ಚಿಕ್ಕಮಗಳೂರು : 

ಮಕ್ಕಳಿದ್ದ ವೈಟ್ ಬೋರ್ಡ್ ವಾಹನಕ್ಕೆ ಇನೋವಾ ಕಾರ್ ಡಿಕ್ಕಿ 

ಶೃಂಗೇರಿಯ ಹೊರವಲಯವಾದ ಶಿಡ್ಲೆ ಗಣಪತಿ ದೇವಸ್ಥಾನದ ಬಳಿ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇನೋವಾ ಕಾರ್ ಒಂದು ಗುದ್ದಿದ ಪರಿಣಾಮ ಶಾಲಾ ಮಕ್ಕಳಿದ್ದ ಕಾರ್ ಪಲ್ಟಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಶಿಡ್ಲೆ ಗಣಪತಿ ದೇವಸ್ಥಾನದ ಬಳಿ ಶಾಲಾ ಮಕ್ಕಳಿದ್ದ ಸ್ಕೂಲ್ ಟ್ರಿಪ್ ಓಮಿನಿ ಕಾರಿಗೆ ಇನೋವಾ ಕಾರ್ ಗುದ್ದಿದ ಪರಿಣಾಮ ಒಮಿನಿ ಕಾರ್ ಪಲ್ಟಿಯಾಗಿದ್ದು ಅದೃಷ್ಟವಶಾತ್ ವಾಹನದಲ್ಲಿದ್ದ ಮಕ್ಕಳು ಯಾವುದೇ ಅಪಾಯಕ್ಕೊಳಗಾಗದೆ ಪಾರಾಗಿದ್ದಾರೆ. 

ಆನೆದಂತ ಮಾರಾಟ ನಡೆಸಲು ಯತ್ನಿಸುತ್ತಿದ್ದವರ ಬಂಧನ :  

ಚಿಕ್ಕಮಗಳೂರಿನಿಂದ ಕೊಳ್ಳೇಗಾಲಕ್ಕೆ ಕಾರೊಂದರಲ್ಲಿ ನಾಲ್ವರು ಅಕ್ರಮವಾಗಿ ಆನೆ ದಂತದ ಸಾಗಾಟ ನಡೆಸುತ್ತಿದ್ದರು ಈ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಐಡಿ ವಿಶೇಷ ಸಂಚಾರಿ ದಳದ ಪೊಲೀಸರು ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಆನೆ ದಂತದ ಸಮೇತ ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕೊಳಗಾವೆ ಪ್ರೀತಮ್, ಜಾಗರ ಜಗದೀಶ, ಹಾಗೂ ಪುನೀತ್ ಎಂದು ಗುರುತಿಸಲಾಗಿದೆ ಮತ್ತು ಈ ಸಂದರ್ಭದಲ್ಲಿ ಎಸ್ಕೇಪ್ ಆದ ಹೇಮಂತ ಎಂಬಾತನಿಗಾಗಿ ಪೊಲೀಸರು ಬಲೆ ಬೀಸಿದ್ದು ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿಕ್ಕಮಗಳೂರಿನ ಬುಲ್ಡೋಜರ್ ಬಾಬಾ :

ಅಕ್ರಮವಾಗಿ ಗೋಮಾಂಸವನ್ನು ಮಾರಾಟ ನಡೆಸಲು ತಯಾರಿ ನಡೆಸುತ್ತಿದ್ದ ಟಿಪ್ಪು ನಗರದ ಮನೆಗೆ ನಗರಸಭಾ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮನೆಯಲ್ಲಿ ಗೋಮಾಂಸವನ್ನು ಪತ್ತೆ ಮಾಡಿದ್ದಾರೆ. ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗೋಮಾಂಸವನ್ನು ಹಾಗೂ ಇಬ್ಬರು ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ರೀತಿಯ ಚಟುವಟಿಕೆಗಳನ್ನು ಮುಂಬರುವ ದಿನಗಳಲ್ಲಿ ನಡೆಸಿದ್ದೆ ಆದಲ್ಲಿ ಕಟ್ಟಡವನ್ನು ಕೆಡಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಿಯಮ ಮೀರಿ ಭೂಮಿ ಮಂಜೂರು ; ಮೂವರ ಅಮಾನತು

ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ವ್ಯಾಪ್ತಿಯ ಸರ್ವೇ ನಂಬರ್ 168 ರಲ್ಲಿ 11 ಜನರಿಗೆ 4.38 ಎಕರೆ ಜಾಗವನ್ನು ಕಾನೂನಿನ ವಿರುದ್ಧವಾಗಿ ಮಂಜೂರು ಮಾಡಲಾಗಿತ್ತು, ಈ ಹಿನ್ನೆಲೆ ವ್ಯಕ್ತಿಯೋರ್ವರು ದೂರು ಸಲ್ಲಿಸಿದ್ದರು. ಈ ಸಂಬಂಧ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮಂಜುನಾಥ್ ಎಂಬುವವರು ಸಲ್ಲಿಸಿದ ದೂರಿನನ್ವಯ ತನಿಖೆ ನಡೆಸಿದ ಅಧಿಕಾರಿಗಳು ನಿಯಮ ಮೀರಿ ನೌಕರರು ಜಾಗ ಮಂಜೂರು ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಜಾಗ ಮಂಜೂರು ಮಾಡುವ ಸಂದರ್ಭದಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಹೆಚ್.ಸಿ. ಹಿಂದಿನ ರಾಜಸ್ವ ನಿರೀಕ್ಷಕರು, ಎ.ಎನ್ ಗಿರೀಶ್ ಗ್ರಾಮ ಲೆಕ್ಕಿಗರು ಹಾಗೂ ಹಿಂದಿನ ಗ್ರಾಮ ಲೆಕ್ಕಿಗರಾಗಿದ್ದ ಗೀತಾ ಬಿ.ವೈ ಈ ಮೂವರನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದಾರೆ.


ದತ್ತ ಪೀಠಕ್ಕೆ ತೆರಳುವ ರಸ್ತೆ ಕುಸಿತ : 

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಭಾಗದಲ್ಲಿ ಸಂಭವಿಸಿದ ಮಳೆಗೆ ದತ್ತಪೀಠದ ರಸ್ತೆಮಾರ್ಗ ಕುಸಿತಗೊಂಡಿದೆ. ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯು, ಈ ಮಾರ್ಗದಲ್ಲಿ ಓಡಾಡುವ ಪ್ರವಾಸಿಗರನ್ನು ಹಾಗೂ ದಾರಿಹೋಕರನ್ನು ಆತಂಕಕ್ಕೀಡುಮಾಡಿದೆ. ಇನ್ನೂ ಆರಂಭದ ಮಳೆಯಲ್ಲಿ ಈ ರೀತಿಯ ತೊಂದರೆಗಳುಂಟಾದರೆ ಮುಂದೆ ಸಂಭವಿಸುವ ಮಳೆಗೆ ಈ ರಸ್ತೆಯ ಪರಿಸ್ಥಿತಿ ಏನು ಎಂಬಂತಾಗಿದೆ. ಚಿಕ್ಕಮಗಳೂರಿನ ದತ್ತಪೀಠದ ರಸ್ತೆ ಅರ್ಧ ಭಾಗಕ್ಕೆ ಕುಸಿತಗೊಂಡಿದೆ, ಈ ರಸ್ತೆಯ 40-50 ಅಡಿ ಆಳದ ಮಣ್ಣು ಕುಸಿತಗೊಂಡ ಪರಿಣಾಮ ರಸ್ತೆ ದುರಸ್ಥಿ ಹಾಗೂ ವಾಹನ ಸಂಚಾರ ಎರಡಕ್ಕೂ ಕ್ಲಿಷ್ಟಕರವಾದ ಸನ್ನಿವೇಶ ಎದುರಾಗಿದೆ. ದತ್ತಾತ್ರೇಯ ಪೀಠಕ್ಕೆ ತೆರಳಲು ಇರುವ ಒಂದೇ ಮುಖ್ಯ ಮಾರ್ಗವಾದ ಈ ದಾರಿಯು ಕುಸಿದಿರುವುದು ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ. 

