ಹರಿಹರಪುರ : (ನ್ಯೂಸ್ ಮಲ್ನಾಡ್ ವರದಿ) ಹರಿಹರಪುರದ ಪ್ರಬೋಧಿನಿ ಗುರುಕುಲಕ್ಕೆ ಈ ಬಾರಿ ಆಗಮಿಸುವ ನೂತನ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮವು ಇಂದು ನಡೆಯಿತು.
ನೂತನ ಛಾತ್ರಾ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಶ್ರೀ ಸ್ವಾಮಿ ಜಿತಕಾಮಾನಂದ ಶ್ರೀಗಳು, ಬಾಳೆಹೊನ್ನೂರಿನ ಕೆರೆಹಕ್ಲು ಎಸ್ಟೇಟ್ ಮಾಲೀಕರಾದ ಹೆಚ್.ಬಿ ರಾಜಗೋಪಾಲ್ ಉಪಸ್ಥಿತಿವಹಿಸಿದ್ದರು.
ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಆಮಂತ್ರಿತ ಸದಸ್ಯರಾದ ಕಜಂಪಾಡಿ ಶ್ರೀ ಸುಬ್ರಹ್ಮಣ್ಯ ಭಟ್ ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದರು, ಸಮಾಜದಲ್ಲಿ ಹಿಂದುತ್ವದ ಪುನರುತ್ಥಾನದ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಶಾಖೆಯ ಮೂಲಕ ಮಾಡುತ್ತಿದೆ, ಕಳೆದ ಎರಡು ದಶಕದಲ್ಲಿ ಶಾಖೆಯ ಜೊತೆ ಜೊತೆಗೆ ಅನೇಕ ಆಯಾಮಗಳು ಜೋಡಣೆಯಾದವು ಡಾ.ಭಾರತೀರಮಣಾಚಾರ್ಯ, ನ.ಕೃಷ್ಣಪ್ಪ, ರೋಹಿಡೇಕರ್, ಮುಂತಾದ ತಜ್ಞರ ಸತತ ಪ್ರಯತ್ನದ ಫಲವೇ ಪ್ರಬೋಧಿನೀ ಗುರುಕುಲ.
ಇಂದು ಕರ್ನಾಟಕದಲ್ಲಿ ಸಂಘದ ಆಶ್ರಯದಲ್ಲಿ ಮೂರು ಗುರುಕುಲಗಳು ಕಾರ್ಯನಿರ್ವಹಿಸುತ್ತಿವೆ, ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿ, ಶಿಕ್ಷಕರನ್ನು ಗುರುಕುಲದಲ್ಲಿ ಆಚಾರ್ಯಎನ್ನುತ್ತೇವೆ, ಹೊರಗಿನ ಪ್ರಪಂಚವನ್ನು ನೋಡಿದಾಗ ನಮ್ಮ ದೇಶ ದುರ್ಬಲವಾಗಿದೆ ಅನಿಸುತ್ತದೆ, ಆದರೆ ಭಾರತಕ್ಕೆ ಜನ್ಮದಿನಾಂಕವೇ ಇಲ್ಲ ಆದ್ದರಿಂದ ಭಾರತಕ್ಕೆ ನಾಶದ ದಿನಾಂಕವೂ ಇಲ್ಲ ನಮ್ಮದು ದೇವ ನಿರ್ಮಿತ ದೇಶ ಎಂದರು.
ಭಾರತೀಯರ ಪ್ರತೀಕವಾದ ಹಾಗೂ ಉದಾತ್ತ ಧರ್ಮವಾದ ಹಿಂದೂ ಸನಾತನ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಗುರುಕುಲದಲ್ಲಿ ನಡೆಯುತ್ತಿದೆ, ವಿಜ್ಞಾನ ಬೆಳೆದಂತೆಲ್ಲ ಆಧುನಿಕತೆಯ ಪರಿಣಾಮವಾಗಿ ನಾವು ವೇಷ ಧರಿಸಿ ಬದುಕುವಂತಾಗಿದೆ. ಒಂದರ ನಾಶದಿಂದ ಇನ್ನೊಂದರ ಉದಯ ಎಂಬುದು ಆಧುನಿಕ ವಿಜ್ಞಾನದ ತಿರುಳು. ಆದರೆ ಒಂದರ ಆಧಾರದಲ್ಲಿ ಇನ್ನೊಂದರ ಉದಯ ಎಂಬುದು ಭಾರತದ ನಂಬಿಕೆ ಎಂದರು.
