ತಿಗೆ ಸೇರುತ್ತದೆ ಆದರೂ ಅಧಿಕಾರಿಗಳು ಅರಣ್ಯ ಇಲಾಖೆಗೆ ಸೇರುತ್ತದೆ ಎಂದು ನಾಶ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮನೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟಿದ್ದೇವೆ, ಒಂದೂವರೆ ಲಕ್ಷ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ಆರೋಪ ಮಾಡಿದ್ದಾರೆ. 

ಯುವಕರ ನಡುವೆ ಗ್ಯಾಂಗ್ ವಾರ್, ದೂರು ಪ್ರತಿದೂರು ದಾಖಲು

ಬಾಳೆಹೊನ್ನೂರು : ದೊಣ್ಣೆ, ಕತ್ತಿ ಮುಂತಾದ ಮಾರಕಾಸ್ತ್ರಗಳಿಂದ ಹಲ್ಲೆ ನಡೆದು ಎರಡೂ ಕಡೆಯವರಿಂದ ದೂರು ಪ್ರತಿದೂರು ದಾಖಲಾಗಿರುವ ಘಟನೆ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಠಾಣಾವ್ಯಾಪ್ತಿಯ ಗೋರಿಗಂಡಿ ಬಳಿಯಲ್ಲಿ ಈ ಘಟನೆ ನಡೆದಿದ್ದು ಶಿಶಿರ ಎಂಬ ಯುವಕ ಒಳಗೋಡು ರಸ್ತೆಯ ಬಳಿಯಲ್ಲಿ ನಿಂತಿದ್ದಾಗ, ಕೆಲ ಯುವಕರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೀಡಾದ ಯುವಕ ಶಿಶಿರ ಎಂಬಾತ ದೂರು ನೀಡಿದ್ದಾರೆ, ಹಲ್ಲೆಯಿಂದ ಗಾಯಕ್ಕೀಡಾದ ಯುವಕ ಪ್ರಾಥಮಿಕವಾಗಿ ಬಾಳೆಹೊನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಳಿಕದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ನರಸಿಂಹರಾಜಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊಲೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಈ ಸಮಯದಲ್ಲಿ ನನ್ನ ಬಳಿಯಿದ್ದ 10000 ರೂಪಾಯಿ ಹಣವನ್ನು ಕಿತ್ತುಕೊಂಡು ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ ಎಂದು ಹಲ್ಲೆಗೀಡಾದ ಶಿಶಿರ್ ದೂರು ನೀಡಿದ್ದಾರೆ. ಈ ಸಂಬಂಧ ಮಾಗಲು ಸಂದೀಪ್, ನಂದನ್, ಅನುದಿನ್, ಸಿಂಚಿತ್, ಶರಣ್ ಜಿತ್, ಮಂಜುಶೆಟ್ಟಿ, ಕೊಟ್ರೇಶ್, ರಂಜಿತ್, ಸಂದೀಪ್, ನಂದೀಪ್ ಎಂಬುವವರ ವಿರುದ್ದ ಪ್ರಕರಣವು ದಾಖಲಾಗಿದೆ. 

ಪ್ರತಿದೂರು ದಾಖಲು :

ಇದೇ ಘಟನೆಗೆ ಸಂಬಂಧಿಸಿದಂತೆ ಪ್ರತಿದೂರು ಸಹ ದಾಖಲಾಗಿದೆ. ದೇವದಾನದ ರಂಜಿತ್ ಕುಮಾರ್ ಎಂಬುವವರು ಗೋರಿಗಂಡಿಯಲ್ಲಿ ಅಂಗಡಿಗೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಕೆಲ ಯುವಕರು ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ವ್ಯಕ್ತಿ ದಲಿತನಾಗಿದ್ದು ವಿನಾಕಾರಣ ಹಲ್ಲೆ ನಡೆಸಿದಾತನ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಶಿಶಿರ, ಸಂತೋಷ್, ಇಲಿಯಾಸ್, ಧರ್ಮ, ಬಾಳೆಹೊನ್ನೂರಿನ ಇಲಿಯಾಸ್, ಮಸೀದಿಕೆರೆಯ ಇಮ್ದಾದ್, ಲತೀಫ್, ವಾಸೀಂ ವಿರುದ್ಧ ಪ್ರಕರಣ ದಾಖಲಾಗಿದೆ.ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಸಂಪೂರ್ಣ ತನಿಖೆಯ ನಂತರವಷ್ಟೇ ಹೊರಬೀಳಲಿದೆ.

