ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಗೂಡ್ಸ್ :
ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನ ಮಲಯಮಾರುತದ ಬಳಿ ಈ ಅವಘಡ ಸಂಭವಿಸಿದ್ದು ಗೂಡ್ಸ್ ವಾಹನದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ದೊರಕಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ. ವಾಹನದಲ್ಲಿದ್ದ ಮೂವರು ಉತ್ತರಪ್ರದೇಶ ಮೂಲದವರಾಗಿದ್ದು ಚಾಲಕನ ನಿಯಂತ್ರಣ ತಪ್ಪಿ ಗೂಡ್ಸು ಪಲ್ಟಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
MPK ಕಾಂಗ್ರೆಸ್ ಗೆ ಬರುವುದಕ್ಕೆ ನಮ್ಮ ವಿರೋಧವಿದೆ :
ಚಿಕ್ಕಮಗಳೂರು : ಕಾಂಗ್ರೆಸ್ ನ ನಾಯಕಿ, ಮಾಜಿ ಸಚಿವೆ ಮೋಟಮ್ಮ ಬರಲಿರುವ ವಿಧಾನಸಭಾ ಚುನಾವಣೆ ಕುರಿತಾಗಿ ಮತ್ತು ಪಕ್ಷದ ಕೆಲವರಿಂದ ತಮಗಾಗಿರುವ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಎಂ. ಪಿ ಕುಮಾರಸ್ವಾಮಿ ಸೇರ್ಪಡೆ ಕುರಿತು ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವೆ ಮೋಟಮ್ಮ ವ್ಯಕ್ತಿ ಸರಿಯಿಲ್ಲ ಎಂದರೂ ಅವರೊಂದಿಗೆ ಸ್ನೇಹ ನಡೆಸುವುದು ಸಮಂಜಸವಲ್ಲ ಅಂತೆಯೇ ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಗೆ ನನ್ನ ವಿರೋಧವಿದೆ.ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಿದರೆ ಪಕ್ಷದ ಗೌರವ ಎಲ್ಲಿಗೆ ಹೋಗುತ್ತದೆ MPK ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದಕ್ಕೆ ನನ್ನ ವಿರೋಧವಿದೆ ಎಂದು ಆಕ್ರೋಶ ಹೊರಹಾಕಿದರು.
ಕೆಲವರು ಆ ಸಂದರ್ಭದಲ್ಲಿ ಮೇವಿನ ಆಸೆಗಾಗಿ ಕಾಂಗ್ರೆಸ್ ನಿಂದ ಬಿಜೆಪಿ ಸೇರಿದರು ಅಂತಹ ಸಾಲಿನಲ್ಲಿರುವವರು ಪಕ್ಷಕ್ಕೆ ಎಂದಿಗೂ ಬೇಡ. ಕುಮಾರಸ್ವಾಮಿಗೆ ಟಿಕೆಟ್ ನೀಡುವ ಬದಲು ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದ ಅನೇಕರಿದ್ದಾರೆ, ಅವರ ಬದಲು ಬೂತ್ ಕಮಿಟಿ ಸದಸ್ಯರಿಗೆ ಟಿಕೆಟ್ ನೀಡಲಿ ಅವರ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ ಎಂದರು.
ಅಕ್ರಮ ಗೋಮಾಂಸ ಸಾಗಣೆ ಮೂವರ ಬಂಧನ :
ಕೊಪ್ಪ : ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಮುವರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ - ನರಸಿಂಹರಾಜಪುರ ಮುಖ್ಯ ರಸ್ತೆಯಲ್ಲಿ ಇಂದು ಬೆಳಗ್ಗೆ ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ನರಸಿಂಹರಾಜಪುರದ ಕಡೆಯಿಂದ ಕೊಪ್ಪದ ಕಡೆಗೆ ಎರಡು ಸ್ಕೂಟಿ ಒಂದರ ಹಿಂದೊಂದು ಬರುತ್ತಿದ್ದು ಈ ಸಂದರ್ಭದಲ್ಲಿ ಪೊಲೀಸರು ತಪಾಸಣೆಗೆಂದು ವಾಹನವನ್ನು ಅಡ್ಡಗಟ್ಟಿದಾಗ ಸ್ಕೂಟಿಯ ಮುಂಭಾಗದಲ್ಲಿನ ಫೂಟ್ ರೆಸ್ಟ್ ನಲ್ಲಿ ಪ್ಲಾಸ್ಟಿಕ್ ಚೀಲ ಕಂಡು ಬಂದಿರುತ್ತದೆ. ಪೊಲೀಸರು ಚೀಲವನ್ನು ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಗೋಮಾಂಸವಿರುವುದು ಪತ್ತೆಯಾಗಿದೆ. ಗೋಮಾಂಸ ಸಾಗಾಟ ನಡೆಸುತ್ತಿದ್ದ ಮೊಹಮದ್ ತೌಶೀಪ್, ಅಬ್ದುಲ್ ಅಜೀಜ್ ಹಾಗೂ ಸುಲೇಮಾನ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರ ಬಳಿಯಿದ್ದ 19 ಕೆ.