ಸಂಘೇ ಶಕ್ತಿ ಕಲೌಯುಗೇ :
ಕಲಿಯುಗದಲ್ಲಿ ಸಂಘಟನೆಯೇ ನಿಜವಾದ ಶಕ್ತಿ, ಅಂತಹ ಸಂಘಟನೆಯ ಅನೇಕ ಮುಖಗಳಲ್ಲಿ ಈ ಪ್ರಾಚೀನ ಪದ್ದತಿಯಾದ ಗುರುಕುಲವೂ ಒಂದು, ಇಲ್ಲಿ ಆಧ್ಯಾತ್ಮಿಕ ಹಾಗೂ ವೈಚಾರಿಕ ಜ್ಞಾನ ಭಂಡಾರದ ರಕ್ಷಣೆಯೇ ಗುರುಕುಲ ದ ಪರಮಗುರಿ. ಆಧುನಿಕ ವಿದ್ಯಾಸಂಸ್ಥೆಗಳು ಬೆಳೆದಂತೆ ಗುರುಕುಲ ಕೇಂದ್ರಗಳೂ ವಿಕಾಸವಾಗಬೇಕಿದೆ ಈ ನಿಟ್ಟಿನಲ್ಲಿ ಸರ್ವರೂ ಹೆಚ್ಚಿನ ಸಹಕಾರವನ್ನು ನೀಡಬೇಕಿದೆ, ವೈಯಕ್ತಿಕವಾಗಿ ನಮ್ಮ ಏಳಿಗೆಯೊಂದಿಗೆ, ಉನ್ನತಿಯೊಂದಿಗೆ ರಾಷ್ಟ್ರದ ಹಾಗೂ ವಿಶ್ವದ ಉನ್ನತಿ ಸಾಧಿಸಿದಾಗಲೇ ಬದುಕು ಸಾರ್ಥಕವಾಗುತ್ತದೆ. ಅಂತಹ ಸಾರ್ಥಕ ಬದುಕು ಸಾಗಿಸಲು ಬೇಕಾದ ಸಂಸ್ಕಾರಗಳನ್ನು ಪ್ರಬೋಧಿನೀ ಗುರುಕುಲದಲ್ಲಿ ನೀಡಲಾಗುತ್ತಿದೆ ಎಂದರು
ಆಧುನಿಕತೆಯ ಜೊತೆಜೊತೆಗೆ ಪುರಾತನ ಹಾಗೂ ಇಂದಿನ ಸಂಪ್ರದಾಯಗಳನ್ನು ಅಳವಡಿಸಿಕೊಂಡು ಅದರೊಂದಿಗೆ ಸಾಗಿದಾಗ ಮಾತ್ರ ಜೀವನ ಶಾಂತಿಯಿಂದ ಕೂಡಿರುತ್ತದೆ ಹಾಗೂ ಕ್ಷಿಪ್ರಗತಿಯಲ್ಲಿ ಸಾಧಿಸಲು ಶಕ್ಯವಾಗುತ್ತದೆ ಈ ನಿಟ್ಟಿನಲ್ಲಿ ಗುರುಕುಲವು ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ವಿವೇಚನೆಯನ್ನು ಜಾಗೃತಗೊಳಿಸುತ್ತದೆ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯ ಅಭ್ಯಾಗತರಾದ ಆಶ್ರಯ್ ಹೆಚ್.ಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರಭೋದಿನಿ ಟ್ರಸ್ಟ್ ನ ಸದಸ್ಯರು, ಮಾತೆಯರು, ವಿದ್ಯಾರ್ಥಿಗಳು ಹಾಗೂ ಅಧಿಕ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.




0 Comments