ಭೂಕುಸಿತ ಸಂಭವಿಸುವ ಭೀತಿ ಹಿನ್ನೆಲೆ ; ಮಳೆಗಾಲದಲ್ಲಿ ಮರಗಳ ಸಾಗಾಣಿಕೆಗೆ ತಡೆಯೊಡ್ಡುವಂತೆ ಸಾರ್ವಜನಿಕರ ಆಗ್ರಹ :

ಹೆಚ್ಚುಮಳೆ ಬೀಳುವ ಪ್ರದೇಶಗಳಲ್ಲಿ ಕಾಫಿನಾಡು ಚಿಕ್ಕಮಗಳೂರು ಸಹ ಒಂದು, ಕಳೆದ ವರ್ಷಗಳ ನಿರಂತರ ಮಳೆಯಿಂದಾಗಿ ರಸ್ತೆ ಕುಸಿತ, ಗುಡ್ಡ ಧರೆ ಕುಸಿತ, ಪ್ರವಾಹ ಮುಂತಾದವುಗಳು ಜನರ ಬದುಕಿಗೆ ಸಮಸ್ಯೆಗಳನ್ನು ತಂದೊಡ್ಡಿತ್ತು. ಪ್ರಸ್ತುತ ಸರ್ಕಾರವನ್ನು ಮನವಿ ಮಾಡಿರುವ ಸಾರ್ವಜನಿಕರು ಮಳೆಗಾಲದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿದು ಸಾಗಣೆ ಮಾಡಲು ಅವಕಾಶ ಕಲ್ಪಿಸಬಾರದು ಎಂದು ಸರ್ಕಾರವನ್ನು ಕೋರಿದ್ದಾರೆ. ಮರಗಳನ್ನು ಕಡಿಯುವುದು ಬೆಟ್ಟ ಗುಡ್ಡಗಳ ಕುಸಿತಕ್ಕೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಮಳೆಗಾಲದ ಅವಧಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಡೆಯಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಅನುಮತಿ ಪಡೆಯದೆ ಮರಗಳನ್ನು ಕಡಿಯುತ್ತಿರುವ ಮಾಫಿಯಾವನ್ನು ಪತ್ತೆ ಮಾಡಬೇಕು. ಯಾವುದೇ ಕಾರಣಕ್ಕೂ ಮರಗಳ ಸಾಗಾಟಕ್ಕೆ ಮಳೆಗಾಲದ ಅವಧಿಯಲ್ಲಿ ಅನುಮತಿ ನೀಡಬಾರದು ಎಂಬುದು ಮಲೆನಾಡಿಗರ ಒಕ್ಕೊರಲಿನ ಆಗ್ರಹವಾಗಿದೆ.


ಈಚಲು ಮರದಲಿ ಮೂಡಿದ ಗಣಪ ; ಸ್ಥಳೀಯರಿಂದ ಪೂಜೆ, ಪ್ರಾರ್ಥನೆ : 

ಚಿಕ್ಕಮಗಳೂರಿನ ಹೊಲವೊಂದರಲ್ಲಿರುವ ಈಚಲು ಮರದಲ್ಲಿ ಗಣಪನ ಆಕಾರ ಮೂಡಿದೆ. ಈ ಗಣಪನನ್ನು ಕಂಡು ಜನ ಭಕ್ತಿ ಭಾವಗಳಿಗೊಳಗಾಗಿದ್ದಾರೆ. ಗಣಪತಿಯನ್ನೇ ಹೋಲುವ ಸೊಂಡಿಲು, ಕಣ್ಣು, ಕೈ, ದೇಹದ ಆಕಾರ ಮರದ ಬುಡದಲ್ಲಿ ಮೂಡಿದೆ. ಸ್ಥಳೀಯರು ಬಂದು ಭಕ್ತಿ ಭಾವಗಳಿಂದ ಪೂಜೆ, ಪ್ರಾರ್ಥನೆಯನ್ನು ಪ್ರತಿನಿತ್ಯವೂ ನಡೆಸುತ್ತಿದ್ದಾರೆ.ಚಿಕ್ಕಮಗಳೂರು ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿದ್ದು, ಎಲ್ಲ ಗಣಪತಿಗಳು ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ ಈ ಈಚಲು ಮರದಲ್ಲಿ ಉದ್ಭವಿಸಿರುವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿರುವುದು ಜನರಲ್ಲಿ ಇನ್ನಷ್ಟು ಅಚ್ಚರಿ ಮೂಡಿಸಿದೆ. ಕೌತುಕದಿಂದ ಮರದಲ್ಲಿ ಮೂಡಿರುವ ಗಣಪನನ್ನು ನೋಡಲು ಬರುವ ಜನರು ನಂತರದಲ್ಲಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿ ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.