ಮುಸ್ಲೀಮರ ಧಾರ್ಮಿಕ ಸ್ಥಳಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು : 

ಚಿಕ್ಕಮಗಳೂರು ಹೊರವಲಯವಾದ ಆದಿಶಕ್ತಿನಗರದಲ್ಲಿ ಈ ಘಟನೆ ನಡೆದಿದ್ದು, ಮಸೀದಿಯಿಂದ ಕೆಲವೇ ದೂರದಲ್ಲಿರುವ ಮುಸ್ಲೀಮರ ಧಾರ್ಮಿಕ ನಂಬಿಕೆ ಹೊಂದಿದ್ದ ಮರದ ಕಟ್ಟೆ ಹಾಗೂ ಅವರ ಪೂಜಾ ಸಾಮಾಗ್ರಿಗಳಿಗೆ ಯಾರೋ ದುಷ್ಕರ್ಮಿಗಳು ನಿನ್ನೆ ತಡರಾತ್ರಿಯ ವೇಳೆಯಲ್ಲಿ ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯಲ್ಲಿ ಇಸ್ಲಾಂ ಧರ್ಮೀಯರು ಪೂಜಿಸುತ್ತಿದ್ದ ಕುರಾನ್, ಕಿಟ್ಟ ಹಾಗೂ ಅವರ ಪೂಜಾ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇದಲ್ಲದೇ ಅಲ್ಲೇ ಪಕ್ಕದಲ್ಲಿದ್ದ ಹಸಿರು ಧ್ವಜಗಳು ಕೂಡ ಸುಟ್ಟು ಕರಕಲಾಗಿದೆ. ವಾರ್ಷಿಕ ಕುರಾನ್ ಸಮಯದಲ್ಲಿ ಈ ಮರಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು ಎನ್ನಲಾಗಿದೆ. ಘಟನಾ ಸಂಬಂಧ ಇಸ್ಲಾಂ ಧರ್ಮೀಯರು ತೀವ್ರ ಆಕ್ರೋಶ ಹೊರಹಾಕಿದ್ದು ಈ ಕೃತ್ಯ ಎಸಗಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಮುಸ್ಲೀಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಈ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಕಲೆಹಾಕಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. 

ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥ :

ಚಿಕ್ಕಮಗಳೂರಿನ ಟಿಪ್ಪುನಗರ ಹಾಗೂ ಮಾರ್ಕೆಟ್ ರಸ್ಥೆಗೆ ಹೊಂದಿಕೊಂಡಂತಿರುವ ಶಾಂತಿನಗರದಲ್ಲಿ ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರ್ಪಡೆಗೊಂಡ ಪರಿಣಾಮ ನೀರಿಗೆ ಸಣ್ಣ ಗಾತ್ರದ ಹುಳು ಹಾಗೂ ಮಣ್ಣು ಮಿಶ್ರಣಗೊಂಡು ಈ ಭಾಗದ ಮನೆಗಳಿಗೆ ಪೂರೈಕೆಯಾಗಿದೆ ಎನ್ನಲಾಗಿದೆ ಹಾಗೂ ಒಂದು ವಾರದಿಂದ ಇದನ್ನು ಕುಡಿದ ಜನರು ವಾಂತಿ ಭೇದಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಲುಷಿತ ನೀರು ಸೇವಿಸಿದ 09 ಮಕ್ಕಳು ಸೇರಿದಂತೆ 30 ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಕಳೆದೊಮದು ವಾರದಿಂದ ಪೂರೈಕೆಯಾದ ನೀರಿನಲ್ಲಿ ಕಲುಷಿತ ಅಂಶಗಳು ಮಿಶ್ರಿತವಾದ ಪರಿಣಾಮ ಅನೇಕರು ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಇದರಲ್ಲಿ ಬಹುತೇಕ ಮಕ್ಕಳಿದ್ದಾರೆ ಎಂಬ ಮಾಹಿತಿ ದೊರೆತಿದೆ. ವಾರ್ಡಿನ ಯಾರಿಗಾದರೂ ತೀವ್ರತರಹದ ಆರೋಗ್ಯ ಸಮಸ್ಯೆ ಸಂಭವಿಸಿದರೆ ಅದಕ್ಕೆ ನಗರಸಭೆ ಅಧಿಕಾರಿಗಳ ನಿರ್ಲಕ್ಷವೇ ಬಹುಮುಖ್ಯ ಕಾರಣವಾಗಿರುತ್ತದೆ. ಈ ವ್ಯಾಪ್ತಿಗೆ ಕಲುಷಿತ ನೀರು ಪೂರೈಕೆಯಾಗುತ್ತಿರುವುದನ್ನು ತಡೆದು ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕೆಂದು ಸಾರ್ವಜನಿಕರು ಕೋರಿದ್ದಾರೆ. 


