ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಪುಟ್ಟ ಬಾಲಕಿಗೆ ಚಾಕಲೇಟ್ ನೀಡುವುದಾಗಿ ಆಸೆ ತೋರಿಸಿ ಮನೆಗೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ನ್ಯಾಯಾಲಯವು ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಕಂದಕಕ್ಕೆ ಉರುಳಿದ ಕಾರು ; ಮೂವರಿಗೆ ಗಾಯ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಲಿಂಗರಾಜ್ ಅಲಿಯಾಸ್ ನವೀನ್ ಎಂಬ 18 ವರ್ಷದ ಯುವಕ 2019 ರಲ್ಲಿ ಆರು ವರ್ಷದ ಪುಟ್ಟ ಬಾಲಕಿಯೋರ್ವಳಿಗೆ ಮನೆಗೆ ಕರೆದುಕೊಂಡು ಹೋಗಿ ಚಾಕಲೇಟ್ ನೀಡುವುದಾಗಿ ಕರೆದುಕೊಂಡು ಹೋಗಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದ. ಘಟನಾ ಸಂಬಂಧ ಶಿವಮೊಗ್ಗದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 

ಈ ಬಗ್ಗೆ ವಿಚಾರಣೆ ನಡೆಸಿದ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ.ಎಸ್ ಮೋಹನ್ ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 50,000 ರೂಪಾಯಿ ಮೊತ್ತದ ದಂಡವಿಧಿಸಿದ್ದಾರೆ. ಒಂದುವೇಳೆ ಆರೋಪಿಯ ಬಳಿ ದಂಡ ಕಟ್ಟಲು ಆಗದೇ ಹೋದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳುಗಳಕಾಲ ಸಾದಾ ಕಾರಾಗೃಹ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ವಾದ ಮಂಡನೆ ಮಾಡಿದರು.

ಈ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗುವವರ ಮೇಲೆ ಸೂಕ್ತ ಹಾಗೂ ನಿರ್ದಾಕ್ಷಿಣ್ಯ ಕಾನೂನು ಕ್ರಮಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಾಳೆಹೊನ್ನೂರಿನ ಮಾಗೋಡು ಬಳಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು : ಪಿಕಪ್ ಹಾಗೂ ಟಾಟಾ ವಾಹನದ ನಡುವೆ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರಿಗೆ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಮಾಗೋಡು ಬಳಿ ಈ ಅಪಘಾತ ಸಂಭವಿಸಿದ್ದು ಹುಣಸೇಹಳ್ಳಿಯಿಂದ ಹಂದಿಗಳನ್ನು ಸಾಗಣೆ ನಡೆಸುತ್ತಿದ್ದ ಪಿಕಪ್ ವಾಹನ ಹಾಗೂ ಟಾಟಾ ವಾಹನದ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಇಬ್ಬರು ಗಾಯಾಳುಗಳಾಗಿದ್ದಾರೆ. 

ಎರಡೂ ವಾಹನಗಳು ನಜ್ಜುಗುಜ್ಜಾಗಿದ್ದು ಅಪಘಾತದಲ್ಲಿ ಗಾಯಕ್ಕೀಡಾದವರನ್ನು ಚಿಕ್ಕಮಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಜಮಾವಣೆಗೊಂಡ ಸ್ಥಳೀಯರು ಪೆಟ್ಟಾದವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕಾರ ನೀಡಿದ್ದಾರೆ.