ರಸಗೊಬ್ಬರದ ಮಳಿಗೆಗೆ ದಾಳಿ ನಡೆಸಿದ ಅಧಿಕಾರಿಗಳು :

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಾಳೆಹೊಳೆ ಮತ್ತು ಸಂಸೆಯಲ್ಲಿರುವ ರಸಗೊಬ್ಬರ ಮತ್ತು ಕೀಟನಾಶಕ ಗೋದಾಮುಗಳ ಮೇಲೆ ಕೃಷಿ ಜಾಗೃತ ದಳದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ಸೂಕ್ತವಾಗಿ ನಿರ್ವಹಣೆ ಮಾಡಬೇಕಿದ್ದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಮೂಲ ಪ್ರಮಾಣಪತ್ರ ಹಾಗೂ ಪಿಸಿ ಗಳನ್ನು ನೀಡಿ ಗ್ರಾಹಕರಿಗೆ ವ್ಯವಹಾರ ಮಾಡದೆ ಇರುವುದು ಕಂಡುಬಂದ ಹಿನ್ನೆಲೆ ಅಧಿಕಾರಿಗಳು ಶೋಕಾಸ್ ನೋಟಿಸ್ ಅನ್ನು ಜಾರಿ ಮಾಡಿದ್ದಾರೆ. ಸೂಕ್ತ ದಾಖಲಾತಿಗಳನ್ನು ನಿರ್ವಹಣೆ ಮಾಡದೆ ಮಾರಾಟ ನಡೆಸುತ್ತಿದ್ದ ರಸ ಗೊಬ್ಬರಗಳಿಗೆ 21 ದಿನಗಳವರೆಗೆ ಮಾರಾಟ ತಡೆ ನೋಟಿಸ್ ನ್ನು ಅಧಿಕಾರಿಗಳು ನೀಡಿದ್ದಾರೆ. ಒಂದು ವೇಳೆ ಅಧಿಕೃತ ದಾಖಲೆಗಳನ್ನು ನೀಡದೆ ಹೋದಲ್ಲಿ ಕಾಯ್ದೆಯ ಅಡಿಯಲ್ಲಿ ವಸ್ತುಗಳನ್ನು ಜಪ್ತಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


ಶಿವಮೊಗ್ಗ : 

ಭೀಕರ ರಸ್ತೆ ಅಪಘಾತ ; ಇಬ್ಬರ ದುರ್ಮರಣ 


ಶಿವಮೊಗ್ಗ ತಾಲೂಕಿನ ಬೇಡರ ಹೊಸಹಳ್ಳಿಯ ಕೆರೆ ಏರಿ ಮೇಲೆ ಈ ಭೀಕರ ಅಪಘಾತ ಸಂಭವಿಸಿದ್ದು ಒಮಿನಿ ಕಾರ್ ಹಾಗೂ ಐ ಟ್ವೆಂಟಿ ವಾಹನಗಳ ನಡುವೆ ಈ ಮುಖಾಮುಖಿ ಅಪಘಾತ ಸಂಭವಿಸಿದ್ದು, ಚನ್ನಗಿರಿ ಮೂಲದ ಆಂಬುಲೆನ್ಸ್ ವಾಹನದ ಚಾಲಕ ಧನಂಜಯ್ ಹಾಗೂ ಅವರ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದ ರೋಜಾ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಐ ಟ್ವೆಂಟಿ ಕಾರಿನಲ್ಲಿ ಇಬ್ಬರು ಪ್ರಯಾಣ ನಡೆಸುತ್ತಿದ್ದು ಓಮಿನಿ ಕಾರಿನಲ್ಲಿ ಪ್ರಯಾಣ ನಡೆಸುತ್ತಿದ್ದವರು ಗಂಭೀರಗಾಯಗಳಿಗೆ ತುತ್ತಾಗಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಪಾಸಣೆಗಾಗಿ ಗರ್ಭಿಣಿ ರೋಜಾ ಹಾಗೂ ಚೇತನ ಅವರನ್ನು ಕರೆದುಕೊಂಡು ಹೋಗಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಕುರಿತು ಶಿವಮೊಗ್ಗದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈಜಲು ತೆರಳಿದ್ದ ಯುವಕ ಸಾವು :