ಶಿವಮೊಗ್ಗ : ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥ

ಶಿವಮೊಗ್ಗ ಜಿಲ್ಲೆಯ ಮೈದೊಳಲು ಗ್ರಾಮದ ಎರಡು ಬೀದಿಯಲ್ಲಿ ಒಂದೆರಡು ದಿನದಿಂದ ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗಿದ್ದು ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಎಂ. ವಿ. ಅಶೋಕ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಟ್ಯಾಂಕಿಯಿಂದ ನಲ್ಲಿಗಳಿಗೆ ನೀರು ಪೂರೈಸದಂತೆ ಅಧಿಕಾರಿಗಳು ತಿಳಿಸಿದ್ದು, ಗ್ರಾಮದ ನೀರಿನ ಮೂಲಗಳ ಕೊಳವೆ ಬಾವಿಗಳ ನೀರು ಸಂಗ್ರಹಿಸಿ ಪರೀಕ್ಷೆಗೆ ಕಳಿಸುವಂತೆ ಗ್ರಾಮ ಪಂಚಾಯಿತಿ ಪಿಡಿಒಗೆ ಸೂಚಿಸಲಾಗಿದೆ. ರೋಗಿಗಳ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ಆರೋಗ್ಯ ಸಿಬ್ಬಂದಿಯಿಂದ ಮಾಹಿತಿಯನ್ನು ತಂಡ ಪಡೆಯಿತು.

ವಿಕಾಸ ತೀರ್ಥ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡ ಗೃಹಸಚಿವ

ತೀರ್ಥಹಳ್ಳಿ : ಪ್ರಧಾನಿ ನರೇಂದ್ರ ಮೋದಿ ಭಾರತ ದೇಶವನ್ನು ವಿಶ್ವ ಗುರುವನ್ನಾಗಿಸುತ್ತ ಸದಾ ಕಾರ್ಯ ನಿರ್ವಹಿಸುತ್ತಿದ್ದು ಇವರ ಈ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಸಲುವಾಗಿ ಮಂಗಳವಾರ ತೀರ್ಥಹಳ್ಳಿಯಲ್ಲಿ ವಿಕಾಸ ತೀರ್ಥ ಬೈಕ್‌ ಭರ್ಜರಿಯಾಗಿ ನೆಡೆಯಿತು. ಈ ರ್ಯಾಲಿಯಲ್ಲಿ ರಾಜ್ಯದ ಗೃಹ ಸಚಿವರಾದ ಆರಗಜ್ಞಾನೇಂದ್ರ ಕೂಡ ಭಾಗಿಯಾಗಿದ್ದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ಯಶಸ್ವಿಯಾಗಿ ನಡೆಯಿತು.