ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕುಂಠಿತಗೊಂಡಿದೆ, ಅಧಿಕಾರ ಹೊಂದಿದ ಶಾಸಕರು ಹಾಗೂ ಸಂಸದರು ಜನರಿಗೆ ಸೂಕ್ತವಾದ ಅಭಿವೃದ್ದಿಕಾರ್ಯ ಹಾಗೂ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜನತಾ ಪಕ್ಷದ ಪದಾಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ : ಕಳಪೆ ಕಾಮಗಾರಿಯಿಂದ ಸೇತುವೆ ಕುಸಿತ ; ಸಾರ್ವಜನಿಕರ ಆರೋಪ

ಶೃಂಗೇರಿಯ ಕೆವಿಆರ್ ರಸ್ತೆಯಲ್ಲಿರುವ ಹೋಟೆಲ್ ಅದ್ವೈತ್ ಲ್ಯಾನ್ಸರ್ ನ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಷೇತ್ರ ಜನತಾ ಪಕ್ಷದ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಕ್ಷೇತ್ರದ ಅಭಿವೃದ್ದಿಯ ಕುರಿತು ಮಾತನಾಡಿದ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ ರಾಜೇಂದ್ರ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶಾಸಕರು ಹಾಗೂ ಸಂಸದರು ವಿಫಲರಾಗಿದ್ದಾರೆ. ಅತ್ಯವಶ್ಯಕವಾದ ನೂರು ಹಾಸಿಗೆಗಳ ಆಸ್ಪತ್ರೆ, 110 ಕೆ.ವಿ ವಿದ್ಯುತ್ ಸ್ಥಾವರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿ ಕುರಿತಾದ ಸಮಸ್ಯೆ, 24 ಗಂಟೆ ಕುಡಿಯುವ ನೀರು ಸೇರಿದಂತೆ ಈ ಭಾಗದ ಜನರಿಗೆ ಗಂಭೀರವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ, ಅವರ ನಿರ್ಲಕ್ಷ್ಯದಿಂದಾಗಿ ಅನೇಕ ಸಮಸ್ಯೆಗಳು ತಲೆದೋರಿದೆ ಎಂದರು. 

ಅಂತೆಯೇ ಈ ಬಾರಿ ಜನರು ಮೂರೂ ಪಕ್ಷಗಳನ್ನು ಬದಿಗಿಟ್ಟು ನಮ್ಮ ಜನತಾ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ಧೃಢ ವಿಶ್ವಾಸವಿದೆ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವೂ ಸಂಪೂರ್ಣ ಬಹುಮತಗಳಿಸಲು ಸಾಧ್ಯವಿಲ್ಲ ಕನಿಷ್ಠ 23 ಶಾಸಕರನ್ನು ಈ ಬಾರಿ ವಿಧಾನಸಭೆಗೆ ಕಳುಹಿಸುವುದು ಜನತಾ ಪಕ್ಷದ ಧೃಢ ಸಂಕಲ್ಪವಾಗಿದೆ ಎಂದರು ಹಾಗೂ ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಶ್ರಮವಹಿಸುವುದಾಗಿ ತಿಳಿಸಿದರು. 

ಜನತಾ ಪಕ್ಷದ ಕ್ಷೇತ್ರಾಧ್ಯಕ್ಷರಾಗಿ ಆಯ್ಕೆಗೊಂಡ ಕೆ.ಎಸ್ ವೆಂಕಪ್ಪಾಚಾರ್ಯ ರಾಜ್ಯದಲ್ಲಿ ನಾಲ್ಕನೇ ಶಕ್ತಿಯಾಗಿ ಜನತಾ ಪಕ್ಷ ಹೊರಹೊಮ್ಮಲಿದ್ದು ಶೃಂಗೇರಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ ರಾಜೇಂದ್ರ, ರಾಜ್ಯ ಉಪಾಧ್ಯಕ್ಷ ಹೊನ್ನೇಗೌಡ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಜಿತ್ ಗೌಡ ಬೇಸೂರು, ಮೈಸೂರು ಜಿಲ್ಲಾಧ್ಯಕ್ಷ ರಾಮಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಲುಷಿತ ನೀರು ಸೇವಿಸಿ ವ್ಯಕ್ತಿಯ ದುರ್ಮರಣ :