ಶಿವಮೊಗ್ಗದ ಸೂಳೆಬೈಲ್ ನಿವಾಸಿ ರಿಹಾನ್ ಇತ್ತೀಚೆಗಷ್ಟೇ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದ. ಆತನಿಗೆ ಇಂದು ಪರೀಕ್ಷೆ ಇತ್ತು ಆದರೆ ವಿಧಿಯಾಟವೇ ಬೇರೆ ರೀತಿಯಲ್ಲಿ ನಡೆದಿದೆ. ತನ್ನ ಸ್ನೇಹಿತರೊಂದಿಗೆ ಈಜಲು ಶಿವಮೊಗ್ಗ ನಗರದ ಹೊರವಲಯವಾದ ಪುಟ್ಟಪ್ಪನ ಕ್ಯಾಂಪ್ ಬಳಿ ತುಂಗಾನದಿಗೆ ಈಜಲು ತೆರಳಿದ್ದ ಅಬ್ದುಲ್ ರಿಹಾನ್ ಈಜುವ ಸಮಯದಲ್ಲಿ ನದಿಯ ಆಳವನ್ನು ಅರಿಯದೆ ಮುಳುಗಿದ್ದಾನೆ. ಈ ಸಮಯದಲ್ಲಿ ಆತನು ಮೇಲೆ ಬರಲಾಗುತ್ತಿಲ್ಲವೆಂದು ಸನ್ನೆ ಮಾಡುತ್ತಿದ್ದರೂ ಕೂಡ ಉಳಿದ ಗೆಳೆಯರು ಆತ ತಮಾಷೆ ಮಾಡುತ್ತಿದ್ದಾನೆಂದೆನಿಸಿ ಸುಮ್ಮನಾಗಿದ್ದಾರೆ. ಕೆಲ ಸಮಯ ಕಳೆದರೂ ಕೂಡ ಆತ ಮೇಲೆ ಬಾರದೇ ಇರುವುದನ್ನು ಕಂಡ ಗೆಳೆಯರು ಆತಂಕದಿಂದ ಬಂದು ರಿಹಾನ್ ನ ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಕುಟುಂಬವರ್ಗದವರು ಪೊಲೀಸರಿಗೆ ಮಾಹಿತಿ ನೀಡಿ ಅಗ್ನಿಶಾಮಕದಳಕ್ಕೆ ತಿಳಿಸಿ ಸ್ಥಳಕ್ಕೆ ಧಾವಿಸಿದ್ದಾರೆ.


ಹೈಬ್ರೀಡ್ ಪಾರ್ಕ್ ಮೂಲಕ ವಿದ್ಯುತ್ ಉತ್ಪಾದನೆ : 

ರಾಜ್ಯದಲ್ಲಿ ಹೈಬ್ರೀಡ್ ಪಾರ್ಕ್ ಮೂಲಕ 1,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಶಿವಮೊಗ್ಗದಲ್ಲಿ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಹೈಬ್ರೀಡ್ ಪಾರ್ಕ್ ನಿರ್ಮಾಣ ಮಾಡಬೇಕೆನ್ನುವ ಯೋಜನೆ ಕೈಗೊಂಡಿದ್ದು, ಸೊಲಾರ್ ಮತ್ತು ವಿಂಡ್ ನ್ನು ಒಳಗೊಂಡ ಹೈಬ್ರೀಡ್ ಪಾರ್ಕ್ ನಿರ್ಮಾಣಕ್ಕೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ಆರಂಭವಾಗಿದೆ ಎಂದರು.