ಚಿಕ್ಕಮಗಳೂರು : ದ್ವಿಚಕ್ರ ವಾಹನದಲ್ಲಿ ಪತ್ತೆಯಾದ ಹಾವು

ವ್ಯಕ್ತಿಯೋರ್ವರ ದ್ವಿಚಕ್ರ ವಾಹನದಲ್ಲಿ ಸಿಲುಕಿದ್ದ ಹಾವೊಂದನ್ನು ಸ್ನೇಕ್ ನರೇಶ್ ಸೆರೆ ಹಿಡಿದಿದ್ದಾರೆ. ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಶಿವಪ್ರಸಾದ್ ಅವರ ಸ್ಕೂಟಿಯಲ್ಲಿ ಹಾವು ಸೇರಿಕೊಂಡಿತ್ತು, ಇದರಿಂದಾಗಿ ಆತಂಕಗೊಂಡ ಅವರು ಹಾವನ್ನು ಸುರಕ್ಷಿತವಾಗಿ ಹೊರತೆಗೆಯುವ ಸಲುವಾಗಿ ಸ್ನೇಕ್ ನರೇಶ್ ಅವರಿಗೆ ಕರೆ ಮಾಡಿ ಈ ಕುರಿತು ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ನರೇಶ್ ಸ್ಕೂಟಿಯಲ್ಲಿದ್ದ ಹಾವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಕೂಟಿಯ ಕೆಲ ಭಾಗಗಳನ್ನು ತೆಗೆದು ಕಾರ್ಯಾಚರಣೆ ಆರಂಭಿಸಿದ ಸ್ನೇಕ್ ನರೇಶ್, ಒಳಸೇರಿದ್ದ ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಹಾರುಂಬೆ ಹಾವು ವಾಹನದಲ್ಲಿ ಪತ್ತೆಯಾಗಿದ್ದು ಅದನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಪ್ರದೇಶಕ್ಕೆ ಬಿಡುವಲ್ಲಿ ಸ್ನೇಕ್ ನರೇಶ್ ಯಶಸ್ವಿಯಾದರು. 

ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಂದಾಯ ಅದಾಲತ್ : 

ಚಿಕ್ಕಮಗಳೂರು : ಬಾಕಿ ಇರುವ ಪಹಣಿ ತಿದ್ದುಪಡಿ ಹಾಗೂ ವಿಲೇವಾರಿ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಂದಾಯ ಅದಾಲತ್ ನ್ನು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜನೆ ನಡೆಸಲಾಗಿದೆ. ಚಿಕ್ಕಮಗಳೂರು ಉಪವಿಭಾಗ ವಾಪ್ತಿಯ ಶೃಂಗೇರಿ, ಕೊಪ್ಪ, ಕಳಸ, ಮೂಡಿಗೆರೆ, ಚಿಕ್ಕಮಗಳೂರು ತಾಲೂಕುಗಳಲ್ಲಿ ಬಾಕಿಯಿರುವ ಪಹಣಿ ತಿದ್ದುಪಡಿ ವಿಲೇವಾರಿ ಕುರಿತಂತೆ ಹಿರಿಯ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮವನ್ನು ನಡೆಸಿ, ಆ ಸಂದರ್ಭಗಳಲ್ಲಿ 11ಇ, ಆರ್.ಟಿ.ಸಿ ತಿದ್ದುಪಡಿ ಪ್ರಕರಣಗಳನ್ನು ವಿಲೇವಾರಿ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಕೊಪ್ಪ ತಾಲೂಕಿನಲ್ಲಿ ದಿನಾಂಕ 17.06 ರಂದು, ಕಳಸದ ತಾಲೂಕು ಕಛೇರಿಯಲ್ಲಿ ದಿನಾಂಕ 21.06 ರಂದು, ಚಿಕ್ಕಮಗಳೂರಿನ ಕಳಸಾಪುರ ನಾಡಕಛೇರಿಯಲ್ಲಿ ದಿನಾಂಕ 23.06. ರಂದು ಹಾಗೂ ಶೃಂಗೇರಿಯ ತಾಲೂಕು ಕಛೇರಿಯಲ್ಲಿ 28.06. ರಂದು ಕಂದಾಯ ಅದಾಲತ್ ನಡೆಯಲಿದೆ. 

ಶಿವಮೊಗ್ಗ :

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಯುವಕ :

ಶಿವಮೊಗ್ಗದ ಹೊಳೆಹೊನ್ನೂರು ಸದಾಶಿವಪುರದ ಹಕ್ಕಿ ಪಿಕ್ಕಿ ಕ್ಯಾಂಪ್ ನಲ್ಲಿ ಈ ದುರ್ಘಟನೆ ನಡೆದಿದ್ದು ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಬಾಲಕಿ ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಯುವಕ ಅತ್ಯಾಚಾರ ಎಸಗಿ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ ಹಾಗೂ ಈ ಕುರಿತಾಗಿ ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಬಾಲಕಿ ಗಂಭೀರ ಆರೋಪ ಮಾಡಿದ್ದಾಳೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ತಮಗೆ ನ್ಯಾಯ ಒದಗಿಸಬೇಕೆಂದು ಆಕೆಯ ಅಜ್ಜಿ ಕೋರಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಯು ಸಂಪೂರ್ಣ ತನಿಖೆಯ ನಂತರವಷ್ಟೇ ಲಭ್ಯವಾಗಬೇಕಿದೆ.

