ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮುಸ್ಲಿಂ ಧರ್ಮೀಯರು ಪೂಜಿಸುತ್ತಿದ್ದ ಮರವೊಂದರ ಕಟ್ಟೆಗೆ ದುಷ್ಕರ್ಮಿಗಳು ದಾಳಿ ನಡೆಸಿ ಆ ಜಾಗವನ್ನು ಹಾಗೂ ಅವರ ಪೂಜಾ ಸಾಮಾಗ್ರಿಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ವರದಿಯಾಗಿದೆ. 

ಚಿಕ್ಕಮಗಳೂರು ಹೊರವಲಯವಾದ ಆದಿಶಕ್ತಿನಗರದಲ್ಲಿ ಈ ಘಟನೆ ನಡೆದಿದ್ದು, ಮಸೀದಿಯಿಂದ ಕೆಲವೇ ದೂರದಲ್ಲಿರುವ ಮುಸ್ಲೀಮರ ಧಾರ್ಮಿಕ ನಂಬಿಕೆ ಹೊಂದಿದ್ದ ಮರದ ಕಟ್ಟೆ ಹಾಗೂ ಅವರ ಪೂಜಾ ಸಾಮಾಗ್ರಿಗಳಿಗೆ ಯಾರೋ ದುಷ್ಕರ್ಮಿಗಳು ನಿನ್ನೆ ತಡರಾತ್ರಿಯ ವೇಳೆಯಲ್ಲಿ ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಘಟನೆಯಲ್ಲಿ ಇಸ್ಲಾಂ ಧರ್ಮೀಯರು ಪೂಜಿಸುತ್ತಿದ್ದ ಕುರಾನ್, ಕಿಟ್ಟ ಹಾಗೂ ಅವರ ಪೂಜಾ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇದಲ್ಲದೇ ಅಲ್ಲೇ ಪಕ್ಕದಲ್ಲಿದ್ದ ಹಸಿರು ಧ್ವಜಗಳು ಕೂಡ ಸುಟ್ಟು ಕರಕಲಾಗಿದೆ. ವಾರ್ಷಿಕ ಕುರಾನ್ ಸಮಯದಲ್ಲಿ ಈ ಮರಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು ಎನ್ನಲಾಗಿದೆ. ಘಟನಾ ಸಂಬಂಧ ಇಸ್ಲಾಂ ಧರ್ಮೀಯರು ತೀವ್ರ ಆಕ್ರೋಶ ಹೊರಹಾಕಿದ್ದು ಈ ಕೃತ್ಯ ಎಸಗಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಮುಸ್ಲೀಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಈ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಕಲೆಹಾಕಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. 

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಸ್ಥಳ ಪರಿಶೀಲನೆ ನಡೆಸಿದ್ದಾರೆ, ಈ ಸಂಬಂಧ ಠಾಣೆಗೆ ತೆರಳಿ ದೂರು ದಾಖಲು ಮಾಡಿರುವ ಮುಸ್ಲಿಮರು ಆರೋಪಿಗಳ ಬಂಧನಕ್ಕಾಗಿ ಆಗ್ರಹಿಸಿದ್ದಾರೆ.