ಜಿ 840 ಗ್ರಾಂ ತೂಕದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಕೊಪ್ಪ ಠಾಣೆಯ ಪಿಎಸೈ ಶ್ರೀನಾಥ್ ರೆಡ್ಡಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಹಸುವಿಗೆ ಲಾರಿಯಿಂದ ಗುದ್ದಿ ಎಸ್ಕೇಪ್ ಆಗಲು ಯತ್ನಿಸಿದವರಿಂದಲೇ ಅಂತ್ಯ ಸಂಸ್ಕಾರ ಮಾಡಿಸಿದ ಗ್ರಾಮಸ್ಥರು :
ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಾವಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಲಾರಿ ಓಡಿಸುತ್ತಿದ್ದ ಚಾಲಕನೋರ್ವ ಹಸುವಿಗೆ ಗುದ್ದಿದ ಪರಿಣಾಮ ಹಸು ಸ್ಥಳದಲ್ಲೇ ಸಾವನ್ನಪ್ಪಿತ್ತು ಆದರೆ ಇದನ್ನು ಪರಿಗಣಿಸದೇ ಚಾಲಕ ನಿರ್ಲಕ್ಷ್ಯವಹಿಸಿ ಸ್ಥಳದಿಂದ ಹಿಟ್ ಅಂಡ್ ರನ್ ಆಗಿದ್ದಾನೆ. ಈ ಘಟನೆಯನ್ನು ಕಂಡ ಕಾವಡಿಯ ಗ್ರಾಮಸ್ಥರು ತಮ್ಮ ವಾಹನವನ್ನು ತೆಗೆದುಕೊಂಡು ಲಾರಿಯ ಬೆನ್ನಟ್ಟಿ ಲಾರಿಯನ್ನು ತಡೆದಿದ್ದಾರೆ. ಕೂಡಲೇ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಆತನನ್ನು ಹಾಗೂ ಲಾರಿಯಲ್ಲಿದ್ದ ನಿರ್ವಾಹಕರನ್ನು ಘಟನಾ ಸ್ಥಳಕ್ಕೆ ಕರೆಸಿ, ಹಸುವಿನ ಮಾಲೀಕನ ಜಾಗದಲ್ಲಿ ಗುಂಡಿತೋಡಿಸಿ ಅಂತ್ಯ ಸಂಸ್ಕಾರವನ್ನು ಮಾಡಿಸಿದ್ದಾರೆ.
ಪಾದಯಾತ್ರೆಯಲ್ಲಿ ಕನ್ನಡ ಧ್ವಜ ಬಳಕೆ ವಿರುದ್ದ ಗೃಹ ಸಚಿವರು ಗರಂ :
ತೀರ್ಥಹಳ್ಳಿ : ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಪ್ರತಿಭಟನಾ ಪಾದಯಾತ್ರೆಯಲ್ಲಿ ಕನ್ನಡ ಧ್ವಜವನ್ನು ನೆಲಕ್ಕೆ ಬೀಳಿಸಿ ಅವಮಾನ ಮಾಡಿರುವ ಕುರಿತು ಮಾತನಾಡಿರುವ ಗೃಹ ಸಚಿವರು, ಇದು ಅನವಶ್ಯಕ ರಾಜಕೀಯ ನೆಡೆ. ರಾಜಕೀಯ ಹುನ್ನಾರಕ್ಕೋಸ್ಕರ ಮಾಡಿದ ಪ್ರತಿಭಟನೆ ಇದಾಗಿದೆ. ಹೋರಾಟಕ್ಕೂ ಕನ್ನಡದ ಪಠ್ಯಕ್ಕೂ ಸಂಬಂಧವೇ ಇಲ್ಲ. ಕನ್ನಡದ ಪಠ್ಯ ಪುಸ್ತಕವೆಲ್ಲವೂ ಚೆನ್ನಾಗಿಯೇ ಬಂದಿವೆ ಎಂದು ವಾಗ್ದಾಳಿ ನಡೆಸಿದರು, ಈಗಾಗಲೇ ಅದರ ಬಗ್ಗೆ ವಿವರಣೆಯನ್ನು ಶಿಕ್ಷಣ ಸಚಿವರು ಕೊಟ್ಟಿದ್ದಾರೆ ಇದೊಂದು ರಾಜಕೀಯ ಲಾಭ ಪಡೆಯುವ ಸಲುವಾಗಿ ನಡೆಸಿರುವ ಪಾದಯಾತ್ರೆ ಎಂದರು.
ಹಾಸನ : ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದ ವ್ಯಕ್ತಿ ಸೆರೆ
ಹಾಸನದ ಹೊಸೂರು ಡಾಬಾ ಹಿಂಭಾಗದಲ್ಲಿ ಪೊಲೀಸರು ರೌಂಡ್ಸ್ ನಲ್ಲಿದ್ದಾಗ ಅಕ್ರಮವಾಗಿ 26 ವರ್ಷ ಪ್ರಾಯದ ದರ್ಶನ್ ಎಂಬ ಯುವಕನು ಮದ್ಯ ಮಾರಾಟ ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸಿದಾಗ ಆತನು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ಬಂಧಿಸಿ ಆತನ ಬಳಿಯಿದ್ದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.



0 Comments