ಶಿವಮೊಗ್ಗ :  ಕಲುಷಿತ ನೀರು ಸೇವಿಸಿ ಕೂಲಿ ಕಾರ್ಮಿಕನೋರ್ವ  ಮೃತಪಟ್ಟಿರುವ  ಪ್ರಕರಣ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಮಂಡ್ಲಿ-ಕಲ್ಲೂರು ಕೈಗಾರಿಕಾ ಪ್ರದೇಶದ ಬಳಿಯ ಶಾರದಾ ನಗರದಲ್ಲಿನ ರಘು ಅವರ ಕುಟುಂಬ ಶಾರದಾ ನಗರದ ಮುಖ್ಯರಸ್ತೆಯಲ್ಲಿ ವಾಸವಿದ್ದಾರೆ. ಫ್ಯಾಕ್ಟರಿಯಲ್ಲಿ ವೆಲ್ಡಿಂಗ್ ಮೆಕ್ಯಾನಿಕ್ ಆಗಿದ್ದ ರಘು ಕೆಲಸ ಅರಸಿ ದಶಕಗಳ ಹಿಂದೆ ಒಡಿಶಾದಿಂದ ಶಿವಮೊಗ್ಗಕ್ಕೆ ಬಂದಿದ್ದರು.  ಜೂನ್ 12 ರಂದು ಸಂಜೆ ವಾಂತಿ ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದ ರಘು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಲುಷಿತ ನೀರು ಸೇವಿಸಿದ್ದ ಕಾರ್ಮಿಕ ರಘು ಅವರ ಪತ್ನಿ ಅನುಸೂಯಾ ಅವರಿಗೂ ವಾಂತಿ ಆಗಿದೆ. ಅವರು ಸ್ಥಳೀಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಕಾವ್ಯ ಅಕ್ಕನ ಮನೆಯಲ್ಲಿ ಓದುತ್ತಿದ್ದು, ಮಗ ಕಾರ್ತಿಕ್ ಕೆಲಸದ ಮೇಲೆ ಹೊರಗೆ ಹೋಗಿದ್ದರಿಂದ ಅವರಿಗೆ ತೊಂದರೆಯಾಗಿಲ್ಲ ಎಂದು ಅನುಸೂಯಾ ಹೇಳಿದರು.

ಈ ಭಾಗದಲ್ಲಿ  ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆ, ಜೆಸಿಬಿಯಿಂದ ಚರಂಡಿ ದುರಸ್ತಿ ವೇಳೆ ಪಕ್ಕದಲ್ಲಿಯೇ ಹಾಯ್ದು ಹೋಗಿರುವ  ಪೈಪ್ ಒಡೆದು ಚರಂಡಿಯಲ್ಲಿನ ಕೈಗಾರಿಕೆಯ ತ್ಯಾಜ್ಯ ಕುಡಿಯುವ ನೀರಿನ ಪೈಪ್‌ನಲ್ಲಿ ಸೇರಿಕೊಂಡಿದೆ ಎಂದು ಸಾರ್ವಜನಿಕರಿಂದ ಕೇಳಿ ಬಂದಿದೆ.

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6

ರಾಜ್ಯದ ಅನೇಕ ಭಾಗಗಳಲ್ಲಿ ಈ ರೀತಿಯ ನೀರಿನ ಸಮಸ್ಯೆ ತಲೆದೋರಿದ್ದು, ಘಟನಾ ಕುರಿತಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು, ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳುಂಟಾಗದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಕೋರಿದ್ದಾರೆ.