ಕೊಡಗು :

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ 

ಕುಟುಂಬ ಸದಸ್ಯರೊಂದಿಗೆ ಖಾಸಗೀ ಭೇಟಿ ನಿಮಿತ್ತ ಕೊಡಗಿಗೆ ಆಗಮಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ವಿರಾಜಪೇಟೆಯ ಶಾಸಕರಾದ ಕೆ,ಜಿ ಬೋಪಯ್ಯ ಭೇಟಿ ಮಾಡಿ ಜಿಲ್ಲೆಗೆ ಅವಶ್ಯವಿರುವ ಹಲವು ಅಭಿವೃಧ್ದಿ ಕಾರ್ಯಗಳ ಕುರಿತು ಚರ್ಚೆನಡೆಸಿದರು.ಸದಾ ಪ್ರವಾಸಿಗರಿಂದ ತುಂಬಿರುವ ಕೊಡಗಿಗೆ ಉತ್ತಮ ಹೆದ್ದಾರಿಗಳ ಅವಶ್ಯಕತೆಯಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಸಲುವಾಗಿ ಹೆಚ್ಚಿನ ಸಹಕಾರವನ್ನು ನೀಡುವಂತೆ ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ವಿರಾಜಪೇಟೆ ಶಾಸಕರಾದ ಕೆ.ಜಿ ಬೋಪಯ್ಯ ಕೋರಿದರು. ಈ ಕುರಿತು ಮಡಿಕೇರಿಯ ಖಾಸಗೀ ರೆಸಾರ್ಟ್ನಲ್ಲಿ ತಂಗಿದ್ದ ಕೇಂದ್ರ ಸಚಿವರೊಂದಿಗೆ ಸುದೀರ್ಘ ಒಂದು ಗಂಟೆಗಳ ಕಾಲ ಚರ್ಚೆನಡೆಸಿದ ಅವರು ಈ ಭಾಗಕ್ಕೆ ಅವಶ್ಯವಿರುವ ಅನೇಕ ವಿಷಯಗಳ ಕುರಿತು ಚರ್ಚಿಸಿದರು. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಈ ವಿಷಯಗಳ ಕುರಿತಾಗಿ ಫ್ರಸ್ತಾವನೆ ಸಲ್ಲಿಕೆಯಾದ ತಕ್ಷಣದಲ್ಲಿ ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 

ಕೊಡಗು : ಬೃಹದಾಕಾರದ ಕಾಳಿಂಗ ಸರ್ಪ ಸೆರೆ

15 ಅಡಿ ಉದ್ದದ, ಸುಮಾರು 50 ಕೆ.ಜಿ ತೂಕವಿರುವ ಬೃಹತ್ ಗಾತ್ರದ ಹೆಬ್ಬಾವನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂನ ಹಾರಂಗಿ‌ ಡ್ಯಾಂ ಬಳಿ ಸೆರೆ ಹಿಡಿಯಲಾಗಿದೆ. ಈ ಹಿಂದೆ ಹೆಬ್ಬಾವೊಂದು ಜಲಾಯಶದ ಸಮೀಪದಲ್ಲಿ ಕಂಡು ಕಣ್ಮರೆಯಾಗಿತ್ತು ಎಂಬ ಸುದ್ದಿ ಹಬ್ಬಿತ್ತು, ಆ ಬಳಿಕದಲ್ಲಿ ಮತ್ತೆ ಹೆಬ್ಬಾವು ಪತ್ತೆಯಾಗಿತ್ತು, ಈ ನಿಟ್ಟಿನಲ್ಲಿ ಹೆಬ್ಬಾವನ್ನು ಕಂಡ ಸಾರ್ವಜನಿಕರು ಉರಗ ತಜ್ಞರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿದಿದ್ದಾರೆ.

ಪಿಕಪ್ ಕಳ್ಳತನ ನಡೆಸಿದ್ದ ಇಬ್ಬರು ಕಳ್ಳರು ಅಂದರ್ : 

ಪಿಕಪ್ ವಾಹನವನ್ನು ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿಯ ನಾಪೋಕ್ಲುವಿನಲ್ಲಿ ಈ ಹಿಂದೆ ಕಳ್ಳತನ ನಡೆದಿತ್ತು. ಪ್ರಕರಣವನ್ನು ಬೆನ್ನಟ್ಟಿ ಕಾರ್ಯಾಚರಣೆ ಆರಂಭಿಸಿದ್ದ ಕೊಡಗು ಡಿ.ಸಿ.ಆರ್.ಬಿ ಹಾಗೂ ನಾಪೋಕ್ಲು ಪೊಲೀಸರು ರಂಷಾನ್ ಹಾಗೂ ಮೊಹಮ್ಮದ್ ಸಮೀರ್ ಎಂಬ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.